ಶಿವಮೊಗ್ಗ ತಾಲೂಕಿನ ಕೋಟೆಗಂಗೂರು ಗ್ರಾಮದ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಬಸ್‌ಗಳನ್ನು ಬಿಡಬೇಕೆಂದು ಆಗ್ರಹಿಸಿ ಇಲ್ಲಿನ ಸ್ವಸಹಾಯ ಸಂಘದವರು ಮತ್ತು ನಿವಾಸಿಗಳು ಗುರುವಾರ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಈ ಗ್ರಾಮಕ್ಕೆ ಶಾಲೆ ಮಕ್ಕಳಿಗೆ ಅನುಕೂಲ ಆಗುವ ಹಾಗೆ ಬೆಳಗ್ಗೆ ೮.೧೫ ಮತ್ತು ಸಂಜೆ ೫.೧೫ಕ್ಕೆ ಮಾತ್ರ ಬಸ್ ಬರುತ್ತಿದೆ. ಉಳಿದ ವೇಳೆ ಬಸ್ ಸೌಕರ್ಯವಿಲ್ಲ. ಸರ್ಕಾರ ಮಹಿಳೆಯರಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಿದೆ. ಆದರೆ ಅದರ ಪ್ರಯೋಜನ ಪಡೆಯಲು ಬಸ್ ಇಲ್ಲದಾಗಿದೆ.
ಗ್ರಾಮದಿಂದ ವಿವಿಧ ಕೆಲಸ-ಕಾರ್ಯಗಳಿಗೆ ನಗರಕ್ಕೆ ಬರುವವರಿಗೆ ಬಸ್ ಸೌಕರ್ಯವೇ ಇಲ್ಲದಾಗಿದೆ. ಇದರಿಂದ ಖಾಸಗಿ ವಾಹನಕ್ಕೆ ಹೆಚ್ಚಿನ ಬೆಲೆ ತೆತ್ತ್ತು ಬರುವಂತಾಗಿದೆ ಎಂದು ಮನವಿಯಲ್ಲಿ ವಿವರಿಸಿದ್ದಾರೆ.
ಈ ಹಿಂದೆ ಕುವೆಂಪು ರಂಗಮಂದಿರದಲ್ಲಿ ನಡೆದ ಅಹವಾಲು ಸ್ವೀಕಾರ ಸಭೆಯಲ್ಲೂ ಈ ವಿಷಯದ ಬಗ್ಗೆ ಮನವಿ ಸಲ್ಲಿಸಲಾಗಿತ್ತು. ಇದರಿಂದ ಶಾಲಾ ಮಕ್ಕಳಿಗೆ ಅನುಕೂಲ ಕಲ್ಪಿಸಲಾಗಿದೆ. ಆದರೆ ಸಾರ್ವಜನಿಕರು ತಮ್ಮ ಕೆಲಸಕ್ಕಾಗಿ ಪೇಟೆಗೆ ಬರಲು ಅನುಕೂಲವಾಗುವಂತೆ ಬಸ್ ಸೌಕರ್ಯ ಕಲ್ಪಿಸಬೇಕೆಂದು ಆಗ್ರಹಿಸಿರುವ ಅವರು,
ಈ ರಸ್ತೆಯಲ್ಲಿ ದುಷ್ಟರ ಕಾಟ ಹೆಚ್ಚಿದೆ. ಹೆಣ್ಣುಮಕ್ಕಳು, ಹೆಂಗಸರು ನಡೆದುಕೊಂಡು ಪೇಟೆಗೆ ಬರುವಂತಿಲ್ಲ. ಗರ್ಭಿಣಿಯರು, ಅನಾರೋಗ್ಯಕ್ಕೊಳಗಾದವರೂ ಸಹ ಬರಲು ಸಾಧ್ಯವಾಗುತ್ತಿಲ್ಲ. ಕಾಲೇಜು ಮಕ್ಕಳಿಗೂ ಈಗಿರುವ ಬಸ್ ಸೌಲಭ್ಯದಿಂದ ಲಾಭವಾಗುತ್ತಿಲ್ಲ ಎಂದು ವಿವರಿಸಿದ್ದಾರೆ. ಆದ್ದರಿಂದ ನಾಗರಿಕರ ಅನುಕೂಲಕ್ಕೆ ತಕ್ಕಂತೆ ಬಸ್ ಬಿಡಬೇಕೆಂದು ಆಗ್ರಹಿಸಿದ್ದಾರೆ.