ಶಿವಮೊಗ್ಗ, ಮುಖ್ಯಮಂತ್ರಿ ಘೋಷಿಸಿದ ರಾಜ್ಯದ ಗೌರವ ಧನ ಮತ್ತು ಕೇಂದ್ರದ ಭಾಗಶಃ ಪ್ರೋತ್ಸಾಹ ಧನ ಸೇರಿ ಮಾಸಿಕ ಕನಿಷ್ಠ ರೂಪಾಯಿ. 10,000 ಗೌರವ ಧನವನ್ನು ಏಪ್ರಿಲ್‌ನಿಂದ ಅನ್ವಯವಾಗುವಂತೆ ಆದೇಶ ಹೊರಡಿಸಬೇಕೆಂದು ಆಗ್ರಹಿಸಿ ಜಿಲ್ಲಾ ಆಶಾ ಕಾರ್ಯಕರ್ತೆಯರು ಮಂಗಳವಾರದಿಂದ ಮೂರು ದಿನದ ಧರಣಿ ಆರಂಭಿಸಿದ್ದು ಬುಧವಾರವೂ ಮುಂದುವರೆದಿದೆ.
ಜಿಲ್ಲಾಧಿಕಾರಿ ಕಚೆರಿ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು ನಂತರ ಅಲ್ಲಿಂದ ಶೀನಪ್ಪ ಶೆಟ್ಟಿ ವೃತ್ತದವರೆಗೆ ಮೆರವಣಿಗೆಯಲ್ಲಿ ಬಂದು ಧರಣಿ ಕುಳಿತರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷೆ ರಾಜೇಶ್ವರಿ, 2025 ರ ಮಾರ್ಚ್ ಬಜೆಟ್‌ನಲ್ಲಿ ಅಂಗನವಾಡಿ ಮತ್ತು ಬಿಸಿಯೂಟ ಕಾರ್ಯಕರ್ತರಿಗೆ 1,000 ರೂಪಾಯಿ, ಪ್ರೋತ್ಸಾಹ ಧನ ಹೆಚ್ಚಳ ಮಾಡಿದಂತೆ ಆಶಾ ಕಾರ್ಯಕರ್ತರಿಗೂ ಸಹ ಹೆಚ್ಚಳ ಮಾಡಿದ್ದರು.
ಆದರೆ ಇಲ್ಲಿಯವರೆಗೆ ಅದು ಜಾರಿ ಬಂದಿಲ್ಲ. ಜನಸಂಖ್ಯೆ ಹೆಚ್ಚಿಸಿ ತರ್ಕಬದ್ಧಗೊಳಿಸುವ ಹೆಸರಿನಲ್ಲಿ ಯಾವುದೇ ಕಾರಣಕ್ಕೂ ಆಶಾ ಕಾರ್ಯಕರ್ತೆಯರನ್ನು ಕೆಲಸದಿಂದ ತೆಗೆಯಬಾರದು. ವೈಜ್ಞಾನಿಕ ಆಶಾ ಪರ್ಫಾರ್ಮೆನ್ಸ್ ಯೋಜನೆಯನ್ನು ಕೈಬಿಡಬೇಕು ಎನ್ನುವುದು ತಮ್ಮ ಬೆಡಿಕೆಯಾಗಿದೆ ಎಂದರು.
ಆಶಾ ಸುಗಮಕಾರರನ್ನು ಸೂಕ್ತ ವೇತನದೊಂದಿಗೆ ಮುಂದುವರಿಸಬೇಕು. ನಿವೃತ್ತ ಆಶಾಗಳಿಗೆ ಪಶ್ಚಿಮ ಬಂಗಾಳ ರಾಜ್ಯದ ಮಾದರಿಯಲ್ಲಿ ಇಡುಗಂಟು ನೀಡಬೇಕು. 2025 ರಲ್ಲಿ ಕೇಂದ್ರ ಸರ್ಕಾರ ಹೆಚ್ಚಿಸಿದ ಆಶಾ ಪ್ರೋತ್ಸಾಹಧನವನ್ನು ರಾಜ್ಯದಲ್ಲಿಯೂ ಜಾರಿಗೊಳಿಸಬೇಕು. ನಗರ ಆಶಾಗಳಿಗೆ ಗೌರವಧನವನ್ನು 2 ಸಾವಿರದಷ್ಟು ಹೆಚ್ಚಿಸಬೇಕು ಎಂದು ಆಗ್ರಹಿಸಿದರು.