ಮುಸಲ್ಮಾನರಿಗೆ ಆಂತರಿಕ ಸಮಸ್ಯೆ ಹೆಚ್ಚುತ್ತಲೇ ಇದೆ. ಒಂದು ಭಾಗದಲ್ಲಿ ತ್ರಿವಳಿ ತಲಾಕ್ ತಂದರು, ಇನ್ನೊಂದು ಕಡೆ ಸರ್ಕಾರ ಎನ್‌ಆರ್‌ಸಿ ಜಾರಿಗೆ ತಂದಿತು. ಹಿಜಾಬ್ ತೆಗೆಯಿಸಿದರು. ಈಗ ವಕ್ಫ್ ತಿದ್ದುಪಡಿ ಮಾಡಿ ಮುಸ್ಲಿಂ ಸಮುದಾಯವನ್ನು ಸಂಕಷ್ಟಕ್ಕೀಡು ಮಾಡಿದೆ. ಇದರ ವಿರುದ್ಧ ಮುಸಲ್ಮಾನರು ಹೋರಾಡಲೇಬೇಕಿದೆ ಎಂದು ಮುಸಲ್ಮಾನ್ ಸಮುದಾಯದ ಮುಖಂಡ ಶಾಹುಲ್ ಹಮೀದ್ ಉಮರಿ ಕರೆ ನೀಡಿದರು.
ವಕ್ಫ್ ಉಳಿಸಿ – ಸಂವಿಧಾನ ಉಳಿಸಿ ಅಭಿಯಾನದಡಿ, ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಆಶ್ರಯದೊಂದಿಗೆ ಶಿವಮೊಗ್ಗದಲ್ಲಿ ನಡೆದ ಐತಿಹಾಸಿಕ ಶಾಂತಿಯುತ ಬೃಹತ್ ಪ್ರತಿಭಟನಾ ಸಭೆ ಮತ್ತು ಮೆರವಣಿಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.
“ವಕ್ಫ್ ಉಳಿಸಿ – ಸಂವಿಧಾನ ಉಳಿಸಿ” ಅಭಿಯಾನವನ್ನು ನಡೆಸಲಾಯಿತು.

“2013ರಲ್ಲಿ ವಕ್ಫ್ ಕಾಯಿದೆ ತರಲಾಯಿತು. ಮುಸಲ್ಮಾನರಿಗೆ ಯಾವ ಸಮಸ್ಯೆಯಾಗಲಿಲ್ಲ. 2025ರಲ್ಲಿ ತಂದಿರುವ ತಿದ್ದುಪಡಿ ತೊಂದರೆಯಾಗಿದೆ. ಈ ಕಾಯಿದೆಯಲ್ಲಿ ಮುಸಲ್ಮಾನೇತರರು ಭಾಗಿಯಾಗುವುದು ಧಾರ್ಮಿಕ ವಿರೋದಿಯಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.

“ಮುಸಲ್ಮಾನ್ ವಕ್ಫ್ ಬೋರ್ಡ್‌ನಲ್ಲಿ ಇತರರಿಗೆ ಏನು ಕೆಲಸ? ಅವರು ಶಾಂತಿಯುತ ಪ್ರತಿಭಟನೆ ಮೂಲಕ ಕೇಂದ್ರದ ಕಣ್ಣು ತೆರೆಯಿಸಬೇಕು. ಅಧಿಕಾರ ಬೇಕಾದರೆ ಅಭಿವೃದ್ಧಿ ಮಾಡಿ. ಆದರೆ ಕರಾಳ ಕಾಯಿದೆಗಳನ್ನು ತರಬೇಡಿ. ಪಹಲ್ಗಾಮ್, ಉರಿ, ಪಠಾಣ್ ಕೋಟೆಯಲ್ಲಿ ನಡೆದಿದ್ದೇನು? ಪಾಕಿಸ್ತಾನ, ಬಾಂಗ್ಲ ದೇಶಗಳು ರಣಹದ್ದಿನಂತೆ ನಡೆದುಕೊಳ್ಳುವಾಗ ನೀವು ಮುಸಲ್ಮಾನರನ್ನು ಗುರಿ ಮಾಡುತ್ತಿದ್ದೀರಿ” ಎಂದು ಆರೋಪಿಸಿದರು.

“ಭಯೋತ್ಪಾದಕರಿಗೆ ಧರ್ಮವಿಲ್ಲ. ಒಂದು ಧರ್ಮದವನಿಗೆ ಬೇರೆ ಧರ್ಮದವನನನ್ನು ಕೊಲ್ಲುವ ಹಕ್ಕಿಲ್ಲ. ಭಯತ್ಪಾದನೆ ಹೆಸರಿನಲ್ಲಿ ಕೊಂದರೆ ಆತ ಮುಸಲ್ಮಾನ್ ಅಲ್ಲ. ವಕ್ಫ್ ಆಸ್ತಿ ಕಬಳಿಸುವರೂ ಸಹ ವಕ್ಪ್ ಬೋರ್ಡ್‌ಗೆ ಆಸ್ತಿ ಬಿಟ್ಟುಕೊಡಬೇಕು” ಎಂದು ಸೂಚಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಪ್ರತಿಭಟನಾಕಾರರು ಕೈಗಳಿಗೆ ಕಪ್ಪುಪಟ್ಟಿ ಧರಿಸಿ ರಾಷ್ಟ್ರಧ್ವಜ ಹಿಡಿದು ಮುಸಲ್ಮಾನ್ ಹಾಸ್ಟೆಲ್(ಜಿಲ್ಲಾ ವಕ್ಫ್ ಕಚೇರಿ)ನಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಯಿತು. ಜಿಲ್ಲಾಧಿಕಾರಿಗಳ ಕಚೇರಿವರೆಗೆ ನಡೆದು ಬಂದು ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದರು. ನಮ್ಮ ಸಾಂವಿಧಾನಿಕ ಹಕ್ಕುಗಳು ಮತ್ತು ವಕ್ಫ್ ಆಸ್ತಿಗಳ ರಕ್ಷಣೆಗಾಗಿ ಧ್ವನಿ ಎತ್ತಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಅನೇಕ ಗಣ್ಯರು ಇದ್ದರು.