ಕುವೆಂಪು ವಿವಿ(ವಿಶ್ವ ವಿದ್ಯಾಲಯ)ಯು ಜುಲೈ 2ರಂದು ತನ್ನ 38ನೇ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸುತ್ತಿದ್ದು, ಇದು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಾಶಿಯಾಗಿ ಹಲವು ದಶಕಗಳಿಂದ ಸೇವೆ ಸಲ್ಲಿಸುತ್ತಿದೆ. ಆದರೆ, ಇತ್ತೀಚಿನ ಯುಜಿಸಿ ನ್ಯಾಕ್ ತಂಡದ ಭೇಟಿಯ ನಂತರ, ವಿಶ್ವವಿದ್ಯಾಲಯವು 2024-25ನೇ ಶೈಕ್ಷಣಿಕ ಸಾಲಿನಲ್ಲಿ ಪಿಎಚ್‌ಡಿ ಮತ್ತು ಸ್ನಾತಕೋತ್ತರ ಪದವಿಯ ಪ್ರವೇಶಾತಿ ಹಾಗೂ ಬೋಧನಾ ಶುಲ್ಕವನ್ನು ಶೇ.100ರಷ್ಟು ಹೆಚ್ಚಿಸಿ ಆದೇಶ ಹೊರಡಿಸಿದೆ. ಈ ಕ್ರಮವನ್ನು ವಿದ್ಯಾರ್ಥಿಗಳು ಮತ್ತು ಸಂಶೋಧನಾ ವಿದ್ಯಾರ್ಥಿಗಳು ತೀವ್ರವಾಗಿ ಖಂಡಿಸಿದ್ದು, ಇದು ವಿಶ್ವವಿದ್ಯಾಲಯವನ್ನು ವ್ಯವಸ್ಥಿತವಾಗಿ ಮುಚ್ಚುವ ಹುನ್ನಾರವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
2023-24ರಲ್ಲಿ ಪಿಎಚ್‌ಡಿ ಬೋಧನಾ ಶುಲ್ಕವು ಸಾಮಾನ್ಯ ವರ್ಗಕ್ಕೆ ₹6,000, ಪರಿಶಿಷ್ಟ ಜಾತಿ/ಪಂಗಡ ಮತ್ತು ಪ್ರವರ್ಗ 1ರ ವಿದ್ಯಾರ್ಥಿಗಳಿಗೆ ₹4,200 ಮತ್ತು ವಿದೇಶಿ ವಿದ್ಯಾರ್ಥಿಗಳಿಗೆ ₹7,200 ಆಗಿತ್ತು. ಆದರೆ, ಇದೀಗ ಇವು ಕ್ರಮವಾಗಿ ₹12,000, ₹8,400 ಮತ್ತು ₹15,000ಕ್ಕೆ ಹೆಚ್ಚಿಸಲಾಗಿದೆ. ಕೋರ್ಸ್‌ವರ್ಕ್ ಶುಲ್ಕ ಸೇರಿದಂತೆ ಮೊದಲ ವರ್ಷದ ಶುಲ್ಕವನ್ನು ₹14,400, ₹10,080 ಮತ್ತು ₹22,200ಕ್ಕೆ ಏರಿಕೆ ಮಾಡಲಾಗಿದೆ. ಸಂಶೋಧನಾ ಶೀರ್ಷಿಕೆ ಬದಲಾವಣೆ ಶುಲ್ಕವನ್ನು ಸಾಮಾನ್ಯ ವರ್ಗಕ್ಕೆ ₹4,000ದಿಂದ ₹10,000ಕ್ಕೆ, ಪರಿಶಿಷ್ಟ ಜಾತಿ/ಪಂಗಡ ಮತ್ತು ಪ್ರವರ್ಗ 1ಕ್ಕೆ ₹2,500ರಿಂದ ₹6,250ಕ್ಕೆ ಮತ್ತು ವಿದೇಶಿ ವಿದ್ಯಾರ್ಥಿಗಳಿಗೆ ₹5,000ದಿಂದ ₹15,000ಕ್ಕೆ ಹೆಚ್ಚಿಸಲಾಗಿದೆ.
ಇದೇ ರೀತಿ, ಸಂಶೋಧನಾ ಮಾರ್ಗದರ್ಶಕರ ಬದಲಾವಣೆ ಶುಲ್ಕವನ್ನು ₹6,000ದಿಂದ ₹10,200ಕ್ಕೆ, ವ್ಯಾಕರಣ ತಿದ್ದುಪಡಿ ಶುಲ್ಕವನ್ನು ₹500ರಿಂದ ₹1,500ಕ್ಕೆ ಸಂಶೋಧನಾ ಪ್ರಬಂಧ ಪ್ರಕಟಣೆ ಶುಲ್ಕವನ್ನು ₹500ರಿಂದ ₹2,000ಕ್ಕೆ ಮತ್ತು ಸಂಶೋಧನಾ ಅವಧಿ ವಿಸ್ತರಣೆ ಶುಲ್ಕಗಳನ್ನು ಮೊದಲ ವರ್ಷಕ್ಕೆ ₹10,000ದಿಂದ ₹20,000ಕ್ಕೆ, ಎರಡನೇ ವರ್ಷಕ್ಕೆ ₹15,000ದಿಂದ ₹30,000ಕ್ಕೆ ಮತ್ತು ಮೂರನೇ ವರ್ಷಕ್ಕೆ ₹20,000ದಿಂದ ₹40,000ಕ್ಕೆ ಹೆಚ್ಚಿಸಲಾಗಿದೆ. ಅಡ್ಜಡಿಕೇಶನ್ ಶುಲ್ಕವನ್ನು ₹20,000ದಿಂದ ₹25,000ಕ್ಕೆ ಮತ್ತು ಪ್ರಯೋಗಾಲಯ ಶುಲ್ಕವನ್ನು ₹4,500ರಿಂದ ₹7,650ಕ್ಕೆ ಹಾಗೂ ₹2,250ರಿಂದ ₹4,050ಕ್ಕೆ ಏರಿಕೆ ಮಾಡಲಾಗಿದೆ. ಸ್ನಾತಕೋತ್ತರ ವಿದ್ಯಾರ್ಥಿಗಳ ಶುಲ್ಕವೂ ಸೇರಿದಂತೆ ಬಹುತೇಕ ಶುಲ್ಕವನ್ನು ಅವೈಜ್ಞಾನಿಕವಾಗಿ ಹೆಚ್ಚಳಗೊಳಿಸಿರುವ ವಿಶ್ವವಿದ್ಯಾಲಯದ ಕೆಲಸ ಅಸಹನೀಯವಾದುದು.
ಕುವೆಂಪು ವಿಶ್ವವಿದ್ಯಾಲಯವು ಶಿವಮೊಗ್ಗ, ಚಿತ್ರದುರ್ಗ, ಚಿಕ್ಕಮಗಳೂರು ಮತ್ತು ದಾವಣಗೆರೆ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕೇಂದ್ರವಾಗಿದ್ದು, ಇತ್ತೀಚೆಗೆ ಬೇರೆ ಜಿಲ್ಲೆಗಳು, ರಾಜ್ಯಗಳು ಹಾಗೂ ವಿದೇಶಗಳಿಂದಲೂ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ. ಆದರೆ, ಮೂಲಭೂತ ಸೌಕರ್ಯಗಳ ಕೊರತೆ, ಅವ್ಯವಸ್ಥಿತ ವಸತಿಗೃಹಗಳು, ಅಪೂರ್ಣ ಗ್ರಂಥಾಲಯ, ಸಂಶೋಧಕರಿಗೆ ಪ್ರತ್ಯೇಕ ಹಾಸ್ಟೆಲ್ ಇಲ್ಲದಿರುವುದು, ಅತಿಥಿ ಶಿಕ್ಷಕರಿಗೆ ಯುಜಿಸಿ ಮಾನದಂಡದಂತೆ ವೇತನ ನೀಡದಿರುವುದು ಮತ್ತು ವಿದ್ಯಾರ್ಥಿಗಳಿಗೆ ಕಡಿಮೆ ಬೆಲೆಯಲ್ಲಿ ಊಟ, ಉಪಾಹಾರ ಒದಗಿಸುವ ಕಾಲೇಜ್ ಕ್ಯಾಂಟೀನ್‌ನಲ್ಲಿ ದರ ಹೆಚ್ಚಳ ಮಾಡಿದ್ದು, ಕ್ಯಾಂಟೀನ್‌ನಲ್ಲಿ ಚಹಾ-ಕಾಫಿಯನ್ನು ಮಾರದಂತೆ ಆದೇಶ ತಂದು ಎಲ್ಲ ವಿದ್ಯಾರ್ಥಿಗಳಿಂದ ಹೆಚ್ಚಿನ ದರದ ಚಹಾ-ಕಾಫಿಯನ್ನು ಕೊಳ್ಳುವಂತೆ ಮಾಡಲಾಗಿದೆ.
ಇದನ್ನೂ ಓದಿದ್ದೀರಾ? ಮೈಸೂರು | ರೈತರ 448 ಎಕರೆ ಭೂಮಿ ಕಬಳಿಸಲು ಮುಂದಾದ ಕೆಐಎಡಿಬಿ
“ಖಾಸಗಿ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾಭ್ಯಾಸ ಮಾಡಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ವರದಾನವಾಗಿದ್ದ ಕುವೆಂಪು ವಿಶ್ವವಿದ್ಯಾಲಯವನ್ನು ಮುಚ್ಚುವ ಹುನ್ನಾರವೇ ವಿಶ್ವವಿದ್ಯಾಲಯದ ಈ ಶುಲ್ಕ ಹೆಚ್ಚಳಕ್ಕೆ ಕಾರಣವಾಗಿದೆ” ಎಂದು ವಿದ್ಯಾರ್ಥಿಗಳು ಆರೋಪಿಸುತ್ತಿದ್ದಾರೆ.
ಉನ್ನತ ಶಿಕ್ಷಣ ಇಲಾಖೆ ಮತ್ತು ಸರ್ಕಾರದಿಂದ ಕಾಲಕಾಲಕ್ಕೆ ಸಮರ್ಪಕ ಅನುದಾನ ನೀಡದೆ, ಪ್ರಾಧ್ಯಾಪಕರ ನೇಮಕಾತಿ ಕೈಗೊಳ್ಳದಿರುವುದು ಕುವೆಂಪು ವಿವಿ ಮಾತ್ರವಲ್ಲದೆ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ದುಃಸ್ಥಿತಿಗೆ ಕಾರಣವೆಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬರಹ : ಅನಿಕೇತನ, ಜ್ಞಾನ ಸಹ್ಯಾದ್ರಿ