ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಗೌತಮಪುರ ಗ್ರಾಮದಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು, ಮನೆಯ ಮುಂದೆ ಕಸ ಹಾಕಿದ್ದನ್ನು ಪ್ರಶ್ನಿಸಿದ ಕ್ಷುಲ್ಲಕ ಕಾರಣಕ್ಕೆ 67 ವರ್ಷದ ವೃದ್ಧೆಯನ್ನು ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಲಾಗಿದೆ.
ವೃದ್ಧೆಯನ್ನು ಅವರ ಮನೆಯಿಂದ ಹೊರಗೆ ಎಳೆದುಕೊಂಡು ಹೋಗಿ, ಕಂಬಕ್ಕೆ ಕಟ್ಟಿದ ನೆರೆಹೊರೆಯವರು ಕ್ರೂರವಾಗಿ ಥಳಿಸಿದ್ದಾರೆಂದು ಆರೋಪ ವ್ಯಕ್ತವಾಗಿದೆ.
ಜೂನ್ 24ರ ಬೆಳಗ್ಗೆ ಈ ಘಟನೆ ನಡೆದಿದ್ದರೂ, ಹಲ್ಲೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಘಟನೆಯ ಮರುದಿನ ಪೊಲೀಸರು ಕ್ರಮ ಕೈಗೊಂಡು ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
“ತಮ್ಮ ಮನೆಯ ಮುಂದೆ ಪ್ರೇಮ ಎಂಬ ಮಹಿಳೆ ಕಸ ತಂದು ಹಾಕಿದ್ದನ್ನು ಪ್ರಶ್ನಿಸಿದ್ದಕ್ಕೆ ಕೋಪಗೊಂಡ ಪ್ರೇಮ, ಜತೆಗೆ ಮಂಜುನಾಥ್ ಮತ್ತು ದರ್ಶನ್ ಎಂಬ ಇಬ್ಬರು ಯುವಕರು, ಹುಚ್ಚಮ್ಮನವರನ್ನು ನಿಂದಿಸಿ, ಮನೆಯಿಂದ ಎಳೆದುಕೊಂಡು ಹೋಗಿ ಹಗ್ಗದಿಂದ ಮರಕ್ಕೆ ಕಟ್ಟಿ ದೈಹಿಕವಾಗಿ ಹಲ್ಲೆ ಮಾಡಿದ್ದಾರೆ” ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಹೊಸನಗರ ಹಸುವಿನ ಕೆಚ್ಚಲು ಕೊಯ್ದ ಪ್ರಕರಣ : ಆರೋಪಿ ಬಂಧನ
ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಹುಚ್ಚಮ್ಮ ಅವರ ಮಗ ಕಣ್ಣಪ್ಪ, ತನ್ನ ವೃದ್ಧ ಪೋಷಕರ ಸುರಕ್ಷತೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದು, ಭದ್ರತೆ ಒದಗಿಸುವಂತೆ ಮತ್ತು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.