ಶಿವಮೊಗ್ಗ ಜಿಲ್ಲೆಯಲ್ಲಿ ಮೊಬೈಲ್ ನಂಬರನ್ನೇ ಹ್ಯಾಕ್ ಮಾಡಿ ಗೂಗಲ್ ಪೇ, ಫೋನ್ ಪೇ ಮೂಲಕ ಸಾವಿರಾರು ರೂಪಾಯಿ ಹಣ ವರ್ಗಾಯಿಸಿಕೊಂಡು ವಂಚಿಸಲಾಗಿದೆ.
ಶಿವಮೊಗ್ಗದ ವ್ಯಕ್ತಿಯೊಬ್ಬರು (ಹೆಸರು ಗೌಪ್ಯ) ಈ ಸಂಬಂಧ ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಶಿವಮೊಗ್ಗದ ವ್ಯಕ್ತಿ ಕಳೆದ ತಿಂಗಳು ವಿದ್ಯುತ್ ಬಿಲ್ ₹754 ಅನ್ನು ಫೋನ್ ಪೇ ಮೂಲಕ ಪಾವತಿಸಿದ್ದರು, ಅವರ ಬ್ಯಾಂಕ್ ಖಾತೆಯಲ್ಲಿ ₹94,624 ಬ್ಯಾಲೆನ್ಸ್ ಇರುವುದಾಗಿ ತಿಳಿಸಲಾಗಿತ್ತು. ಬೇರೊಂದು ಕಡೆ ಫೋನ್ ಪೇ ಸ್ಕ್ಯಾನರ್ ಬಳಸುವಾಗ ಅದು ಸರಿಯಾಗಿ ಕೆಲಸ ಮಾಡಲಿಲ್ಲ. ಕೆಲವು ದಿನ ಮೊಬೈಲ್ ನೆಟ್‌ವರ್ಕ್ ಕೂಡ ಸಮಸ್ಯೆಯಾಗಿತ್ತು. ಹಾಗಾಗಿ ಫೋನ್ ಪೇ ಕೂಡ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಹಣ ಬಿಡಿಸಿಕೊಳ್ಳಲು ಶಿವಮೊಗ್ಗದ ವ್ಯಕ್ತಿ ಬ್ಯಾಂಕ್‌ಗೆ ತೆರಳಿದ್ದರು. ಆಗ ಅವರ ಬ್ಯಾಂಕ್ ಖಾತೆಯಲ್ಲಿ ಕೇವಲ ₹4,025 ಇತ್ತು. ವಿಚಲಿತರಾದ ವ್ಯಕ್ತಿ ಬ್ಯಾಂಕ್ ಖಾತೆಯ ಸ್ಟೇಟ್‌ಮೆಂಟ್ ತೆಗೆಸಿದ್ದಾರೆ. ಆಗ ಅವರ ಖಾತೆಯಿಂದ ಹಲವು ಭಾರಿ ಯುಪಿಐ ಮೂಲಕ ಒಟ್ಟು ₹90,599 ವರ್ಗಾವಣೆ ಆಗಿರುವುದು ಗೊತ್ತಾಗಿದೆ.
ಇದನ್ನು ಓದಿದ್ದೀರಾ? ಬೀದರ್ | ಪ್ರೀತಿಸುವಂತೆ ಯುವಕನಿಂದ ಕಿರುಕುಳ : ಅಪ್ರಾಪ್ತೆ ನೇಣಿಗೆ ಶರಣು
ಮೊಬೈಲ್ ನಂಬರ್ ಹ್ಯಾಕ್ ಮಾಡಿ, ಯುಪಿಐ ಮೂಲಕ ಹಣ ಕಳ್ಳತನ ಮಾಡಲಾಗಿದೆ ಎಂದು ಆರೋಪಿಸಿ ಶಿವಮೊಗ್ಗದ ವ್ಯಕ್ತಿ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು ಜಯನಗರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.