ಶಿವಮೊಗ್ಗ, ಇತ್ತೀಚೆಗೆ ಶಾಲೆಯಲ್ಲಿ ವಿದ್ಯಾರ್ಥಿಗಳು ಕುಡಿಯುವ ನೀರಿಗೆ ಕ್ರಿಮಿನಾಶಕ ಮಿಶ್ರಣ ಮಾಡಿದ ಪ್ರಕರಣಗಳು ಶಿವಮೊಗ್ಗ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದ್ದವು. ಈ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯು ರಾಜ್ಯದ ಎಲ್ಲಾ ಶಾಲೆಗಳಿಗೆ ಪ್ರಮಾಣಿತ ಕಾರ್ಯಾಚರಣಾ ವಿಧಾನ (ಎಸ್ಒಪಿ)ಯನ್ನು ಜಾರಿಗೊಳಿಸಿದೆ.
ಈ ಎಸ್ಒಪಿ ಕುರಿತು ಶಿವಮೊಗ್ಗದ ಡಿಡಿಪಿಐ ಮಂಜುನಾಥ್ ಮಾಹಿತಿ ನೀಡಿದ್ದಾರೆ. ಹೊಸನಗರದ ಶಾಲೆಯೊಂದರಲ್ಲಿ ಕುಡಿಯುವ ನೀರಿಗೆ ಕ್ರಿಮಿನಾಶಕ ಮಿಶ್ರಣ ಮಾಡಿದ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ, ಶಾಲೆಯಲ್ಲಿ ನೀರನ್ನು ಬಳಸುವಾಗ ಪ್ರಮಾಣಿತ ಕಾರ್ಯಾಚರಣಾ ವಿಧಾನ ಅನುಸರಿಸುವ ಕುರಿತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಎಸ್ಒಪಿಯಲ್ಲಿ ಪ್ರಮುಖ 9 ಅಂಶಗಳ ಬಗ್ಗೆ ಸೂಚನೆ ನೀಡಲಾಗಿದೆ. ಅದರ ಅನುಸಾರ ಬಿಸಿಯೂಟ, ಹಾಲು, ಮೊಟ್ಟೆ, ಬಾಳೆಹಣ್ಣು ವಿತರಣೆಯಲ್ಲಿ ಕ್ರಮಗಳನ್ನು ಅನುಸರಿಸಬೇಕು. ಈ ಬಗ್ಗೆ ಶಿಕ್ಷಕರು, ಅಡುಗೆ ತಯಾರಕರು ಹಾಗೂ ವಿದ್ಯಾರ್ಥಿಗಳಿಗೆ ಡಿಡಿಪಿಐ ಅವರು, ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮೂಲಕ ಎಸ್ಒಪಿ ಕಳುಹಿಸಿಕೊಟ್ಟಿದ್ದಾರೆ.
ಶಾಲಾ ಮಕ್ಕಳ ಸುರಕ್ಷತೆಗಾಗಿ ರಾಜ್ಯ ಸರ್ಕಾರದಿಂದ ಎಸ್ಒಪಿ ಜಾರಿ ಪ್ರಮಾಣಿತ ಕಾರ್ಯಾಚರಣಾ ವಿಧಾನದಡಿ ಅನುಸರಿಸಬೇಕಾದ ಅಂಶಗಳು,
ಪ್ರತಿದಿನ ಮಕ್ಕಳಿಗೆ ವಿತರಿಸುವ ಹಾಲಿನ ಸ್ವಚ್ಛತೆ ಕಾಪಾಡಿಕೊಳ್ಳಬೇಕು, ಹಾಗೂ ಅಡುಗೆ ಮಾಡಲು ಶುದ್ಧ ನೀರನ್ನು ಬಳಸಬೇಕು. ಶಾಲೆಯಲ್ಲಿ ಬಳಸುವ ನೀರಿನ ಗುಣಮಟ್ಟ, ಬಣ್ಣ ಹಾಗೂ ವಾಸನೆಯನ್ನು ಅಗತ್ಯವಾಗಿ ಪರಿಶೀಲಿಸಬೇಕು. ಒಂದು ವೇಳೆ ವ್ಯತ್ಯಾಸಗಳು ಕಂಡುಬಂದಲ್ಲಿ ಮುಖ್ಯ ಶಿಕ್ಷಕರ ಗಮನಕ್ಕೆ ತರಬೇಕು.ಶಾಲೆಗೆ ಅಳವಡಿಸಿರುವ ನಲ್ಲಿಯಿಂದ ಬರುವ ನೀರನ್ನು ಮಕ್ಕಳು ನೇರವಾಗಿ ಕುಡಿಯುವುದನ್ನು ತಡೆಗಟ್ಟಬೇಕು.
ಶಾಲೆಯಲ್ಲಿ ನೀರು ಶುದ್ಧಿಕಾರಕ (water purifier) ಇದ್ದಲ್ಲಿ, ಶುದ್ದೀಕರಿಸಿದ ನೀರನ್ನು ಹಾಲು ತಯಾರಿಸಲು, ಅಡುಗೆ ಸಿದ್ಧಪಡಿಸಲು ಹಾಗೂ ವಿದ್ಯಾರ್ಥಿಗಳಿಗೆ ಕಾಯಿಸಿ ಆರಿಸಿದ ನೀರನ್ನು ಕುಡಿಯಲು ಒದಗಿಸಬೇಕು. ಶಾಲೆಯವರು 20 ಲೀಟರ್ ಪಾರದರ್ಶಕ ನೀರಿನ ಕ್ಯಾನ್‌ಗಳಲ್ಲಿ ಕಾಯಿಸಿ ಆರಿಸಿದ ನೀರನ್ನು ಶಾಲೆಯಲ್ಲಿ ವಿದ್ಯಾರ್ಥಿಗಳು ಕುಡಿಯಲು ವ್ಯವಸ್ಥೆ ಮಾಡಬೇಕು.
ವಿದ್ಯಾರ್ಥಿಗಳಿಗೆ ಒದಗಿಸುವ ಕುಡಿಯುವ ನೀರಿನ ಕ್ಯಾನ್ಗಳನ್ನು ಶಾಲೆಯಲ್ಲಿ ಎಲ್ಲರಿಗೂ ಕಾಣುವಂತೆ, ಸುರಕ್ಷಿತ ಮತ್ತು ಶುಚಿತ್ವ ಇರುವ ಸ್ಥಳದಲ್ಲಿ ಇಟ್ಟು ಬಳಕೆಯ ಕುರಿತು ಮಕ್ಕಳಿಗೆ ಅರಿವು ಮೂಡಿಸಬೇಕು.ಶಾಲೆ ಮುಗಿದ ನಂತರ ಕುಡಿಯುವ ನೀರಿನ ಕ್ಯಾನ್ಗಳನ್ನು ಸ್ವಚ್ಛಗೊಳಿಸಿ, ಮುಖ್ಯೋಪಾಧ್ಯಾಯರ ಕೊಠಡಿಯಲ್ಲಿ ಇರಿಸಬೇಕು. ನೀರಿನ ಕ್ಯಾನ್‌ಗಳಲ್ಲಿ ಶೇಖರಿಸಲಾದ ಕುಡಿಯುವ ನೀರನ್ನು ಪ್ರತಿ ದಿನ ಬೆಳಗ್ಗೆ ಶಾಲೆ ಪ್ರಾರಂಭವಾಗುವ ಪೂರ್ವದಲ್ಲಿ ಕ್ಯಾನ್ ಸ್ವಚ್ಛಗೊಳಿಸಬೇಕು. ಕ್ಯಾನ್ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಬಳಸಲಾದ ಸಾಬೂನು/ಡಿಟರ್ಜಂಟ್ ಪುಡಿಯ ಅಂಶಗಳು ಕ್ಯಾನ್‌ನಲ್ಲಿ ಉಳಿಯದಂತೆ ಸ್ವಚ್ಛಗೊಳಿಸಿ. ಹೊಸ ನೀರನ್ನು ತುಂಬಿಸಿ ವಿದ್ಯಾರ್ಥಿಗಳಿಗೆ ಒದಗಿಸಬೇಕು. ನೀರಿನ ಕ್ಯಾನ್ ಬಳಕೆ ಸಂದರ್ಭದಲ್ಲಿ ಅದರಲ್ಲಿ ಪಾಚಿ ಬೆಳೆಯದಂತೆ ಮತ್ತು ದುರ್ವಾಸನೆ ಬಾರದಂತೆ ಸ್ವಚ್ಛತೆ ಕ್ರಮ ಅನುಸರಿಸಬೇಕು.
ಶಿಕ್ಷಕರ ಕರ್ತವ್ಯಗಳೇನು:
ಶಾಲೆಗಳಲ್ಲಿ ಓರ್ವ ಶಿಕ್ಷಕರನ್ನು ಈ ಕಾರ್ಯಕ್ಕಾಗಿ ನೋಡಲ್ ಅಧಿಕಾರಿಯನ್ನಾಗಿ ನೇಮಕ ಮಾಡುವುದು. ಶಿಕ್ಷಕರು ಲಭ್ಯವಿಲ್ಲದಿದ್ದರೆ ಆಯಾ ಶಾಲೆಯ ಮುಖ್ಯ ಶಿಕ್ಷಕರು/ಹಿರಿಯ ಶಿಕ್ಷಕರು ಜವಾಬ್ದಾರಿಯನ್ನು ನಿರ್ವಹಿಸಬೇಕು.
ಶಿಕ್ಷಕರು ಬೆಳಗ್ಗೆ ವಿದ್ಯಾರ್ಥಿಗಳು ಶಾಲೆಗೆ ಆಗಮಿಸುವ ಪೂರ್ವದಲ್ಲಿ ಶಾಲೆಯಲ್ಲಿ ಹಾಜರಿದ್ದು, ಶಾಲಾ ಆವರಣ, ಕೊಠಡಿಗಳು, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಮತ್ತು ಶೌಚಾಲಯದ ನೀರಿನ ಬಳಕೆ ವ್ಯವಸ್ಥೆ, ಆಡುಗೆ ಕೋಣೆ, ಅಡುಗೆ ತಯಾರಿಕೆಗೆ ಅಗತ್ಯವಾದ ನೀರು, ಗ್ಯಾಸ್, ಆಹಾರ ಸಾಮಗ್ರಿಗಳನ್ನು ಪರಿಶೀಲಿಸಿ ಎಲ್ಲವೂ ವಿದ್ಯಾರ್ಥಿಗಳ ಬಳಕೆಗೆ ಸೂಕ್ತವಾಗಿರುವ ಬಗ್ಗೆ ಖಾತರಿಪಡಿಸಿಕೊಂಡು, ಶಾಲಾ ಮುಖ್ಯ ಶಿಕ್ಷಕರಿಗೆ ವರದಿ ಮಾಡಬೇಕು. ಪರಿಶೀಲನಾ ಸಂದರ್ಭದಲ್ಲಿ ಯಾವುದೇ ರೀತಿಯ ವ್ಯತ್ಯಾಸಗಳು/ಲೋಪಗಳು, ನೀರು ಕಲುಷಿತಗೊಂಡಿರುವುದು. ಆಹಾರ ಪದಾರ್ಥಗಳು ಹಾಳಾಗಿರುವುದು ಕಂಡುಬಂದಲ್ಲಿ ಅಥವಾ ವಿದ್ಯಾರ್ಥಿಗಳ ಬಳಕೆಗೆ ಅನುಕೂಲಕರವಾಗಿರದಿದ್ದರೆ, ಕೂಡಲೇ ಶಾಲೆಗೆ ಆಗಮಿಸುವ ವಿದ್ಯಾರ್ಥಿಗಳಿಗೆ/ಅಡುಗೆಯವರಿಗೆ/ಶಿಕ್ಷಕರಿಗೆ ಮುನ್ನೆಚ್ಚರಿಕೆ/ಮಾಹಿತಿಯನ್ನು ನೀಡುವುದರೊಂದಿಗೆ ಯಾರೂ ಆ ವಸ್ತು/ಪದಾರ್ಥಗಳನ್ನು ಬಳಕೆ ಮಾಡದಂತೆ ಮುಂಜಾಗ್ರತಾ ಕ್ರಮ ಅನುಸರಿಸಬೇಕು.
ಶಾಲೆ ಪರಿಶೀಲನಾ ಸಂದರ್ಭದಲ್ಲಿ ಕಂಡುಬಂದ ವ್ಯತ್ಯಾಸಗಳ ಕುರಿತು ಮುಖ್ಯ ಶಿಕ್ಷಕರು ಕೂಡಲೇ ಎಸ್ಡಿಎಂಸಿಯವರ ಗಮನಕ್ಕೆ ಹಾಗೂ ಸ್ಥಳೀಯ ಗ್ರಾಮ ಪಂಚಾಯತ್ ಪಿಡಿಒ ಅವರಿಗೆ ಮಾಹಿತಿ ನೀಡಬೇಕು.
ಶಾಲೆಯಲ್ಲಿ ನೀರು ಶುದ್ಧಿಕಾರಕ (water purifier) ಇದ್ದಲ್ಲಿ ಸಾದಿಲ್ವಾರು(cj) ವೆಚ್ಚದಲ್ಲಿ ಖರ್ಚು ಭರಿಸಿ, ಕಾಲ-ಕಾಲಕ್ಕೆ ನಿರ್ವಹಣೆ ಮಾಡುವುದು. ವಾಟರ್ ಪ್ಯೂರಿಫೈರ್ ಇಲ್ಲದಿದ್ದರೆ, ಶಾಲೆಯ ಸಾದಿಲ್ವಾರು ವೆಚ್ಚದಲ್ಲಿ ಖರೀದಿಸಲು ನಿಯಮಾನುಸಾರ ಕ್ರಮ ವಹಿಸಬೇಕು.ಹೀಗೆ, ಶಾಲೆಯಲ್ಲಿ ವಿದ್ಯಾರ್ಥಿಗಳ ಆರೋಗ್ಯ, ಸ್ವಚ್ಛತೆಯ ದೃಷ್ಟಿಯಿಂದ ಶಾಲಾ ಶಿಕ್ಷಣ ಹಾಗೂ ಸಾಕ್ಷರತೆ ಇಲಾಖೆಯು ಎಸ್ಒಪಿ ಜಾರಿ ಮಾಡಿದ್ದು, ಅದರಂತೆ ಶಾಲೆಯಲ್ಲಿ ಎಲ್ಲರೂ ಕ್ರಮಗಳನ್ನು ಅನುಸರಿಸಬೇಕು. ವಿದ್ಯಾರ್ಥಿಗಳ ಆರೋಗ್ಯ ಹಾಗೂ ಅವರ ಭವಿಷ್ಯದ ದೃಷ್ಟಿಯಿಂದ ಇದು ಸಹಕಾರಿಯಾಗಲಿದೆ.
ಎಸ್ಒಪಿ ಕುರಿತು ದುರ್ಗಿಗುಡಿ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ”ಶಾಲೆಗಳಿಗೆ ಬಿಸಿಯೂಟ ತಯಾರಿಕೆ ಕುರಿತು ಸರ್ಕಾರ ನೀಡಿರುವ ಎಸ್ಒಪಿ ನಮಗೆ ತಿಳಿದಿದೆ. ಮಕ್ಕಳಿಗೆ ಒಳ್ಳೆಯ ಕುಡಿಯುವ ನೀರನ್ನು ಕೊಡಬೇಕು ಎಂದು ತಿಳಿಸಲಾಗಿದೆ. ಅಲ್ಲದೆ, 20 ಲೀಟರ್ ಬಿಳಿ ಕ್ಯಾನ್‌ನಲ್ಲಿ ನೀರನ್ನು ಇಡಬೇಕೆಂದು ಆದೇಶ ನೀಡಿದೆ. ಸರ್ಕಾರದ ಈ ಆದೇಶವನ್ನು ನಾವು ಸ್ವಾಗತ ಮಾಡುತ್ತೆವೆ. ಶಾಲೆಯ ಎಸ್ಡಿಎಂಸಿ ವತಿಯಿಂದ ಸಹಕಾರ ನೀಡುತ್ತೇವೆ. ಸರ್ಕಾರವು ಶಾಲೆಗೆ ಸೌಕರ್ಯ, ಸೌಲಭ್ಯ ಒದಗಿಸಬೇಕಿದೆ. ಟ್ಯಾಂಕ್ ತೊಳೆಯಲು ತಿಂಗಳಿಗೆ ಒಮ್ಮೆಯಾದರೂ ಕನಿಷ್ಠ ಅಂದ್ರೆ 1 ಸಾವಿರ ರೂ. ಹಣ ಕೇಳುತ್ತಾರೆ. ಇದಕ್ಕೆ ಸರ್ಕಾರವೇ ಪ್ರತಿ ತಿಂಗಳು ಹಣ ಬಿಡುಗಡೆ ಮಾಡಬೇಕು” ಎಂದು ಆಗ್ರಹಿಸಿದರು.
”ಸಂಜೆ ಶಾಲಾ ಅವಧಿ ಮುಗಿದ ಮೇಲೆ ಶಾಲೆ ಒಳಗೆ ಯಾವುದೇ ಖಾಸಗಿ ವ್ಯಕ್ತಿಗಳು ಪ್ರವೇಶ ನೀಡಬಾರದೆಂದು ಆದೇಶ ಹೊರಡಿಸಿ ಸೂಚನ ಫಲಕವನ್ನು ಹಾಕಬೇಕು. ಇಂತಹ ಕೃತ್ಯಗಳು ನಿಲ್ಲಬೇಕು ಅಂದರೆ, ಶಾಲೆಯಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಬೇಕು. ಕೆಲಸವನ್ನು ನಮಗೆ ವಹಿಸಿಕೊಟ್ಟರೆ ನಾವು ನಿರ್ವಹಿಸುತ್ತೇವೆ.
ಇನ್ನೂ ವಾಟರ್ ಪ್ಯುರಿಫೈರ್ ಖರೀದಿಗೆ ಸಿಜೆ ಹಣ ಸಾಕಾಗುವುದಿಲ್ಲ. ಸರ್ಕಾರ ಸಿಜೆಯಲ್ಲಿ ಹೆಚ್ಚಿನ ಹಣ ಬಿಡುಗಡೆ ಮಾಡಿದರೆ, ಶೌಚಾಲಯದ ಸ್ವಚ್ಛತೆ, ನೀರಿನ ಟ್ಯಾಂಕ್ ಸ್ವಚ್ಛ ಮಾಡಲು ಸಹಾಯವಾಗುತ್ತದೆ. ಸರ್ಕಾರ ಹೆಚ್ಚಿನ ಹಣ ಮಂಜೂರು ಮಾಡಬೇಕು” ಎಂದು ಮನವಿ ಮಾಡಿದರು.