ಶಿವಮೊಗ್ಗ ಜಿಲ್ಲೆಯಲ್ಲಿ”ಅಂತರಾಷ್ಟ್ರೀಯ ಮಾದಕ ದ್ರವ್ಯ ವ್ಯಸನ ವಿರೋಧಿ ದಿನಾಚರಣೆ” ಹಿನ್ನೆಲೆಯಲ್ಲಿ ಮಾದಕ ವಸ್ತು ಗಾಂಜಾ ವಿರುದ್ಧ ವಿದ್ಯಾರ್ಥಿಗಳು ಹಾಗೂ ಯುವ ಜನತೆಯಲ್ಲಿ ಅರಿವು ಮೂಡಿಸುವ ಸಂಬಂಧ, ದಿನಾಂಕ : 24-ಜೂನ್ -2025 ರ ಇಂದು ಶಿವಮೊಗ್ಗ ಜಿಲ್ಲೆಯಾದ್ಯಂತ ವಿವಿಧ ಶಾಲಾ ಕಾಲೇಜುಗಳಲ್ಲಿ ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿ,
ಆಯಾ ವ್ಯಾಪ್ತಿಯ ಪೊಲೀಸ್ ಠಾಣೆಗಳ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು ಅರಿವು ಕಾರ್ಯಕ್ರಮವನ್ನು ಆಯೋಜಿಸಿ, ವಿದ್ಯಾರ್ಥಿಗಳಿಗೆ ಮಾದಕ ವಸ್ತು ಗಾಂಜಾ ಕುರಿತಂತೆ ಈ ಕೆಳಕಂಡ ಮಾಹಿತಿ ತಿಳಿಸಿದರು.

ಯಾವುದೇ ರೂಪದ ಮಾದಕ ವಸ್ತುಗಳು ಜೀವಕ್ಕೆ ತುಂಬಾ ಅಪಾಯಕಾರಿಯಾಗಿದ್ದು, ಮಾರಕವಾಗಿ ಪರಿಣಮಿಸುತ್ತವೆ. ಮೊದಮೊದಲು ಮೋಜು, ಮಸ್ತಿ, ಕುತೂಹಲ ಹಾಗೂ ಶೋಕಿಗೆಂದು ಶುರು ಮಾಡುವ ಅಭ್ಯಾಸಗಳು ನಂತರ ದುಶ್ಚಟಗಳಾಗಿ ಮಾರ್ಪಾಡಾಗಿ, ಜೀವನವನ್ನು ಹಾಳು ಮಾಡುತ್ತವೆ ಎಂದು ತಿಳಿಸಿದರು.
ಒಂದು ಬಾರಿ ಮಾದಕ ದ್ರವ್ಯದ ದುಶ್ಚಟಕ್ಕೆ ತುತ್ತಾದರೆ, ಅದರಿಂದ ಹೊರಬರುವುದು ಕಷ್ಟ ಸಾಧ್ಯವಿರುತ್ತದೆ. ನಿಜವಾದ ಸ್ನೇಹಿತರು ಯಾವುದೇ ಕಾರಣಕ್ಕೂ ನಿಮಗೆ ದುಶ್ಚಟಗಳನ್ನು ಮಾಡಲು ಹೇಳುವುದಿಲ್ಲ, ಆದ್ದರಿಂದ ನೀವು ನಿಮ್ಮ ಸ್ನೇಹಿತರ ಬಗ್ಗೆ ತಿಳಿದುಕೊಂಡು, ಉತ್ತಮವಾದವರ ಸಹವಾಸ ಮಾಡಿ ಎಂದು ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡಿದರು.

ಪೋಷಕರು ನಿಮ್ಮ ಮಕ್ಕಳಲ್ಲಾಗುವ ಬದಲಾವಣೆಗಳ ಬಗ್ಗೆ ಗಮನ ಹರಿಸಿ, ಎಷ್ಟೋ ಬಾರಿ ಪ್ರಾರಂಭದ ಹಂತದಲ್ಲಿಯೇ ಮಾದಕ ವ್ಯಸನದ ಬಗ್ಗೆ ತಿಳಿದುಕೊಂಡರೆ, ಪರಿಹಾರ ಮಾರ್ಗ ಸುಲಭವಾಗಿರುತ್ತದೆ ಎಂದು ಮಾಹಿತಿ ನೀಡಿದರು. ವಿಧ್ಯಾರ್ಥಿಗಳ ಜೀವನದಲ್ಲಿ ಶಿಕ್ಷಕರ ಪಾತ್ರವು ತುಂಬಾ ಪ್ರಮುಖವಾಗಿದ್ದು, ಶಿಕ್ಷಕರು ಸಹಾ ವಿಧ್ಯಾರ್ಥಿಗಳಿಗೆ ಮಾದಕ ದ್ರವ್ಯದ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಡಿ ಎಂದರು.
ಮಾದಕ ದ್ರವ್ಯ ಸೇವನೆಯು ದೈಹಿಕ, ಮಾನಸಿಕ, ಕೌಟುಂಬಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಜೀವನ ಈ ಎಲ್ಲದರ ಮೇಲೂ ದುಷ್ಪರಿಣಾಮವನ್ನು ಬೀರುತ್ತದೆ. ಆದ್ದರಿಂದ ಮಾದಕ ದ್ರವ್ಯಗಳಿಂದ ದೂರವಿರಿ ಎಂದು ತಿಳಿಸಿದರು.

ನಂತರ ಮಾದಕ ದ್ರವ್ಯದ ವಿರುದ್ಧ ಪ್ರತಿಜ್ಞೆಯನ್ನು ಸ್ವೀಕರಿಸುವ ಮೂಲಕ, ಎಲ್ಲರು ಸೇರಿ ಮಾದಕ ದ್ರವ್ಯ ಮುಕ್ತ ಸಮಾಜಕ್ಕಾಗಿ ಶ್ರಮಿಸೋಣವೆಂದು ಪ್ರತಿಜ್ಞೆ ಮಾಡಲಾಯಿತು.