ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯ ಕೆರೆಗೆ ಪಲ್ಟಿಯಾಗಿದ್ದು, ಚಾಲಕ ಅಪಾಯದಿಂದ ಪಾರಾದ ಘಟನೆ ಮಂಗಳವಾರ ರಾತ್ರಿ ತೀರ್ಥಹಳ್ಳಿ ತಾಲೂಕಿನ ಮಾಳೂರು ಪೊಲೀಸ್ ಠಾಣಾ ವ್ಯಾಪ್ತಿಯ ಬಾಳಗಾರು ಸಮೀಪ ನಡೆದಿದೆ.ತೀರ್ಥಹಳ್ಳಿಯಿಂದ ಶಿವಮೊಗ್ಗದೆಡೆಗೆ ಆಗಮಿಸುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ಕೆರೆಗೆ ಬಿದ್ದಿದ್ದೆಂದು ಗುರುತಿಸಲಾಗಿದೆ.
ಕಾರು ಚಾಲಕ ಶಿವಮೊಗ್ಗದ ಆರ್.ಎಂ.ಎಲ್ ನಗರದ ನಿವಾಸಿಯಾಗಿದ್ದಾನೆ ಎಂದು ಹೇಳಲಾಗಿದೆ.ಬಾಳಗಾರು ಕೆರೆ ತಿರುವಿನ ಬಳಿ, ಎದುರಿನಿಂದ ಆಗಮಿಸಿದ ಕೆಎಸ್ಆರ್’ಟಿಸಿ ಬಸ್ ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ, ಕೆರೆಗೆ ಕಾರು ಬಿದ್ದಿದೆ ಎಂದು ತಿಳಿದುಬಂದಿದೆ.
ಸರ್ಕಾರಿ ಬಸ್ ನಲ್ಲಿದ್ದ ಪ್ರಯಾಣಿಕರು, ಕಾರಿನಲ್ಲಿದ್ದ ಚಾಲಕನನ್ನು ರಕ್ಷಿಸಿ ಹೊರ ತಂದಿದ್ದಾರೆ ಎಂದು ಹೇಳಲಾಗಿದೆ. ಘಟನೆಯ ಕುರಿತಂತೆ ಹೆಚ್ಚಿನ ವಿವರಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ.