ಶಿವಮೊಗ್ಗ ಜಿಲ್ಲೆಯ, ಅಡಿಕೆ ಬೆಳೆಗಾರರನ್ನು ಬೆಂಬಲಿಸುವ ಹಾಗೂ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅಡಿಕೆಕೊಯ್ಲು ಉಪಕರಣಗಳ ಮೇಲಿನ ಸಹಾಯಧನವನ್ನು ಕೇಂದ್ರ ಸರಕಾರ ಹೆಚ್ಚಿಸಿಸುವ ಮೂಲಕ ಆತ್ಯಾಧುನಿಕ ಕೃಷಿ ಉಪಕರಣಗಳನ್ನು ಕೈಗೆಟುಕುವಂತೆ ಮಾಡಿದೆ ಎಂದು ಸಂಸದ ಬಿ ವೈ ರಾಘವೇಂದ್ರ ಹೇಳಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಸಾಗರ ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘವು ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಭಾಗವಹಿಸಿದ್ದ ಕೇಂದ್ರ ಸರ್ಕಾರದ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ರೈತರನ್ನು ಬೆಂಬಲಿಸಲು ಅಡಿಕೆ ಕೊಯ್ಲು ಉಪಕರಣಗಳ ಮೇಲಿನ ಸಹಾಯಧನವನ್ನು ಹೆಚ್ಚಿಸುವಂತೆ ಮನವಿಯನ್ನು ಮಾಡಲಾಗಿತ್ತು. ಪತ್ರ ಬರೆದು ಒತ್ತಾಯಿಸಲಾಗಿತ್ತು.
ಕೋರಿಕೆಯ ಮೇರೆಗೆ ಕೇಂದ್ರ ಸರ್ಕಾರವು ಕೇಂದ್ರ ಪುರಸ್ಕೃತ ಕೃಷಿ ಯಾಂತ್ರೀಕರಣ ಉಪ ಅಭಿಯಾನ ಅಡಿ ಟೆಲಿಸ್ಕೊಪಿಕ್ ಟ್ರಿ-ಪ್ರೂನರ್‌ಗೆ ಸಹಾಯಧನದ ಮೊತ್ತವನ್ನು ಪರಿಷ್ಕರಿಸಿ ಆದೇಶ ಹೊರಡಿಸಿದೆ ಎಂದು ತಿಳಿಸಿದ್ದಾರೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಸಣ್ಣ ಅತೀ ಸಣ್ಣ ರೈತರು ಹಾಗೂ ಮಹಿಳೆಯರಿಗೆ ನೀಡಲಾಗುತ್ತಿದ್ದ ಶೇ.೫೦ ರ ಸಹಾಯಧನ ಗರಿಷ್ಠ ಮೊತ್ತ ರೂ.೫ ಸಾವಿರದಿಂದ ರೂ.೪೦ ಸಾವಿರಕ್ಕೆ ಹೆಚ್ಚಿಸಲಾಗಿದೆ. ಅಂತೆಯೇ ಸಾಮಾನ್ಯ ವರ್ಗದ ಕೃಷಿಕರಿಗೆ ನೀಡಲಾಗುತ್ತಿದ್ದ ಶೇ.೪೦ರ ಸಹಾಯಧನದಂತೆ ಗರಿಷ್ಠ ಮೊತ್ತ ರೂ. ೪ ಸಾವಿರದಿಂದ ರೂ.೩೨ ಸಾವಿರಕ್ಕೆ ಹೆಚ್ಚಿಸಿ ಪರಿಷ್ಕರಿಸಿದ ಆದೇಶ ಹೊರಡಿಸಿದೆ ಎಂದು ತಿಳಿಸಿದ್ದಾರೆ.
ಟೆಲಿಸ್ಕೊಪಿಕ್ ಟ್ರಿ-ಪ್ರೂನರ್ ಉಪಕರಣವು ತುಕ್ಕು ರಹಿತ, ಹಗುರವಿರುವುದರಿಂದ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುಲಭವಾಗಿ ಕೊಂಡೊಯ್ಯಬಹುದಾಗಿದೆ.
ಅತೀ ಎತ್ತರಕ್ಕೆ (೨೦ ಅಡಿಯಿಂದ ೮೦ ಅಡಿ) ಔಷಧಿ ಸಿಂಪರಣೆ ಮಾಡುವಾಗ ಕೂಡ ಸ್ಥಿರವಾಗಿರುವುದರಿಂದ ಈ ಉಪಕರಣಕ್ಕೆ ಹೆಚ್ಚಿನ ಬೇಡಿಕೆಯಿದೆ ಎಂದಿದ್ದಾರೆ.