ಶಿವಮೊಗ್ಗ ಶಾಂತಿ ಸೌಹಾರ್ದತೆಗೆ ಹೆಸರಾಗಿರುವ ಶಿವಮೊಗ್ಗದಲ್ಲಿ ನಡೆಯುವ ಯಾವುದೇ ಧರ್ಮದ ಧಾರ್ಮಿಕ ವಿಧಿಗಳು, ಹಬ್ಬದ ಆಚರಣೆಗಳು ಶಾಂತಿಯುತವಾಗಿ ನಡೆಯುತ್ತಿವೆ. ಮುಂದಿನ ದಿನಗಳಲ್ಲಿಯೂ ಸದಾ ಕೂಡಿ ಬಾಳುವ, ನಾಡಿಗೆ ಏಕತೆ, ಭಾವೈಕ್ಯತೆಯ ಸಂದೇಶ ಸಾರುವ ನೆಲ ನಮ್ಮದಾಗಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.
ಅವರು ಬುಧವಾರ ಮುಸ್ಲಿಂ ಸಮುದಾಯದ ಪವಿತ್ರ ಹಬ್ಬ ಬಕ್ರೀದ್ ಆಚರಣೆಯ ಕುರಿತು ನಗರದ ಡಿ.ಎ.ಆರ್.ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಶಾಂತಿ ಸೌಹಾರ್ಧ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಬ್ಬಗಳು ಸಡಗರ, ಸಂಭ್ರಮಗಳಿಂದ ಆಚರಿಸಬೇಕು. ಶಾಂತಿ ಸಂದೇಶದಲ್ಲಿ ಜಿಲ್ಲೆಯಲ್ಲಿನ ಎಲ್ಲಾ ಕುಟುಂಬಗಳ ನೆಮ್ಮದಿಯ ಬದುಕಿದೆ. ವೈಯಕ್ತಿಗೆ ಏಳಿಗೆ ಅಡಗಿದೆ . ವಿಶೇಷವಾಗಿ ಇಂತಹ ಕಾಲದಲ್ಲಿ ಎಲ್ಲರೂ ನಿರ್ಭಯವಾಗಿ ಆತಂಕ ರಹಿತ ಜೀವನ ನಿರ್ವಹಿಸುವಂತಾಗಬೇಕು ಎಂದ ಅವರು, ಎಲ್ಲರೂ ಜಿಲ್ಲೆಯಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡಲು ಮುಂದಾಗಬೇಕು. ನಡೆಯುವ ಸಂಭಾವ್ಯ ಅಹಿತಕರ ಘಟನೆಗಳ ಸಂದರ್ಭದಲ್ಲಿ ಜಿಲ್ಲಾಡಳಿತ ತಮ್ಮ ನೆರವಿಗೆ ಧಾವಿಸಲಿದೆ ಎಂದವರು ನುಡಿದರು.
ಒಬ್ಬ ವ್ಯಕ್ತಿಯ ನೋವಿನಲ್ಲಿ ಮತ್ತೊಬ್ಬರು ಸಂಭ್ರಮಿಸುವುದು ಆರೋಗ್ಯಕರ ಸಮಾಜದ ಲಕ್ಷಣವಲ್ಲ. ಪರಸ್ಪರರಲ್ಲಿ ಸಾಮರಸ್ಯ, ಸೌಹಾರ್ಧತೆ ಮೂಡಬೇಕು. ಅಂತಹ ವಾತಾವರಣವನ್ನು ನಾವೇ ಸೃಜಿಸಿಕೊಳ್ಳಬೇಕು. ವದಂತಿಗಳನ್ನು ನಂಬಬೇಡಿ ಹಾಗೂ ಅವುಗಳನ್ನು ಹರಡಬೇಡಿ. ಯುವಜನತೆ ತಾಳ್ಮೆಯಿಂದ ವರ್ತಿಸುವಂತೆ ಹಿರಿಯರು ಸಕಾಲಿವಾಗಿ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದರು.ಎಲ್ಲರೂ ಕಾನೂನನ್ನು ಗೌರವಿಸಿ, ಅಂತೆಯೇ ಪಾಲಿಸಿ.
ಆಕಸ್ಮಿಕ ಘಟನೆಗಳು ನಡೆದಾಗ ತಕ್ಷಣದ ಅಗತ್ಯಗಳಿಗಾಗಿ ಪೊಲೀಸ್‌ಇಲಾಖೆ ಅಧಿಕಾರಿಗಳು ಹಾಗೂ ಸಮೀಪದ ಅಧಿಕಾರಿಗಳನ್ನು ಸಂಪರ್ಕಿಸಿ, ಚರ್ಚಿಸಿ. ತಕ್ಷಣದ ಪರಿಹಾರಕ್ಕಾಗಿ ಏಕಪಕ್ಷೀಯವಾದ ಆತುರದ ನಿರ್ಧಾರಗಳು ಬೇಡ ಎಂದವರು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನಕುಮಾರ್‌ಅವರು ಮಾತನಾಡಿ, ತ್ಯಾಗ ಬಲಿದಾನದ ಸಂಕೇತವಾಗಿರುವ ಬಕ್ರೀದ್ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ಎಲ್ಲಾ ಧರ್ಮದ ಬಾಂಧವರು ಸಹಕರಿಸಬೇಕು. ಸುಳ್ಳು ಸುದ್ದಿಗಳಿಗೆ ಕಿವಿಕೊಡಬೇಡಿ ಎಂದರು.