ಶಿವಮೊಗ್ಗ, ರಾಜೀಯಾಗಬಹುದಾದ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳನ್ನು ಸುಲಭವಾಗಿ ಮತ್ತು ಶೀಘ್ರವಾಗಿ ಇತ್ಯರ್ಥಪಡಿಸುವ ಲೋಕ್ ಅದಾಲತ್ ಕಾರ್ಯಕ್ರಮ ಜು..12 ರಂದು ಜಿಲ್ಲೆಯಲ್ಲಿ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳು ಇತ್ಯರ್ಥವಾಗಿ ಲೋಕ್ ಅದಾಲತ್ ಯಶಸ್ವಿಯಾಗಲು ಎಲ್ಲರೂ ಸಹಕರಿಸಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥ್ ನಾಯಕ್ ಮನವಿ ಮಾಡಿದರು.
ಲೋಕ್ ಅದಾಲತ್ ಕುರಿತು ಚರ್ಚಿಸಲು ಗುರುವಾರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನ್ಯಾಯಾಧೀಶರು, ಅಧಿಕಾರಿಗಳು, ಅಭಿಯೋಜಕರು, ಇನ್ಶೂರೆನ್ಸ್ ಕಂಪೆನಿಗಳ ಅಧಿಕಾರಿಗಳೊಂದಿಗೆ ನಡೆಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ಲೋಕ್ ಅದಾಲತ್‌ನಲ್ಲಿ ಶಿವಮೊಗ್ಗ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಇತ್ಯರ್ಥಕ್ಕಾಗಿ ಬಾಕಿ ಇರುವ ಸಿವಿಲ್, ವೈವಾಹಿಕ, ಮೋಟಾರು ಪರಿಹಾರ ಪ್ರಕರಣಗಳು, ಚೆಕ್‌ಬೌನ್ಸ್ ಪ್ರಕರಣಗಳು ಸೇರಿದಂತೆ ರಾಜೀಯಾಗಬಹುದಾದ ಸಿವಿಲ್, ಕ್ರಿಮಿನಲ್ ಪ್ರಕರಣಗಳನ್ನು ಇತ್ಯರ್ಥ ಮಾಡಲಾಗುವುದು. ಬ್ಯಾಂಕುಗಳಿಗೆ ಸಂಭ ಂಧಿಸಿದ ಸಾಲದ ಹಣದ ವಸೂಲಾತಿ ಪ್ರಕರಣಗಳು. ವಿದ್ಯುಚ್ಛಕ್ತಿ, ಜಲಮಂಡಳಿ ಹಾಗೂ ನ್ಯಾಯಾಲಯಕ್ಕೆ ಬರಬಹುದಾದಂತಹ ಇತರೆ ಯಾವುದೇ ಪ್ರಕರಣಗಳನ್ನು ಪೂರ್ವ ವ್ಯಾಜ್ಯ ಪ್ರಕರಣಗಳೆಂದು ಪರಿಗಣಿಸಿ, ಅವುಗಳಲ್ಲಿ ಸಹ ಉಭಯ ಕಕ್ಷಿದಾರರನ್ನು ಕರೆಸಿಕೊಂಡು ರಾಜಿ ಸಂಧಾನದ ಮೂಲಕ ವಿವಾದಗಳನ್ನು ಬಗೆಹರಿಸಿ ಅವಾರ್ಡ್ ಪಾಸು ಮಾಡಲಾಗುವುದು.
ಈ ಬಾರಿ ‘ಸಾಥಿ’ ಅಭಿಯಾನದಡಿ ಪರಿತ್ಯಕ್ತ, ಪೋಷಕರಿಲ್ಲದ ಮಕ್ಕಳಿಗೆ ಆಧಾರ್ ಮಾಡಿಸಲಾಗುತ್ತಿದ್ದು, ಅದಕ್ಕೆ ಅಗತ್ಯವಾದ ಜನನ ಪ್ರಮಾಣ ಪತ್ರವನ್ನು ಪಾಲಿಕೆಯವರು ಮಾಡಿಕೊಡಬೇಕೆಂದರು. ಹಾಗೂ ಇನ್ಶೂರೆನ್ಸ್ ಕಂಪೆನಿಗಳು, ವಿವಿಧ ಇಲಾಖೆಗಳು ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಸಹಕರಿಸಬೇಕೆಂದರು. ದಿನಾಂಕ 14-12-2024 ರಂದು ನಡೆದ ಲೋಕ್ ಅದಾಲತ್‌ನಲ್ಲಿ ಒಟ್ಟು 13,393 ಪ್ರಕರಣಗಳು ವಿಲೇವಾರಿ ಆಗಿವೆ. ದಿನಾಂಕ 08-03-2025 ರಂದು ನಡೆದ ಲೋಕ್ ಅದಾಲತ್ ನಲ್ಲಿ 13,808 ವಿಲೇವಾರಿ ಆಗಿದ್ದು,
ದಿನಾಂಕ: 12-07-2025 ರಂದು ನಡೆಯಲಿರುವ ಲೋಕ್ ಅದಾಲತ್‌ಗೆ ಈಗಾಗಲೇ 14,014 ಪ್ರಕರಣಗಳನ್ನು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದ ಅವರು ಕಳೆದ ಬಾರಿ ವಿವಿಧ ಪ್ರಕರಣಗಳನ್ನು ಇತ್ಯರ್ಥಪಡಿಸಲು ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ್ ಎಂ.ಎಸ್. ಒಂದನೇ ಮತ್ತು ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ, ಸರ್ಕಾರಿ ಅಭಿಯೋಜಕರು, ಇನ್ಶೂರೆನ್ಸ್ ಕಂಪೆನಿ ಅಧಿಕಾರಿಗಳು, ಅಬಕಾರಿ, ಅರಣ್ಯ, ಮೆಸ್ಕಾಂ, ಬ್ಯಾಂಕುಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.