ಭಾರತದ ಪ್ರಜಾಪ್ರಭುತ್ವದಲ್ಲಿ ಪಾರದರ್ಶಕತೆ ಮತ್ತು ಪ್ರಜಾಪ್ರಭುತ್ವದ ಬಲವರ್ಧನೆಗೆ ಮಾಹಿತಿ ಹಕ್ಕು ಕಾಯ್ದೆ ಅತ್ಯಂತ ಶಕ್ತಿಶಾಲಿ ಸಾಧನವಾಗಿದೆ. ಈ ಕಾಯ್ದೆಯ ಅಡಿಯಲ್ಲಿ ಪ್ರತಿಯೊಂದು ಸಾರ್ವಜನಿಕ ಪ್ರಾಧಿಕಾರವು ಸಾರ್ವಜನಿಕ ಹಣದ ಬಳಕೆಯ ಕುರಿತ ಮಾಹಿತಿ ಬಹಿರಂಗಗೊಳಿಸುವ ಕಾನೂನುಬದ್ಧ ಜವಾಬ್ದಾರಿಯಿದೆ. ಈ ನಿಟ್ಟಿನಲ್ಲಿ ನಿರ್ಮಿತಿ ಕೇಂದ್ರದಂತಹ ಸಂಸ್ಥೆಗಳು ಸಾರ್ವಜನಿಕ ಅನುದಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ, ಮಾಹಿತಿ ನೀಡುವಲ್ಲಿ ನಿರ್ಲಕ್ಷ್ಯ ತೋರುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಮಾಹಿತಿ ನೀಡಲು ನಿರ್ಮಿತಿ ಕೇಂದ್ರ ನಿರಾಕರಿಸಿದೆ ಎಂದು ಕೆಆರ್‌ಎಸ್ ಪಕ್ಷ ಆರೋಪಿಸಿದೆ. ಶಿವಮೊಗ್ಗದ ನಿರ್ಮಿತಿ ಕೇಂದ್ರವೊಂದರ ಈ ನಡೆ ಸದ್ಯ ಚರ್ಚೆಗೆ ಗ್ರಾಸವಾಗಿದೆ.
ನಿರ್ಮಿತಿ ಕೇಂದ್ರವು ಸಾರ್ವಜನಿಕ ಅನುದಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯಾದ್ದರಿಂದ, ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಮಾಹಿತಿ ನೀಡುವುದು ಇದರ ಕಡ್ಡಾಯ ಕರ್ತವ್ಯವಾಗಿದೆ. ಈ ಸಂಸ್ಥೆಗೆ ಸರ್ಕಾರವೇ ವೇತನ ನೀಡುತ್ತದೆ. ಎಲ್ಲಾ ಯೋಜನೆಗಳು ಸರ್ಕಾರದ ಯೋಜನೆಗಳಾಗಿವೆ ಹಾಗೂ ಹಲವು ಇಲಾಖೆಗಳ ಅನುದಾನಗಳಿಂದ ಕಾರ್ಯನಿರ್ವಹಿಸುತ್ತಿರುವುದರಿಂದ, ಇದು ಸಾರ್ವಜನಿಕ ಪ್ರಾಧಿಕಾರವೆಂಬ ಮಾನ್ಯತೆಗೆ ಒಳಪಟ್ಟಿರುತ್ತದೆ. RTI ಸೆಕ್ಷನ್ 4(1)(ಎ) ಪ್ರಕಾರ, ಇವರು ತಮ್ಮ ಎಲ್ಲಾ ದಾಖಲೆಗಳನ್ನು ಪಟ್ಟಿ ಮಾಡಿ ನಿರ್ವಹಿಸಬೇಕು ಮತ್ತು RTI ಸೆಕ್ಷನ್ 4(1)(ಬಿ) ಪ್ರಕಾರ, ತಾವು ನಿರ್ವಹಿಸುತ್ತಿರುವ ಯೋಜನೆಗಳು, ಸಿಬ್ಬಂದಿ, ವೆಚ್ಚ, ಗುತ್ತಿಗೆದಾರರ ವಿವರಗಳು ಸೇರಿದಂತೆ 17 ಅಂಶಗಳ ಮಾಹಿತಿಯನ್ನು ಪ್ರತಿ ವರ್ಷ ಪ್ರಕಟಿಸಬೇಕು. ಒಂದು ವೇಳೆ ಮಾಹಿತಿ ಪ್ರಕಟಿಸಲು ಹಿಂದೇಟು ಹಾಕಿದರೆ ಕಾನೂನು ಉಲ್ಲಂಘನೆ ಮತ್ತು ಸಾರ್ವಜನಿಕ ಪಾರದರ್ಶಕತೆಗೆ ಧಕ್ಕೆಯಾಗುವ ವಿಷಯವಾಗಿದೆ. ಈಗ ಆಗಿರುವುದು ಅದೇ.
ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಪ್ರತಿಯೊಂದು ಸಾರ್ವಜನಿಕ ಪ್ರಾಧಿಕಾರ ತನ್ನದೇ ಆದ ವೆಬ್ಸೈಟ್ ಹೊಂದಿರಬೇಕು. ಆ ವೆಬ್ಸೈಟ್‌ನಲ್ಲಿ ಸಂಸ್ಥೆಯ ಎಲ್ಲಾ ಪ್ರಮುಖ ಮಾಹಿತಿ, ಯೋಜನೆಗಳು, ವೆಚ್ಚ, ಗುತ್ತಿಗೆದಾರರ ಹೆಸರುಗಳು, ಸಿಬ್ಬಂದಿ ವಿವರಗಳು, ಪ್ರಕಟಣೆಗಳು ಇತ್ಯಾದಿ—ಸಾರ್ವಜನಿಕರಿಗೆ ಲಭ್ಯವಾಗುವ ರೀತಿಯಲ್ಲಿ ಪ್ರಕಟಿಸಬೇಕು. ಇದನ್ನು ಪ್ರಚಾರ ಮಾಡುವ ಜವಾಬ್ದಾರಿಯೂ ಪ್ರಾಧಿಕಾರಕ್ಕೇ ಸೇರಿದೆ. ಈ ಕಾನೂನು ಬದ್ಧ ಹೊಣೆಗಾರಿಕೆ ಎಲ್ಲ ಸರ್ಕಾರಿ ಕಚೇರಿಗಳಿಗೆ ಕಡ್ಡಾಯವಾಗಿದ್ದರೂ, ನಮ್ಮ ರಾಜ್ಯದಲ್ಲಿ ಕೆಲವೇ ಹೆಚ್ಚಿನ ಮಟ್ಟದ ಇಲಾಖೆಗಳು (ಉದಾ: ಪಿಡಬ್ಲ್ಯೂಡಿ, ಮೆಲ್ಪಂಕ್ತಿ) ಈ ನಿಯಮವನ್ನು ಪಾಲಿಸುತ್ತಿವೆ. ಆದರೆ, ತಾಲೂಕು ಮಟ್ಟದ, ಗ್ರಾಮೀಣ ಮಟ್ಟದ ಹಾಗೂ ಇತರ ಕೆಳ ಹಂತದ ಇಲಾಖೆಗಳಿಂದ ಈ ನಿಯಮಗಳ ಪಾಲನೆ ಅತ್ಯಂತ ನಿರ್ಲಕ್ಷ್ಯಗೊಂಡಿದೆ. ಇದು ಸಾರ್ವಜನಿಕರ ಹಕ್ಕುಗಳಿಗೆ ತೊಂದರೆಯುಂಟುಮಾಡುತ್ತಿದೆ.
ಈ ಸಂಬಂಧ ಕೆ ಆರ್ ಎಸ್ ಪಕ್ಷದ ಮುಖಂಡ ಮಂಜುನಾಥ್ ಈದಿನದೊಂದಿಗೆ ಮಾತನಾಡಿ, “ನಾವು ಪ್ರತಿಸಲ ನಿರ್ಮಿತಿ ಕೇಂದ್ರಕ್ಕೆ ಅರ್ಜಿಗಳನ್ನು ಹಾಕಿದಾಗ ಸೆಕ್ಷನ್ 2F ಅಡಿ (2F ಎಂದರೆ, ಸಂಬಂಧ ಪಡದೇ ಇರುವ ಮಾಹಿತಿ) ನಿಮಗೆ ಸಂಬಂಧವಿಲ್ಲ ಎನ್ನುತ್ತಾರೆ. ಬಳಿಕ ಮಾಹಿತಿ ಆಯೋಗಕ್ಕೆ ಮೆಲ್ಮನವಿ ಹಾಕಿದಾಗ ಅಲ್ಲಿಂದ ಮಾಹಿತಿ ಕೊಡಿ ಅಂತ ತಿಳಿಸಿದ ನಂತರ ನಿರ್ಮಿತಿ ಕೇಂದ್ರದವರು ಮಾಹಿತಿ ಒದಗಿಸುತ್ತಿದ್ದರು” ಎಂದರು.
ಕೆಲ ತಿಂಗಳುಗಳ ಹಿಂದೆಯೂ ಇದೇ ರೀತಿ ಆಗಿತ್ತು. ಒಂದು ಪ್ರಕರಣ ಸಂಬಂಧ ಮಾಹಿತಿ ನೀಡಲು ನಿರ್ಮಿತಿ ಕೇಂದ್ರ ನಿರಾಕರಿಸಿತ್ತು. ಹಾಗಾಗಿ ಮಾಹಿತಿ ಆಯೋಗದ ಗಮನಕ್ಕೆ ತರಲಾಯಿತು. 60 ದಿನಗಳ ಒಳಗೆ ದಸ್ತಾವೇಜನ್ನು ಬಿಡುಗಡೆ ಮಾಡಬೇಕು ಎಂದು ಆಯೋಗ ತಾಕೀತು ಮಾಡಿತ್ತು. ಪ್ರಸ್ತುತ ಜುಲೈ 15ಕ್ಕೆ 60 ದಿನ ಕಳೆದಿದೆ. ಆದರೂ ಇನ್ನ ಸಹ ನಿರ್ಮಿತಿ ಕೇಂದ್ರದಿಂದ ಯಾವುದೇ ಮಾಹಿತಿ ಬಿಡುಗಡೆಯಾಗಿರುವುದಿಲ್ಲ.
ಸಾಮಾನ್ಯವಾಗಿ ಪ್ರತಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳೇ (Deputy Commissioner) ಆ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಸಾರ್ವಜನಿಕ ಪ್ರಾಧಿಕಾರಗಳ ಮುಖ್ಯನಿಯಂತ್ರಕರಾಗಿ ಕಾರ್ಯನಿರ್ವಹಿಸುತ್ತಾರೆ. ನಿರ್ಮಿತಿ ಕೇಂದ್ರಗಳು ಕೂಡಾ ಜಿಲ್ಲಾಡಳಿತದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುತ್ತವೆ. ಆದರೂ, ಹಲವೆಡೆ ನಿರ್ಮಿತಿ ಕೇಂದ್ರಗಳು ಮಾಹಿತಿ ಹಕ್ಕು ಕಾಯ್ದೆಯ ಅನ್ವಯ ನೀಡಬೇಕಾದ ಮಾಹಿತಿಯನ್ನು ಮುಚ್ಚಿಡುತ್ತಿದ್ದು, ಸುಳ್ಳು ಕಾರಣಗಳನ್ನು ನೀಡುತ್ತಾ ಅರ್ಜಿಗಳನ್ನು ತಿರಸ್ಕರಿಸುತ್ತಿವೆ. ಕೆಲವೊಮ್ಮೆ RTI ಅರ್ಜಿ ನೀಡಿದ ವ್ಯಕ್ತಿಯನ್ನೇ ಪ್ರಶ್ನಿಸುವ ಧೋರಣೆಯೂ ಕಂಡುಬರುತ್ತದೆ, ಇದು ಕಾನೂನುಬದ್ಧವಲ್ಲ.
ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಈ ಎಲ್ಲ ನಿಯಮ ಉಲ್ಲಂಘನೆಗಳಿಗೆ ನೇರವಾಗಿ ಉತ್ತರ ನೀಡಬೇಕಾಗಿದೆ. ಮಾಹಿತಿ ನೀಡದಿರುವ ಪ್ರಾಧಿಕಾರಗಳ ವಿರುದ್ಧ ಕ್ರಮ ಕೈಗೊಳ್ಳುವುದು, ಮಾಹಿತಿ ಹಕ್ಕಿನ ಅನುಸರಣೆ ಖಚಿತಪಡಿಸುವುದು ಹಾಗೂ ಪಾರದರ್ಶಕ ಆಡಳಿತ ಕಾಪಾಡುವುದು ಅವರ ಜವಾಬ್ದಾರಿಯಾಗಿದೆ.

ಶಿವಮೊಗ್ಗದ ನಿರ್ಮಿತಿ ಕೇಂದ್ರದ ಅಧಿಕಾರಿ ಮತ್ತು ವ್ಯವಸ್ಥಾಪಕ ನಾಗರಾಜು ಅವರು ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್ 4(1)(ಎ) ಹಾಗೂ 4(1)(ಬಿ) ಅಡಿಯಲ್ಲಿ ನೀಡಬೇಕಾದ ಸ್ಪಷ್ಟ ಮಾಹಿತಿಯನ್ನು ಬಿಚ್ಚಿಡಲು ಈಷ್ಟು ಹಿಂಜರಿಯುತ್ತಿರುವುದು ಬಹುಮಟ್ಟಿಗೆ ಆಶ್ಚರ್ಯಕರ ಮತ್ತು ಸಂಶಯಾಸ್ಪದ ಸಂಗತಿಯಾಗಿದೆ. ಇದು ಅಲ್ಲಿ ಭ್ರಷ್ಟಚಾರ ಏನಾದರೂ ನಡೆದಿದೆಯೇ ಎನ್ನುವ ಪ್ರಶ್ನೆಯನ್ನು ಎತ್ತುತ್ತದೆ. ಎಲ್ಲವನ್ನೂ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಸಿ ಕಾನೂನು ಉಲ್ಲಂಘನೆಗೆ ತಕ್ಕ ಶಿಕ್ಷೆ ನೀಡಬೇಕಾಗಿದೆ. ಸಾರ್ವಜನಿಕ ಹಣ ಬಳಸುವ ಪ್ರತಿಯೊಂದು ಸಂಸ್ಥೆಯೂ ತನ್ನ ಲೆಕ್ಕಪತ್ರಗಳು, ಯೋಜನೆ ಅನುಷ್ಠಾನ, ಗುತ್ತಿಗೆ ವಿವರಗಳು, ಹಣ ಬಿಡುಗಡೆ ದಾಖಲೆಗಳು ಮುಂತಾದ ಮಾಹಿತಿಗಳನ್ನು ಸಾರ್ವಜನಿಕವಾಗಿ ಪ್ರಕಟಿಸುವುದು ಕಡ್ಡಾಯವಾದ ನಿಯಮವಾಗಿದ್ದರೂ, ಈ ಸಮಾಚಾರಗಳನ್ನು ಮುಚ್ಚಿಡುತ್ತಿರುವುದು—ಇದು ಪಾರದರ್ಶಕತೆಗೆ ವಿರೋಧಿ ಮಾತ್ರವಲ್ಲ, ಭ್ರಷ್ಟಾಚಾರದ ಶಂಕೆಗೆ ದಾರಿ ಮಾಡಿಕೊಡುತ್ತದೆ.
ಇದನ್ನೂ ಓದಿ: ಶಿವಮೊಗ್ಗ | ಜಿಲ್ಲಾಡಳಿತದಿಂದ “ಅಂಧತ್ವ ಮುಕ್ತ ಶಿವಮೊಗ್ಗ” ಕಾರ್ಯಕ್ರಮ
ಕಡಿಮೆ ವೆಚ್ಚದಲ್ಲಿ ಸಾರ್ವಜನಿಕ ಕಟ್ಟಡಗಳನ್ನು ನಿರ್ಮಿಸಬೇಕು, ಅಲ್ಲದೆ ಸ್ಥಳೀಯ ಕಾರ್ಮಿಕರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು ಎಂಬುದೇ ಇದರ ನಿರ್ಮಿತಿ ಕೇಂದ್ರ ನಿರ್ಮಾಣದ ಮೂಲ ಉದ್ದೇಶ. ಆದರೆ ಶಿವಮೊಗ್ಗ ಜಿಲ್ಲೆಯಲ್ಲಿ ಈ ಉದ್ದೇಶ ಸಂಪೂರ್ಣ ತಿರಸ್ಕೃತವಾಗಿದೆ ಎಂಬುದಕ್ಕೆ ಹಲವು ಉದಾಹರಣೆಗಳಿವೆ. ಉದಾಹರಣೆಗೆ, ಬಸ್ ನಿಲ್ದಾಣ ನಿರ್ಮಾಣ ಎಂಬ ಯೋಜನೆಯ ಹೆಸರಿನಲ್ಲಿ ಲಕ್ಷಗಟ್ಟಲೆ ಹಣವನ್ನು ಮಂಜೂರು ಮಾಡಿಸಿಕೊಳ್ಳಲಾಗುತ್ತಿದೆ. ಆದರೆ ಈ ಯೋಜನೆಗಳಲ್ಲಿ ಸ್ಥಳೀಯ ವೆಲ್ಡರ್, ಕಾರ್ಮಿಕರು, ಮೇಸ್ತ್ರಿಗಳಿಗೆ ಕೆಲಸ ಮಾಡುವ ಅವಕಾಶವಿಲ್ಲ. ಸರ್ಕಾರಿ ಹಣ ಬಳಸಲಾಗುತ್ತಿದ್ದರೂ, ಯೋಜನೆಗಳು ಬಹುತೇಕ ಮುಚ್ಚಿದ ಬಾಗಿಲಿನ ಒಳಗೆ ನಿಭಾಯಿಸಲ್ಪಡುತ್ತಿವೆ. ಇದೇ ರೀತಿ, ವೈಐಪಿ ಭೇಟಿ ಸಂದರ್ಭದಲ್ಲಿ ಬ್ಯಾರಿಕೇಡ್ ಹಾಕುವುದು, ತಾತ್ಕಾಲಿಕ ಹಂಗಾಮಿ ಕಟ್ಟಡಗಳನ್ನು ನಿರ್ಮಿಸುವ ಕೆಲಸಗಳನ್ನು ನಿರ್ಮಿತಿ ಕೇಂದ್ರದ ಮೂಲಕ ನೀಡಲಾಗುತ್ತಿದೆ. ಇಲ್ಲಿಯೂ ಯಾವುದೇ ಟೆಂಡರ್ ಪ್ರಕ್ರಿಯೆ ಇಲ್ಲ, ಲೆಕ್ಕಪತ್ರಗಳ ಪಾರದರ್ಶಕತೆ ಇಲ್ಲ.
ಈ ಎಲ್ಲವನ್ನೂ ನೋಡಿದರೆ, ನಿರ್ಮಿತಿ ಕೇಂದ್ರಗಳು ಸಾರ್ವಜನಿಕ ಪ್ರಾಧಿಕಾರದ ರೂಪದಲ್ಲಿ ಸ್ವಂತ ಉದ್ದಿಮೆಗಳಂತೆ ಕಾರ್ಯನಿರ್ವಹಿಸುತ್ತಿವೆ ಎಂಬ ಗುಮಾನಿ ಉಂಟಾಗುತ್ತದೆ. ಇದರಿಂದಾಗಿ, ರಾಜ್ಯ ಸರ್ಕಾರದ ‘ಜನಪರ ಸೇವೆಯ’ ಉದ್ದೇಶಗಳಿಗೆ ಧಕ್ಕೆ ಉಂಟಾಗುತ್ತಿದೆ. ಜಿಲ್ಲಾಧಿಕಾರಿಗಳು ಈ ಎಲ್ಲದಕ್ಕೂ ಉತ್ತರಿಸಬೇಕಾದವರು. ಭ್ರಷ್ಟಾಚಾರದ ಬಣವೆಯಾಗಿ ಬದಲಾಗುತ್ತಿರುವ ಸ್ಥಿತಿಯನ್ನು ತಡೆದು, ನಿರ್ಮಿತಿ ಕೇಂದ್ರಗಳು ತಮ್ಮ ನೈತಿಕ ಮತ್ತು ಕಾನೂನುಬದ್ಧ ಜವಾಬ್ದಾರಿಗಳನ್ನು ಪೂರೈಸಿ, ಸಾರ್ವಜನಿಕರಿಗೆ ನಿಜವಾದ ಪ್ರಯೋಜನ ನೀಡುವಂತೆ ಕ್ರಮ ಕೈಗೊಳ್ಳುವುದು ಅವರ ಕರ್ತವ್ಯವಾಗಿದೆ.

ರಾಘವೇಂದ್ರ ರವರು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಉಂಡಿಗನಾಳು ಗ್ರಾಮದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಪದವಿ ಪಡೆದಿರುವ ಇವರು ಈದಿನ ಡಾಟ್ ಕಾಮ್ ಮಾಧ್ಯಮ ಸಂಸ್ಥೆಯಲ್ಲಿ ಕಳೆದ 2023 ರಿಂದ ಶಿವಮೊಗ್ಗ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ವರದಿಗಾರಿಕೆ, ರಾಜಕೀಯ ವಿಶ್ಲೇಷಣೆ,Anchoring, (ನಿರೂಪಣೆ) ವಿಶೇಷ ಸ್ಟೋರಿ ಹಾಗೂ ತನಿಖಾ ವರದಿಗಾರಿಕೆ ಮಾಡುವುದು ಇವರ ಅಚ್ಚು ಮೆಚ್ಚಿನ ಕ್ಷೇತ್ರ.