ಶಿವಮೊಗ್ಗ ಜಿಲ್ಲೆಯಾದ್ಯಂತ ರೌಡಿ ಶೀಟರ್ ಗಳ ಮನೆಗಳ ಮೇಲೆ ಏಕಕಾಲದಲ್ಲಿಯೇ ಪೊಲೀಸರು ದಿಢೀರ್ ದಾಳಿ ನಡೆಸಿ, ತಪಾಸಣೆ ನಡೆಸಿದ ಘಟನೆ ಮೇ 7 ರ ಮುಂಜಾನೆ ನಡೆದಿದೆ.ಕಾನೂನು – ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ, ಮುಂಜಾಗ್ರತ ಕ್ರಮವಾಗಿ ರೌಡಿ ಶೀಟರ್ ಗಳ ಮನೆಗಳ ಮೇಲೆ ದಾಳಿ ನಡೆಸಿ ತಪಾಸಣೆ ನಡೆಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ಇಲಾಖೆ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

ದಾಳಿಯ ವೇಳೆ ರೌಡಿಗಳ ಮನೆಗಳಲ್ಲಿ ತಪಾಸಣೆ ನಡೆಸಲಾಗಿದೆ. ಮಾದಕ ವಸ್ತು ಸಂಗ್ರಹ, ಮಾರಕಾಸ್ತ್ರಗಳಿರುವ ಬಗ್ಗೆ ಶೋಧ ಮಾಡಲಾಗಿದೆ. ಜೊತೆಗೆ ಅವರು ಮಾಡುತ್ತಿರುವ ವೃತ್ತಿ ಮತ್ತಿತರ ವಿಷಯಗಳ ವಿವರಗಳನ್ನು ಕಲೆ ಹಾಕಲಾಗಿದೆ.ಯಾವುದೇ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು. ಶಾಂತಿಗೆ ಭಂಗವುಂಟು ಮಾಡುವ ಕೃತ್ಯಗಳಲ್ಲಿ ತೊಡಗದಂತೆ ರೌಡಿ ಶೀಟರ್ ಗಳಿಗೆ ಎಚ್ಚರಿಕೆ ನೀಡಲಾಗಿದೆ’ ಎಂದು ಪೊಲೀಸ್ ಇಲಾಖೆ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಎಸ್ಪಿ ಜಿ ಕೆಮಿಥುನ್ ಕುಮಾರ್ ಜಿ ಕೆ, ಎಎಸ್ಪಿ ಅನಿಲ್ ಕುಮಾರ್ ಭೂಮರಡ್ಡಿ ಮಾರ್ಗದರ್ಶನದಲ್ಲಿ ಶಿವಮೊಗ್ಗ ಎ ಉಪ ವಿಭಾಗದಲ್ಲಿ ಡಿವೈಎಸ್ಪಿ ಬಾಬು ಆಂಜನಪ್ಪ, ಶಿವಮೊಗ್ಗ ಬಿ ಉಪ ವಿಭಾಗದಲ್ಲಿ ಸಂಜೀವ್ ಕುಮಾರ್ ಟಿ, ಭದ್ರಾವತಿ ಉಪ ವಿಭಾಗದಲ್ಲಿ ಡಿವೈಎಸ್ಪಿ ನಾಗರಾಜ್, ಸಾಗರ ಉಪ ವಿಭಾಗದಲ್ಲಿ ಡಿವೈಎಸ್ಪಿ ಗೋಪಾಲಕೃಷ್ಣ ತಿಮ್ಮಣ್ಣ ನಾಯ್ಕ್, ಶಿಕಾರಿಪುರ ಉಪ ವಿಭಾಗದಲ್ಲಿ ಡಿವೈಎಸ್ಪಿ ಕೇಶವ್ ಮತ್ತು ತೀರ್ಥಹಳ್ಳಿ ಉಪ ವಿಭಾಗದಲ್ಲಿ ಡಿವೈಎಸ್ಪಿ ಅರವಿಂದ್ ಕಲಗುಜ್ಜಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.
ದಾಳಿಯ ವೇಳೆ ಆಯಾ ಪೊಲೀಸ್ ಠಾಣೆಗಳ ಇನ್ಸ್’ಪೆಕ್ಟರ್, ಸಬ್ ಇನ್ಸ್’ಪೆಕ್ಟರ್ ಹಾಗೂ ಸಿಬ್ಬಂದಿಗಳು ಭಾಗಿಯಾಗಿದ್ದರು ಎಂದು ಪೊಲೀಸ್ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.