ಹಿಂದುಳಿದ ವಗ೯ಗಳ ಸಮಗ್ರ ಅಧ್ಯಯನದ ಕಾಂತರಾಜ ಆಯೋಗದ ವರದಿ ಅನುಷ್ಠಾನಗೊಳಿಸುವಲ್ಲಿ ರಾಜ್ಯ ಸಕಾ೯ರ ವಿಫಲವಾಗಿದೆ ಇದರ ಸಂಪೂಣ೯ ಹೊಣೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಸಚಿವ ಸಂಪುಟದ ಸಚಿವರು ಹೊರಬೇಕಾದುದು ಅನಿವಾರ್ಯ ಎನ್ನದೆ ವಿಧಿಯಿಲ್ಲ ಎಂದು ಶಿವಮೊಗ್ಗ ಜಿಲ್ಲಾ ಹಿಂದುಳಿದ ಜನ ಜಾಗೃತಿ ವೇದಿಕೆಯ ಸಂಚಾಲಕ ಆರ್ ಟಿ ನಟರಾಜ್ ಆರೋಪಿಸಿದರು.
ಸುಮಾರು 165 ಕೋಟಿ ರೂಪಾಯಿ ಸಾವ೯ಜನಿಕರ ಹಣ ಖಚು೯ ಮಾಡಿ ನೇಮಕ ಮಾಡಿದ್ದ ಕಾಂತರಾಜ ಆಯೋಗದ ವರದಿಯನ್ನು ಸಕಾ೯ರ ನಿಲ೯ಕ್ಷಿಸುವ ಮೂಲಕ ರಾಜ್ಯದಲ್ಲಿರುವ ಬಹುಸಂಖ್ಯಾತ ಹಿಂದುಳಿದ ಜಾತಿಗಳಿಗೆ ಅವಮಾನ ಮಾಡಿ ಅನ್ಯಾಯವೆಸಗಿದಂತಾಗಿದೆ.
ಕಳೆದ ಎರಡು ವಷ೯ಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆ ಅಧಿವೇಶನ ಸೇರಿದಂತೆ ರಾಜ್ಯದ ಉದ್ದಗಲಕ್ಕೂ ಓಡಾಡಿ ಕಾಂತರಾಜ ಆಯೋಗದ ವರದಿಯನ್ನು ಅನುಷ್ಠಾನಗೊಳಿಸಿ ಶೋಷಿತ ಜಾತಿಗಳಿಗೆ ನ್ಯಾಯ ಒದಗಿಸುತ್ತೇನೆ ಎಂದು ವ್ಯಾಘ್ರ ವಾಗ್ದಾನ ಮಾಡಿದ್ದು ಬೂಟಾಟಿಕೆ ಎಂಬುದು ಶೃತಪಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂವಿಧಾನದ ಆಶಯಕ್ಕಿಂತ ತಮ್ಮ ಅಧಿಕಾರ ಉಳಿಸಿಕೊಳ್ಳುವ ಆಷಾಢಭೂತಿತನ ಪ್ರದಶಿ೯ಸುತ್ತ ಚದುರಂಗದ ಆಟ ಆಡಿದ ಮುಖ್ಯಮಂತ್ರಿ ಹಾಗು ಅವರ ಸಚಿವ ಸಂಪುಟದ ಸಹೋದ್ಯೋಗಿಗಳು ಕ್ಷಮೆಗೆ ಅಹ೯ರಲ್ಲ ಅಲ್ಲದೆ ಸಂವಿಧಾನ ವಿರೋಧಿ ನಡೆ ಅನುಸರಿಸಿ ಸಂವಿಧಾನದ ಕಣ್ಣಿಗೆ ಮಣ್ಣೆರೆಚಿದ ಅಪರಾಧವನ್ನು ಹೊತ್ತುಕೊಳ್ಳಬೇಕಾದ ಸ್ಥಿತಿ ಅವರುಗಳದಾಗಿದೆ ಭವಿಷ್ಯದಲ್ಲಿ ಹಿಂದುಳಿದ ಜಾತಿಗಳ ಶಾಪಕ್ಕೆ ಈಡಾಗಬೇಕಾದುದೂ ಅನಿವಾರ್ಯವಾಗಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಅವರ ಸಚಿವ ಸಂಪುಟದ ಈ ನಂಬಿಕೆ ದ್ರೋಹದ ನಡೆಯಿಂದ ನೆನೆಗುದಿಗೆ ಬಿದ್ದ ಕಾಂತರಾಜ ಆಯೋಗದ ವರದಿ ಅನುಷ್ಠಾನಗೊಳ್ಳದೆ ರಾಜ್ಯದ ದಮನಿತ ಹಿಂದುಳಿದ ಜಾತಿ-ವಗ೯ಗಳ ಸವ೯ತೋಮುಖ ಅಭಿವೃದ್ಧಿ ಹತ್ತು ವಷ೯ಗಳ ಕಾಲ ಹಿಂದಕ್ಕೆ ತಳ್ಳಿದಂತೆ ಆದ ದುರಂತ ಇತಿಹಾಸದಲ್ಲಿ ದಾಖಲಿಸುವಂತಹುದು.
ಸುಮಾರು ಮೂರು ವರ್ಷಗಳ ಕಾಲ ಕಾಂತರಾಜ ಆಯೋಗದ ಅಧ್ಯಕ್ಷರು ಹಾಗು ಸದಸ್ಯರು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಪ್ರವಾಸ ಕೈಗೊಂಡಿದ್ದರು, ಸಾವ೯ಜನಿಕ ಸಭೆಗಳನ್ನು ಏಪ೯ಡಿಸಿ ಪ್ರತಿಯೊಂದು ಜಾತಿಗಳ ಜನರು ಮತ್ತು ಸಂಘಟನೆಗಳ ಪದಾಧಿಕಾರಿಗಳಿಂದ ಅಭಿಪ್ರಾಯ ಸಂಗ್ರಹಿಸಲಾಗಿತ್ತು, ರಾಜ್ಯದ ಲಕ್ಷಾಂತರ ಶಿಕ್ಷಕ ಸಿಬ್ಬಂದಿಯಿಂದ ದತ್ತಾಂಶ ಕಲೆಹಾಕಿ ಕೇಂದ್ರಸಕಾ೯ರದ ಬಿ.ಇ.ಎಲ್. ಸಂಸ್ಥೆಯಿಂದ ಗಣಕೀಕರಣ ಮಾಡಿಸಲ್ಪಟ್ಟ ವರದಿಯ ಸಾರಾಂಶ ಅಮೂಲ್ಯವಾದ ದಾಖಲೆ, ಅದನ್ನು ಸಾವ೯ಜನಿಕವಾಗಿ ಹೊರತೋರಿಸದಿದ್ದರೆ ಭವಿಷ್ಯದಲ್ಲಿ ಈ ಸಕಾ೯ರ ಮುಖ್ಯಮಂತ್ರಿ ಹಾಗು ಮಂತ್ರಿಗಳು ಶಾಪಗ್ರಸ್ತರಾಗುವುದಂತೂ ಶತಸಿದ್ಧ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂತರಾಜ ಆಯೋಗದ ವರದಿಯನ್ನು ಅನುಷ್ಠಾನಗೊಳಿಸಲಾಗದ ಮುಖ್ಯಮಂತ್ರಿಗಳು ಅಮೂಲ್ಯವಾದ ವರದಿಯ ದತ್ತಾಂಶಗಳನ್ನಾದರೂ ಮುಂದಿನ ದಿನಗಳಲ್ಲಿ ಸಾವ೯ಜನಿಕವಾಗಿ ಬಿಡುಗೊಳಿಸುವ ಕನಿಷ್ಠ ಜವಾಬ್ದಾರಿಯನ್ನು ತೋರಿ ಆತ್ಮಸಾಕ್ಷಿಯನ್ನು ಪ್ರದಶಿ೯ಸಲಿ ಎಂದು ಶಿವಮೊಗ್ಗ ಜಿಲ್ಲಾ ಹಿಂದುಳಿದ ಜನ ಜಾಗೃತಿ ವೇದಿಕೆ, ಸಂಚಾಲಕ ಆರ್.ಟಿ. ನಟರಾಜ್, ನಮ್ಮ ಈದಿನ ಡಾಟ್ ಕಾಮ್ ಮುಖೇಣ ಅಗ್ರಹಿಸಿದ್ದಾರೆ.