ಶಿವಮೊಗ್ಗ ನಗರದ ಹೊರವಲಯದಲ್ಲಿ ಇತ್ತೀಚಿಗೆ ಬೊಮ್ಮನಕಟ್ಟೆಯ ಕೆರೆ ಏರಿ ಮೇಲೆ ನಡೆದಿದ್ದ ರೌಡಿ ಶೀಟರ್ ಅವಿನಾಶ್ (32) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿನೋಬನಗರ ಠಾಣೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಬೊಮ್ಮನಕಟ್ಟೆ ಬಡಾವಣೆ ನಿವಾಸಿಗಳಾದ ಪ್ರವೀಣ್ (35), ಆನಂದ್ (35), ಸುನೀಲ್ (30), ಜಿತೇಂದ್ರ (28) ಹಾಗೂ ಕಿರಣ್ (34) ಬಂಧಿತರು. ಆರೋಪಿಗಳೆಲ್ಲರು ಕೃಷಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಕೊಲೆಗೀಡಾದ ಅವಿನಾಶ್ ಸಂಬಂಧಿಗಳು ಹಾಗೂ ಪರಿಚಯಸ್ಥರಾಗಿದ್ದಾರೆ ಎಂಬ ಮಾಹಿತಿಯಾಗಿದೆ.

ಎರಡು ದಿನಗಳ ಹಿಂದೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಲಯದ ಮುಂಭಾಗ ಪೊಲೀಸರು ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಮೂರು ದಿನಗಳ ಕಾಲ ತಮ್ಮ ವಶಕ್ಕೆ ಪಡೆದಿದ್ದಾರೆ. ಇನ್ಸ್’ಪೆಕ್ಟರ್ ಸಂತೋಷ್ ಕುಮಾರ್ ನೇತೃತ್ವದ ಪೊಲೀಸ್ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಸಫಲವಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ.
ಹಳೇ ಬೊಮ್ಮನಕಟ್ಟೆ ಮೊದಲನೇ ತಿರುವಿನ ನಿವಾಸಿಯಾದ ರೌಡಿ ಶೀಟರ್ ಅವಿನಾಶ್ ಎಂಬಾತ, ಜೂ.21 ರಾತ್ರಿ ಮನೆಯಿಂದ ತೆರಳಿದ್ದ. ನಂತರ ಮನೆಗೆ ಹಿಂದಿರುಗಿರಲಿಲ್ಲ. ಜೂ. 22 ರ ಮುಂಜಾನೆ ಬೊಮ್ಮನಕಟ್ಟೆ ಕೆರೆ ಏರಿ ಸಮೀಪ ಅವಿನಾಶ್ ಮೃತದೇಹ ಪತ್ತೆಯಾಗಿತ್ತು. ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಲಾಗಿತ್ತು.
ಈ ಕುರಿತಂತೆ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೊಲೆಗೀಡಾದ ಅವಿನಾಶನು ಆರೋಪಿಯೋರ್ವನ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕೊಲೆ ಮಾಡಲಾಗಿದೆ ಎಂಬ ಅಂಶವನ್ನು, ಪೊಲೀಸರ ವಿಚಾರಣೆ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.