ಶಿವಮೊಗ್ಗ, ಕೆಲವೇ ಕೆಲವು ದೊಡ್ಡ ದೊಡ್ಡ ಕಾರ್ಪೊರೇಟ್ ಕಂಪನಿಗಳ ಲಾಭದ ಹಿತರಕ್ಷಣೆಗಾಗಿ ಕೋಟ್ಯಾಂತರ ಭಾರತೀಯರ ಹಿತವನ್ನು ಬಲಿಗೊಡುವುದನ್ನು ಕೂಡಲೇ ಭಾರತ ಸರ್ಕಾರ ನಿಲ್ಲಿಸಬೇಕು ಹಿತಕ್ಕೆ ವಿರುದ್ಧವಾಗಿರುವ ಬ್ರಿಟನ್ ಜೊತೆಗಿನ ಒಪ್ಪಂದವನ್ನು ಅಮಾನುತು ಮಾಡಬೇಕು ಹಾಗೂ ಸಾಮ್ರಾಜ್ಯಶಾಹಿ ಅಮೇರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ರವರ ಸುಂಕ ಹೇರಿಕೆ ಹಾಗೂ ದಂಡದ ಬೆದರಿಕೆಯನ್ನು ಸಮರ್ಥವಾಗಿ ಎದುರಿಸಿ ಭಾರತದ ಸಾರ್ವಭೌಮತ್ವವನ್ನು ಕಾಪಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿ, ಮಹಾನ್ ಸ್ವಾತಂತ್ರ್ಯ ಚಳವಳಿಯ ಐತಿಹಾಸಿಕ ಭಾರತ ಬಿಟ್ಟು ತೊಲಗಿ ಚಳುವಳಿಯ 83ನೇ ವಾರ್ಷಿಕ ಆಚರಣೆಯ ಹಿನ್ನೆಲೆಯಲ್ಲಿ ದೇಶದಾದ್ಯಂತ ಬೃಹತ್ ಪ್ರತಿಭಟನೆಯನ್ನು ಆ.13 ರಂದು ನಡೆಸುವಂತೆ ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಜಂಟಿಯಾಗಿ ಕರೆ ನೀಡಿವೆ.
ಸುದ್ದಿಗೋಷ್ಠಿಯಲ್ಲಿ ಶನಿವಾರ ಈ ಬಗ್ಗೆ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ರಾಘವೇಂದ್ರ ಮತ್ತು ಹೋರಾಟಗಾರ ಕೆ ಎಲ್ ಅಶೋಕ್ , ಈ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಲಾಗುವುದು. ರಾಜ್ಯಾದಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಯಶಸ್ವಿಗೊಳಿಸಲು ರಾಜ್ಯದ ರೈತ-ಕಾರ್ಮಿಕದಲಿತ-ಮಹಿಳಾ-ವಿದ್ಯಾರ್ಥಿ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ಕೋರಿದರು.
ಹಕ್ಕೊತ್ತಾಯಗಳು
ಅಮೆರಿಕ ಜೊತೆ ಸಮಗ್ರ ಆರ್ಥಿಕ ಹಾಗೂ ವಾಣಿಜ್ಯ ಒಪ್ಪಂದವನ್ನಾಗಲಿ ಹಾಗೂ ಮುಕ್ತ ವ್ಯಾಪಾರ ಒಪ್ಪಂದವನ್ನಾಗಲಿ ಮಾಡಿಕೊಳ್ಳಬಾರದು . ಅಮೇರಿಕಾ ವಿಧಿಸಿರುವ ಶೇಕಡಾ 25 ರಷ್ಟು ಆಮದು ಸುಂಕವನ್ನು ಪ್ರತಿಭಟಿಸಬೇಕು.ಯುನೈಟೆಡ್ ಕಿಂಗ್ಲಮ್ (ಬ್ರಿಟನ್) ಜೊತೆಗಿನ ಸಮಗ್ರ ಆರ್ಥಿಕ ಹಾಗೂ ವಾಣಿಜ್ಯ ಒಪ್ಪಂದ (CETA)ವು ಹೈನುಗಾರಿಕೆ, ತರಕಾರಿಗಳು ಮತ್ತು ಹಣ್ಣುಗಳು ಸೇರಿದಂತೆ ಸಂಸ್ಕರಿಸಿದ ಆಹಾರಗಳ ಆಮದನ್ನು ಹೆಚ್ಚಿಸುತ್ತದೆ. ಇದು ಭಾರತದಲ್ಲಿ ಆಹಾರ ಸಂಸ್ಕರಣೆಯಲ್ಲಿ ವಿದೇಶಿ ನೇರ ಹೂಡಿಕೆ ಹೆಚ್ಚಳಕ್ಕೆ ಕಾರಣವಾಗಿ, ನಮ್ಮ ದೇಶದ ರೈತರ ಗಳಿಕೆ ಮತ್ತು ಸಣ್ಣ ಕೃಷಿ ವ್ಯಾಪಾರ ಸಂಸ್ಥೆಗಳ ಗಳಿಕೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಎಂದು ವಿವರಿಸಿದರು.
ಕುಲಾಂತರಿ ತಳಿಗಳ ಬೆಳೆಗಳ ಆಹಾರಗಳು, ಆಹಾರ ಧಾನ್ಯಗಳು, ಸೋಯಾ, ಜೋಳ, ಹತ್ತಿ ಇತ್ಯಾದಿಗಳನ್ನು ಬೃಹತ್ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಲು ಅಮೇರಿಕಾದ ಜೊತೆ ಮಾತುಕತೆಗಳು ನಡೆಯುತ್ತಿವೆ. ಅಲ್ಲದೇ ಭಾರತದ ಆರ್ಥಿಕತೆ ಒಳಗೆ ಅನಿಯಂತ್ರಿತವಾಗಿ ಬಹುರಾಷ್ಟ್ರೀಯ ಕಂಪನಿಗಳ ಪ್ರವೇಶವನ್ನು ಉತ್ತೇಜಿಸಲಾಗುತ್ತಿದೆ. ಇದು ಕೂಡಲೇ ನಿಲ್ಲಬೇಕು ಎಂದು ಒತ್ತಾಯಿಸಿದರು.
ಏಕಪಕ್ಷೀಯವಾಗಿ ಅಮೇರಿಕ ಭಾರತದ ಮೇಲೆ ವಿಧಿಸಿರುವ ಶೇಕಡಾ 25 ರಷ್ಟು ಸುಂಕ ನಮ್ಮ ಸಾರ್ವಭೌಮತ್ವದ ಮೇಲಿನ ಆಕ್ರಮಣವಾಗಿದೆ ಎಂದರು.
ಕೃಷಿ ಮಾರುಕಟ್ಟೆ ಕುರಿತ ರಾಷ್ಟ್ರೀಯ ನೀತಿಯ ಚೌಕಟ್ಟನ್ನು ಮತ್ತು ಹೊಸ ರಾಷ್ಟ್ರೀಯ ಸಹಕಾರ ನೀತಿಯನ್ನು ವಿರೋಧಿಸಬೇಕು. ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಯನ್ನು ಖಾತರಿಪಡಿಸಬೇಕು. ಸಮಗ್ರ ಸಾಲ ಮನ್ನಾ ನೀತಿ ಜಾರಿಮಾಡಬೇಕು, ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗಟ್ಟಬೇಕು. ಬಲವಂತದ ಭೂಸ್ವಾಧೀನ ಕಾಯ್ದೆ ಸಂಪೂರ್ಣ ನಿಲ್ಲಬೇಕು. ವಿದ್ಯುತ್ ಖಾಸಗೀಕರಣ ಮಾಡಬಾರದೆಂದು ಆಗ್ರಹಿಸಿದರು.