ಶಿವಮೊಗ್ಗ, ತಂದೆ – ತಾಯಿ ಮೃತರಾಗಿ ಪೋಷಕತ್ವದಿಂದ ವಂಚಿತರಾಗಿದ್ದ ಇಬ್ಬರು ಹೆಣ್ಣು ಮಕ್ಕಳಿಗೆ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮೂಲಕ ಆಶ್ರಯ ಕಲ್ಪಿಸುವ ಮಾನವೀಯ ಕಾರ್ಯ ಮಾಡಿದ, ಭದ್ರಾವತಿ ತಾಲೂಕು ಹೊಳೆಹೊನ್ನೂರು ಠಾಣೆ ಪೊಲೀಸ್ ಸಿಬ್ಬಂದಿಯೋರ್ವರ ಕರ್ತವ್ಯವು ಮೆಚ್ಚುಗೆಗೆ ಪಾತ್ರವಾಗಿದೆ.
ಹೆಡ್ ಕಾನ್ಸ್’ಟೇಬಲ್ ಆನಂದ್ ಹೆಚ್ ವಿ ಎಂಬುವರೆ, ಸಮಾಜಮುಖಿ ಕಾರ್ಯದ ಮೂಲಕ ಗಮನ ಸೆಳೆದವರಾಗಿದ್ದಾರೆ. ಈ ಕುರಿತಂತೆ ಆಗಸ್ಟ್ 8 ರಂದು ಜಿಲ್ಲಾ ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ನೆರಹವಿನಹಸ್ತ
ಆಗಸ್ಟ್ 4 ರಂದು ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರಲ್ಲಿ ಮನೆ ಮನೆ ಪೊಲೀಸ್ ಕಾರ್ಯಕ್ರಮದಡಿ, ಆನಂದ್ ಹೆಚ್ ವಿ ಅವರು ಗ್ರಾಮಸ್ಥರ ಅಹವಾಲು ಆಲಿಸುತ್ತಿದ್ದರು.
ಈ ವೇಳೆ 9 ಹಾಗೂ 3 ವರ್ಷ ವಯೋಮಾನದ ಇಬ್ಬರು ಹೆಣ್ಣು ಮಕ್ಕಳು, ಪೋಷಕತ್ವದಿಂದ ವಂಚಿತರಾಗಿರುವ ಮಾಹಿತಿ ಅವರ ಗಮನಕ್ಕೆ ಬಂದಿತ್ತು. ಸುಮಾರು 1 ವರ್ಷದ ಹಿಂದೆ ಸದರಿ ಬಾಲಕಿಯರ ತಂದೆ – ತಾಯಿ ವಿಧಿವಶರಾಗಿದ್ದ ಸಂಗತಿ ಗೊತ್ತಾಗಿತ್ತು.
ಮಕ್ಕಳಿಗೆ ಸೂಕ್ತ ಆಶ್ರಯ ಕಲ್ಪಿಸಲು ನಿರ್ಧರಿಸಿದ ಆನಂದ್ ಹೆಚ್ ವಿ ಅವರು, ಭದ್ರಾವತಿಯ ಡಾನ್ ಬಾಸ್ಕೋ ಸಂಸ್ಥೆಯ ಜಿಲ್ಲಾ ಸಂಯೋಜಕರಾದ ರಂಗನಾಥ್ ಅವರನ್ನು ಸಂಪರ್ಕಿಸಿ ಮಾಹಿತಿ ತಿಳಿಸಿದ್ದರು.
ಸದರಿ ಸಂಸ್ಥೆಯ ಮೂಲಕ ಪುಟ್ಟ ಹೆಣ್ಣು ಮಕ್ಕಳನ್ನು, ಶಿವಮೊಗ್ಗದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಸುಪರ್ದಿಗೆ ಒಪ್ಪಿಸಿ, ಮಕ್ಕಳಿಗೆ ಆಶ್ರಯ ಕಲ್ಪಿಸಿಕೊಡುವ ಮಾನವೀಯ ಕಾರ್ಯ ನಡೆಸಿದ್ದಾರೆ.