ಶಿವಮೊಗ್ಗ ಗ್ರಾಮಾಂತರ ತಾಲೂಕಿನ ಹಂಚಿನ ಸಿದ್ದಾಪುರ ಗ್ರಾಮದಲ್ಲಿ ಕುಸಿದು ಬಿದ್ದಿರುವ ಭದ್ರಾ ಕಾಲುವೆಯ ಜನ ಸಂಪರ್ಕ ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಮಧು ಬಂಗಾರಪ್ಪ ಭರವಸೆ ನೀಡಿದರು.
ಹಂಚಿನ ಸಿದ್ದಾಪುರಕ್ಕೆ ಭೇಟಿ ನೀಡಿ, ಭದ್ರಾ ಕಾಲುವೆಯ ಜನ ಸಂಪರ್ಕ ಸೇತುವೆಯನ್ನು ವೀಕ್ಷಿಸಿದ್ದು, “ಸ್ಥಳೀಯ ಗ್ರಾಮಸ್ಥರು ತಮ್ಮ ತೋಟ ಹಾಗೂ ಗದ್ದೆಗಳಿಗೆ ಹೋಗಲು ತೊಂದರೆ ಉಂಟಾಗುತ್ತಿದೆ, ಶೀಘ್ರವಾಗಿ ನೂತನ ಸೇತುವೆ ನಿರ್ಮಾಣ ಕಾಮಗಾರಿ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ, ಶೀಘ್ರದಲ್ಲಿಯೇ ನೂತನ ಸೇತುವೆ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗುವುದು” ಎಂದು ಹೇಳಿದರು.
ಬಳಿಕ ಹಂಚಿನ ಸಿದ್ದಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿನೀಡಿದ ವೇಳೆ ಶಾಲಾ ಮಕ್ಕಳು ಅತ್ಯಂತ ಪ್ರೀತಿಯಿಂದ ಸ್ವಾಗತಿಸಿದರು. ಈ ವೇಳೆ, “ಹೆದ್ದಾರಿಯಲ್ಲಿ ವಾಹನಗಳು ಎಡಬಿಡದೆ ಸಂಚರಿಸುತ್ತಿರುತ್ತವೆ. ಇದರಿಂದ ಪಕ್ಕದಲ್ಲಿರುವ ಶಾಲೆಯ ಮಕ್ಕಳಿಗೆ ತೊಂದರೆಯಾಗದಂತೆ ಹಾಗೂ ಅಪಘಾತ ಸಂಭವಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಮನವಿ ಮೇರೆಗೆ ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ಜನಪ್ರತಿನಿಧಿಗಳು, ಮುಖಂಡರು, ಎಸ್‌ಡಿಎಂಸಿ ಸದಸ್ಯರು ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಇದ್ದರು.