ಶಿವಮೊಗ್ಗ ಜಿಲ್ಲೆಯ ಪ್ರತಿಷ್ಠಿತ ಡಿವಿಎಸ್ ಸಂಸ್ಥೆಯ ಕನ್ನಡ ಉಪನ್ಯಾಸಕರಾದ ಶ್ರೀ ಸಂದೇಶ್ ನಾಡಿಗ್ ಅವರ ಚೊಚ್ಚಲ ಪುಸ್ತಕ ಓದುಗಾರಿಕೆಯ ಆಯಾಮಗಳು ಪುಸ್ತಕದ ಬಿಡುಗಡೆ ಸಮಾರಂಭವು ಡಿವಿಎಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಸಿಂಗಾರ ಸಭಾಂಗಣದಲ್ಲಿ ದಿನಾಂಕ: 24.05 .2025 ರ ಶನಿವಾರ ಸಂಜೆ ನೆರವೇರಿತು.
ಈ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಡಿವಿಎಸ್ ಸಂಸ್ಥೆಯ ಅಧ್ಯಕ್ಷರಾದ ಕೆ.ಎನ್. ರುದ್ರಪ್ಪ ಕೊಳಲೆ, ಮಾತನಾಡಿ ಶಿಕ್ಷಕರು ತಮ್ಮ ವೃತ್ತಿ ಜೀವನದಲ್ಲಿ ಹೊಸ ಹೊಸ ಮೈಲಿಗಲ್ಲನ್ನು ದಾಟಬೇಕು ಮತ್ತು ಪ್ರತಿಯೊಬ್ಬ ಶಿಕ್ಷಕರೂ ಒಂದೊಂದು ಪುಸ್ತಕ ಬರೆಯುವಷ್ಟು ಜ್ಞಾನವಂತರಾಗಿದ್ದು ಹೊಸ ಹೊಸ ಆಯಾಮಗಳಲ್ಲಿ ಪುಸ್ತಕ ಬರೆಯಬೇಕು ಎಂದು ಕರೆ ನೀಡಿದರು.
ಉಪಾಧ್ಯಕ್ಷರಾದ ಎಸ್. ಪಿ. ದಿನೇಶ್, ಮಾತನಾಡಿ ಶಿಕ್ಷಕರು ಹೇಗಿರಬೇಕು, ಬೋಧನಾ ವಿಷಯಕ್ಕೆ ಯಾವ ಬಗೆಯಲ್ಲಿ ಪೂರ್ವ ತಯಾರಿ ಮಾಡಿಕೊಳ್ಳಬೇಕು, ಶಿಕ್ಷಕರ ಸಮವಸ್ತ್ರದಲ್ಲಿ ಶಿಸ್ತನ್ನು ಹೇಗೆ ಕಾಪಾಡಿಕೊಳ್ಳುವುದು ಎಂದು ಈ ಪುಸ್ತಕದಲ್ಲಿ ಮಾಹಿತಿ ನೀಡಲಾಗಿದ್ದು , ಪ್ರತಿಯೊಬ್ಬ ಶಿಕ್ಷಕರೂ ಈ ಪುಸ್ತಕವನ್ನು ಅಭ್ಯಸಿಸಿ ವೃತ್ತಿಯಲ್ಲಿ ಪಾಲನೆ ಮಾಡಿಕೊಳ್ಳಲು ಪುಸ್ತಕವು ಅರ್ಹವಾಗಿದೆ ಎಂದು ಅಭಿಪ್ರಾಯ ಪಟ್ಟರು.

ಕಾರ್ಯದರ್ಶಿಗಳಾದ ಎಸ್ ರಾಜಶೇಖರ್, ಮಾತನಾಡಿ ಸಂದೇಶ ನಾಡಿಗ್ ರವರ ಓದುಗಾರಿಕೆಯ ಆಯಾಮಗಳು ಪುಸ್ತಕವು ಶಿಕ್ಷಕ ವರ್ಗಕ್ಕೆ ಸೂಕ್ತ ಸಲಹೆ ಹಾಗೂ ಮಾರ್ಗದರ್ಶನವನ್ನು ನೀಡುವಂತದ್ದು ಹಾಗೂ ಪುಸ್ತಕವು ಪ್ರೌಢಶಾಲಾ ಶಿಕ್ಷಕರುಗಳು ಹಾಗೂ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಬರೆದಿರುವುದರಿಂದ ಈ ವರ್ಗಗಳಿಗೆ ತುಂಬಾ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಸಂಸ್ಥೆಯ ಸಹ ಕಾರ್ಯದರ್ಶಿಗಳಾದ ಡಾ. ಸತೀಶ್ ಕುಮಾರ್ ಶೆಟ್ಟಿ, ಮಾತನಾಡಿ ಪುಸ್ತಕವು ಉಪಯುಕ್ತ ಮಾಹಿತಿಗಳಿಂದ ಕೂಡಿದ್ದು, ಶಿಕ್ಷಕರುಗಳಿಗೆ, ವಿದ್ಯಾರ್ಥಿಗಳಿಗೆ ಹಾಗೂ ಭಾಷಾ ಬೋಧನೆ ಮಾಡುವ ಉಪನ್ಯಾಸಕರುಗಳಿಗೆ ಉಪಯುಕ್ತ ಮಾಹಿತಿಗಳನ್ನು ನೀಡುತ್ತದೆ ಎಂದರು.
ಈ ಪುಸ್ತಕವನ್ನು ಕುರಿತು ಡಾ. ಡಿ ಬಿ ಶಿವರುದ್ರಪ್ಪ ಸಹಾಯಕ ಪ್ರಾಧ್ಯಾಪಕರು ಮಾತನಾಡಿ ಇದು ಶಿಕ್ಷಣ ಕ್ಷೇತ್ರಕ್ಕೆ ತುಂಬಾ ಉಪಯುಕ್ತವಾಗಿದ್ದು, ಅದರಲ್ಲಿಯೂ ಬಿ.ಇಡಿ ಪ್ರಶಿಕ್ಷಣಾರ್ಥಿಗಳಿಗೆ ಸವಿಸ್ತಾರವಾದ ಮಾಹಿತಿಗಳನ್ನು ಒಳಗೊಂಡಿದೆ ಎಂದು ತಿಳಿಸಿದರು.
ಡಾ. ಮಧು ಜಿ., ಪ್ರಾಚಾರ್ಯರು, ಕುವೆಂಪು ಶತಮಾನೋತ್ಸವ ಬಿ.ಇಡಿ ಕಾಲೇಜು, ಶಿವಮೊಗ್ಗ, ಇವರು ಮಾತನಾಡಿ ಈ ಒಂದು ಪುಸ್ತಕ ಸಂಶೋಧನಾ ವಿಧಾನದಲ್ಲಿ ಪ್ರಯೋಗಕ್ಕೆ ಒಳಪಟ್ಟು ಹೊರಬಂದಿರುವುದರಿಂದ ಹೆಚ್ಚಿನ ಮೌಲ್ಯವುಳ್ಳದ್ದು ಆಗಿರುತ್ತದೆ ಎಂದು ಶ್ಲಾಘಿಸಿದರು.
ಪುಸ್ತಕದ ಲೇಖಕರಾದ ಸಂದೇಶ್ ನಾಡಿಗ್ ಮಾತನಾಡಿ ಈ ಪುಸ್ತಕವನ್ನು ಮಾದರಿ ಓದು, ಮೌನ ಓದು, ಬಾಯ್ದೆರೆ ಓದು, ಅಭಿಪ್ರೇರಣೆ,ಮನೆ ವಾತಾವರಣ ಹಾಗೂ ಹೊಂದಾಣಿಕೆಗೆ ಸಂಬಂಧಿಸಿದಂತೆ 6 ಪ್ರಕಾರದ ಮನೋವಿಜ್ಞಾನದ ತಳಪಾಯದ ಮೇಲೆ ಬರೆಯಲಾಗಿದೆ ಎಂದು ತಿಳಿಸಿದರು. ಪ್ರೌಢಶಾಲೆಯಲ್ಲಿ ಭಾಷಾ ಬೋಧನೆ ತರಗತಿಯು 45 ನಿಮಿಷದ ಅವಧಿಯಲ್ಲಿ 20 ನಿಮಿಷದ ಚಟುವಟಿಕೆ ನಡೆಯುತ್ತದೆ. ಇಲ್ಲಿ ಪಾಠವನ್ನು ಶಿಕ್ಷಕ ಅಥವಾ ಪ್ರಶಿಕ್ಷಕರು ಮಾದರಿ ಓದನ್ನು ಮಾಡುತ್ತಾರೆ. ವಿದ್ಯಾರ್ಥಿಗಳು ಶಿಕ್ಷಕರು ಮಾಡಿದ ಮಾದರಿ ಓದಿನ ರೀತಿಯಲ್ಲಿಯೇ ಮೌನ ಓದನ್ನು ಮಾಡುತ್ತಾರೆ ಹಾಗೂ ವಿದ್ಯಾರ್ಥಿಗಳು ಮಾಡಿದ ಮೌನ ಓದನ್ನು ಪುನಃ ವಿದ್ಯಾರ್ಥಿಗಳಿಂದ ಭಾಯ್ದೆರೆ ಮಾಡಿಸುವುದು ಹೇಗೆ ಎಂಬುದನ್ನು ಈ ಪುಸ್ತಕದಲ್ಲಿ ಸವಿಸ್ತಾರವಾಗಿ ತಿಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ಕಾರ್ಯಕ್ರಮವನ್ನು ಸಂಸ್ಥೆಯ ಶಿಕ್ಷಕರಾದ ಪ್ರಶಾಂತ್ ಬೆನಕನಟ್ಟೆ ನಿರೂಪಿಸಿದರು, ಶ್ರೀಮತಿ ವಸುಧ ಸಂದೇಶ್ ನಾಡಿಗ್ ಪ್ರಾರ್ಥಿಸಿದರು ಹಾಗೂ ಶ್ರೀಮತಿ ಜ್ಯೋತಿ ಎನ್ ಎಸ್ ಸ್ವಾಗತಿಸಿ ನಂತರ ವಂದನಾರ್ಪಣೆ ಮಾಡಿದರು.