ಶಿವಮೊಗ್ಗ, ರಾಜ್ಯ ಸರ್ಕಾರ ತಂದಿರುವ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ (ತಿದ್ದುಪಡಿ) ವಿಧೇಯಕ 2024 ರಲ್ಲಿ ಉದ್ದೇಶಿಸಿದಂತೆ ‘ಎ’ ವರ್ಗದ ದೇವಸ್ಥಾನಗಳಿಂತತ್ವದ ಸಂಗ್ರಹವಾಗುವ ನಿಧಿಯಲ್ಲಿ ಶೇ.10% ಭಾಗ ಪ್ರತ್ಯೇಕಿಸಿ, ರಾಜ್ಯದಲ್ಲಿ ದುಸ್ಥಿತಿಯಲ್ಲಿರುವ ‘ಸಿ’ ವರ್ಗದ ದೇವಸ್ಥಾನಗಳಿಗೆ ನೀಡಿ ಆ ದೇವಸ್ಥಾನಗಳ ಮತ್ತು ಅರ್ಚಕರ ಅಭಿವೃದ್ಧಿಗೆ ವಿನಿಯೋಗಿಸುವ ಸದುದ್ದೇಶದ ವಿಧೇಯಕಕ್ಕೆ ಕರ್ನಾಟಕ ರಾಜ್ಯದ ರಾಜ್ಯಪಾಲರು ಸಹಿ ಮಾಡದೇ ರಾಜ್ಯ ಸರ್ಕಾರಕ್ಕೆ ವಾಪಾಸ್ ಕಳುಹಿಸಿರುವುದು ಖಂಡನೀಯ ಎಂದು ಶಾಂತವೇರಿ ಗೋಪಾಲಗೌಡ ಅಧ್ಯಯನ ಟ್ರಸ್ಟ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಸ್ಟನ ಮುಖ್ಯಸ್ಥ ಕಲ್ಲೂರು ಮೇಘರಾಜ, ಪ್ರತಿ ವಿಷಯದಲ್ಲಿಯೂ ರಾಜ್ಯಪಾಲರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ ಆರೋಪಿಸಿದರು.
ರಾಜ್ಯದಲ್ಲಿ ಮುಜರಾಯಿ ಇಲಾಖೆಯಲ್ಲಿ ‘ಎ’ ವರ್ಗದ 205, ‘ಚ’ ವರ್ಗದ 195 ಮತ್ತು ‘ಸಿ’ ವರ್ಗದ 34,217 ದೇವಾಲಯಗಳವೆ ಎಂದು ಇಲಾಖೆಯ ಅಂಕಿ ಅಂಶಗಳು ಹೇಳುತ್ತವೆ. `ಸಿ’ ವರ್ಗದ 34.217 ದೇವಸ್ಥಾನಗಳ ಪೈಕಿ 1,150 ‘ಸಿ’ ವರ್ಗದ ದೇವಸ್ಥಾನಗಳು ಬೆಂಗಳೂರು ನಗರದಲ್ಲಿವೆ. ‘ಸಿ ವರ್ಗದ ಬಹುತೇಕ ದೇವಾಲಯಗಳು ಗ್ರಾಮೀಣ ಪ್ರದೇಶಗಳಲ್ಲವೆ. ನಗರ ಪ್ರದೇಶಗಳ ದೇವಸ್ಥಾನಗಳಿಗೆ ನಿತ್ಯವೂ ಭಕ್ತರು ಭೇಟಿ ನೀಡುತ್ತಾರೆ ಮತ್ತು ಭಕ್ತರಿಂದ ಕಾಣಿಕೆ ಹಣ ಸಂಗ್ರಹವಾಗುತ್ತೆ. ಆದರೆ ಗ್ರಾಮೀಣ ಭಾಗದ ದೇವಾಲಯಗಳ ಸ್ಥಿತಿ ಬೇರೆಯೇ ಆಗಿದೆ.
ಊರಹಬ್ಬ, ಜಾತ್ರೆ ಮತ್ತು ಕೆಲವು ವಿಶೇಷ ದಿನಗಳನ್ನು ಹೊರತುಪಡಿಸಿ ಗ್ರಾಮೀಣ ದೇವಾಲಯಕ್ಕೆ ಹೋಗುವವರ ಭಕ್ತಾಧಿಗಳ ಸಂಖ್ಯೆ ಅತೀ ವಿರಳ. ಹಾಗಾಗಿ ಈ ಗ್ರಾಮೀಣ ಭಾಗದ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ, ಸುಣ್ಣ-ಬಣ್ಣಕ್ಕೆ ಮತ್ತು ಅರ್ಚಕರಿಗೆ ತಸ್ತಿಕ್ ಹಣ ನೀಡುವುದು ಅಸಾಧ್ಯವಾಗಿದೆ ಎಂದರು.
ಈ ಹಿನ್ನಲೆಯಲ್ಲಿ ‘ಎ’ ವರ್ಗದ ದೇವಸ್ಥಾನಗಳಿಂದ ಸಂಗ್ರಹವಾಗುವ ನಿಧಿಯಲ್ಲಿ ಶೇ.10 ರ ಅನುದಾನವನ್ನು ಪ್ರತ್ಯೇಕಿಸಿ ‘ಸಿ’ ವರ್ಗದ ದೇವಾಲಯಗಳ ಜೀರ್ಣೋದ್ಧಾರಕ್ಕೆ ಮತ್ತು ಅರ್ಚಕರ ಜೀವನಾಭಿವೃದ್ಧಿಗೆ ಬಳಸಲು ನಿರ್ಧರಿಸಿ, ರಾಜ್ಯದ ವಿಧಾನಸಭೆ ಮತ್ತು ವಿಧಾನ ಪರಿಷತ್‌ನಲ್ಲಿ ಅನುಮೋದನೆಗೊಂಡ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ (ತಿದ್ದುಪಡಿ) ವಿಧೇಯಕ 2024 ಕ್ಕೆ ರಾಷ್ಟ್ರಪತಿಗಳು ಅನುಮೋದನೆ ನೀಡಬೇಕೆಂದು ಆಗ್ರಹಿಸಿದರು.
ರಾಜ್ಯ ಸರ್ಕಾರದ ತಿದ್ದುಪಡಿ ಕಾನೂನಿನಲ್ಲಿ ಅರ್ಚಕರಿಗೆ ನೀಡುವ ತಸ್ತಿಕ್ ಹಣವನ್ನು ರೂ.5,000/- ಗಳಿಂದ ರೂ.10,000/- ಗಳಿಗೆ ಹೆಚ್ಚಿಸಬೇಕೆಂದು ನಮ್ಮ ಸಂಘಟನೆಯು ಇದೇ ಸಂದರ್ಭದಲ್ಲಿ ಒತ್ತಾಯಿಸುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟಿನ ಸದಸ್ಯರಾದ ನಾಗೇಶರಾವ, ಹೊಳೆಮಡಿಲು ವೆಂಕಟೇಶ , ಜನಮೇಜಿರಾವ್, ಸಂಗಯ್ಯ ಮೊದಲಾದವರಿದ್ದರು.