ಶಿವಮೊಗ್ಗ ನಗರದ ನಂಜಪ್ಪ ಆಸ್ಪತ್ರೆಯ ಲ್ಯಾಬ್ ಟಕ್ನಿಷಿಯನ್ ಸಿಬ್ಬಂದಿಯೊಬ್ಬರ ಮೊಬೈಲ್ ಕಸಿದುಕೊಂಡ ಮಂಗವೊಂದು ಮರವೇರಿ ಕುಳಿತ ಘಟನೆ ಬುಧವಾರ ಅಂದರೆ ಇಂದು ಮಧ್ಯಾಹ್ನ ನಡೆಯಿತು.
ನಗರದ ಕುವೆಂಪು ರಸ್ತೆಯಲ್ಲಿರುವ ನಂಜಪ್ಪ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಕೆಲಸ ಮಾಡುತ್ತಿರುವ ಯುವತಿ ತನ್ನ ಮೊಬೈಲ್‌ನ್ನು ಕಿಟಕಿಯ ಬಳಿ ಇಟ್ಟು ಕೆಲಸ ಮಾಡುತ್ತಿದ್ದರು, ಆ ವೇಳೆ ಸ್ಥಳಕ್ಕೆ ಬಂದ ಮಂಗವೊಂದು ಕಿಟಕಿಯ ಪಕ್ಕದಲ್ಲಿ ಇಟ್ಟಿದ್ದ ಮೊಬೈಲನ್ನು ತೆಗೆದುಕೊಂಡು ಆಸ್ಪತ್ರೆಯ ಪಕ್ಕದಲ್ಲಿದ್ದ ದೊಡ್ಡ ಮರದ ತುದಿಗೆ ಹೋಗಿ ಕುಳಿತಿದೆ.ಮೊಬೈಲ್ ಕಸಿದುಕೊಂಡು ಆಸ್ಪತ್ರೆ ಪಕ್ಕದ ಮರವೇರಿ ಕುಳಿತಿದ್ದ ಮಂಗ ಆಗಾಗ ಮೊಬೈಲನ್ನು ಎದೆಗೆ ಅವಚಿಕೊಳ್ಳುತ್ತಿತ್ತು. ಕೆಲವೊಮ್ಮೆ ಮೊಬೈಲ್ ಪರದೆ ಗಮನಿಸುತಿತ್ತು. ಇನ್ನು ಕೆಲವೊಮ್ಮೆ ಮೊಬೈಲ್ ಪರದೆ ಮೇಲೆ ಬೆರಳು ಆಡಿಸುತ್ತಾ, ಮೊಬೈಲ್ ಕಿವಿಗೆ ಹಿಡಿದು ಕುಳಿತಿತ್ತು.

ಆಗ ಅಲ್ಲಿದ್ದ ಜನರು ಮಂಗನಿಗೆ ಬಾಳೆಹಣ್ಣು ನೀಡಿ ಮೊಬೈಲ್ ಪಡೆಯುವ ಪ್ರಯತ್ನವನ್ನು ಮಾಡಿದರು ಸಹ ಮಂಗ ಮೊಬೈಲ್‌ನ್ನು ಗಟ್ಟಿಯಾಗಿಯೇ ಹಿಡಿದು ಕುಳಿತಿತ್ತು.ಹೀಗೆ ಸುಮಾರು ಒಂದು ಗಂಟೆಗಳ ಕಾಲ ಮರದ ಕೆಳಗೆ ಮೊಬೈಲ್‌ಗೆ ಕರೆ ಮಾಡಿ, ಗಲಾಟೆ ಮಾಡಿ, ಬಾಳೆಹಣ್ಣು ನೀಡಿ ಮೊಬೈಲ್‌ನ್ನು ಹಿಂಪಡೆಯುವ ಸಾಕಷ್ಟು ಪ್ರಯತ್ನಗಳು ನಡೆಯಿತು.
ಆದರೆ ಮಂಗ ತನ್ನಷ್ಟಕ್ಕೆ ತಾನು ಮಾತ್ರ ಮೊಬೈಲ್ ನೋಡುತ್ತಾ ಅದನ್ನು ಕಿವಿಗೆ ಇಟ್ಟುಕೊಂಡು ಸಾಕಷ್ಟು ಚೇಷ್ಟೆ ಮಾಡುತ್ತಿತ್ತು. ಅದನ್ನು ನೋಡಲು ರಸ್ತೆಯಲ್ಲಿ ಹಲವಾರು ಜನ ಸೇರಿದ್ದರು. ಇದರಿಂದ ಕೆಲಕಾಲ ರಸ್ತೆಯಲ್ಲಿ ಸಂಚಾರ ದಟ್ಟಣೆಯೂ ಸಹ ಆಯಿತು. ಅದು ಸಹ ಭಯದಿಂದ ಕೆಳಗೆ ಬರಲೇ ಇಲ್ಲ.
ಕೊನೆಗೆ ಮಂಗವು ಬಾಳೆ ಹಣ್ಣನ್ನು ನೊಡಿ ಆಸ್ಪತ್ರೆಯ ಸ್ಲ್ಯಾಬ್ ಮೇಲೆ ಬಂದಿತು. ಆಗ ಯುವಕರು ಪಟಾಕಿ ಸಿಡಿಸಿದರು.ಇದರಿಂದ ಭಯಗೊಂಡ ಮಂಗ ಮೊಬೈಲ್‌ನ್ನು ಕೈಬಿಟ್ಟು ಬಾಳೆಹಣ್ಣು ತೆಗೆದುಕೊಂಡು ಹೋಯಿತು.