ಎರಡು ಕಾರುಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಓರ್ವರು ಸ್ಥಳದಲ್ಲಿಯೇ ಮೃತಪಟ್ಟು, ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ತೀರ್ಥಹಳ್ಳಿ ತಾಲೂಕಿನ ಶಿವರಾಜಪುರ ಬಳಿ ಏ.10 ರ ಮುಂಜಾನೆ ನಡೆದಿದೆ.
ತೀರ್ಥಹಳ್ಳಿ ಪಟ್ಟಣದ ಡಿಸಿಸಿ ಬ್ಯಾಂಕ್ ಶಾಖೆಯ ಕ್ಯಾಷಿಯರ್ ಶಾಶ್ವತ್ (30) ಮೃತಪಟ್ಟವರೆಂದು ಗುರುತಿಸಲಾಗಿದೆ. ಇವರು ಕೊಂಡ್ಲುರು ಸಮೀಪದ ನೇರಳಮನೆಯ ನಿವಾಸಿಯಾಗಿದ್ಧಾರೆ.
ಮುಂಜಾನೆ 2 ರಿಂದ 2.30 ರ ನಡುವೆ ಘಟನೆ ಸಂಭವಿಸಿದೆ ಎಂದು ಹೇಳಲಾಗಿದ್ದು, ಗಾಯಾಳುಗಳನ್ನು ತೀರ್ಥಹಳ್ಳಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.


ಕ್ಯಾಷಿಯರ್ ಶಾಶ್ವತ್ ಇದ್ದ ಮಾರುತಿ ಸುಜುಕಿ ಎಸ್ಟಿಮೋ ಕಾರು ಆಗುಂಬೆ ಕಡೆಯಿಂದ ತೀರ್ಥಹಳ್ಳಿಯೆಡೆಗೆ ಹಾಗೂ ಬೊಲೆರೋ ಕಾರು ತೀರ್ಥಹಳ್ಳಿ ಕಡೆಯಿಂದ ಆಗುಂಬೆ ಕಡೆಗೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.
ಶಾಶ್ವತ್ ಇದ್ದ ಕಾರಿನಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದು, ಬೊಲೆರೋ ಕಾರಿನಲ್ಲಿ ಚಾಲಕ ಮಾತ್ರ ಇದ್ದ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ತೀರ್ಥಹಳ್ಳಿ ಪೊಲೀಸ್ ಠಾಣೆ ಇನ್ಸ್’ಪೆಕ್ಟರ್ ಇಮ್ರಾನ್ ಬೇಗ್ ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ.