ಬೌದ್ಧ ಧರ್ಮದ ಅನುಸರಣೆ ಆಚರಣೆಯ ಮೂಲಕ ನಾವು ನಮ್ಮ ಮೂಲ ಧರ್ಮಕ್ಕೆ ಹಿಂತಿರುಗಿದಂತೆ ಎಂದು ನಿವೃತ್ತ ಪ್ರಾಚಾರ್ಯ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿ ಸದಸ್ಯ ಶಿವಬಸಪ್ಪ ತಿಳಿಸಿದರು.ಅವರು ಭದ್ರಾವತಿ ತಾಲೂಕಿನ ಹೊಸ ನಂಜಾಪುರದ ಬುದ್ಧ ದಮ್ಮಂಕುರ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಬುದ್ಧ ಪೂರ್ಣಿಮೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಲಕ್ಷಾಂತರ ಅನುಯಾಯಿಗಳೊಂದಿಗೆ ಬೌದ್ಧ ಧರ್ಮವನ್ನು ಸ್ವೀಕರಿಸಿದ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಇದಕ್ಕೆ ಬಹುದೊಡ್ಡ ಸಾಕ್ಷಿಯಾಗಿದ್ದಾರೆ. ಅಸ್ಪೃಶ್ಯತೆ, ಜಾತಿ ವ್ಯವಸ್ಥೆ , ಮೇಲು ಕೀಳುಗಳಿಂದ ಕೂಡಿದ ಹಿಂದೂ ಧರ್ಮವನ್ನು ತೊರೆದ ಡಾ. ಅಂಬೇಡ್ಕರ್ ಸ್ವಾತಂತ್ರ್ಯ ಸಮಾನತೆ ಹಾಗೂ ಸಹೋದರತೆಗಳಿಂದ ಕೂಡಿದ ಬೌದ್ಧ ಧರ್ಮ ಸ್ವೀಕರಿಸುವ ಮೂಲಕ ಅವರು ತಮ್ಮ ಮೂಲ ಧರ್ಮಕ್ಕೆ ಹಿಂತಿರುಗಿದ್ದಾರೆ ಎಂದು ಅವರು ಹೇಳಿದರು.
ಮುಖ್ಯ ಪ್ರವಾಚಕರಾಗಿ ಆಗಮಿಸಿ ಮಾತನಾಡಿದ, ಕುವೆಂಪು ವಿಶ್ವವಿದ್ಯಾನಿಲಯದ ಶಿಕ್ಷಣ ಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿ ಸಂದೀಪ್ ಚೌಲಿಹಳ್ಳಿ ಬುದ್ಧ ಪೂರ್ಣಿಮಾ ಜಯಂತಿ 2025 ‘ನಿನಗೆ ನೀನೆ ಬೆಳಕು’ ಎಂಬ ಬುದ್ಧರ ಶಾಶ್ವತ ಸಂದೇಶದ ಪ್ರಭಾವವು ಇಂದು ಹೆಚ್ಚು ಅಗತ್ಯವಿದೆ. ಇಂದಿನ ಸಮಾಜದಲ್ಲಿ ಬುದ್ಧರ ಸಂದೇಶ ಅಂದರೆ’ ನಿನಗೆ ನೀನೆ ಬೆಳಕು’ ಎಂಬ ಸಂದೇಶವನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬುದ್ಧ ದಮ್ಮಾಂ ಕುರ ಟ್ರಸ್ಟಿನ ಕಾರ್ಯದರ್ಶಿ ಶ್ರೀನಿವಾಸ್ ವಹಿಸಿದ್ದರು.ಜಿಲ್ಲಾ ಛಲವಾದಿ ಮಹಾಸಭಾ ಅಧ್ಯಕ್ಷ ಪೇಪರ್ ಸುರೇಶ್, ನಿವೃತ್ತ ಅಬಕಾರಿ ಇನ್ಸ್ಪೆಕ್ಟರ್ ಸಾವಕ್ಕನವರ್ ಸೇರಿದಂತೆ ಅನೇಕ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕ ರಘು ಎಲ್ಲರನ್ನು ಸ್ವಾಗತಿಸಿ ವಂದಿಸಿದರು. ದಮ್ಮಾಧಿಕಾರಿ ಶೇಖರ್ ನಾಯಕ್ ಅವರು ಬುದ್ಧ ವಂದನೆ ಸಲ್ಲಿಸಿದರು.