ಶಿವಮೊಗ್ಗ, ದೆಹಲಿಯಲ್ಲಿ ಈ ಬಾರಿ ನಡೆಯಲಿರುವ ಸ್ವಾತ್ರಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಸಾಗರ ತಾಲ್ಲೂಕಿನ ದಂಪತಿಯೊಬ್ಬರಿಗೆ ವಿಶೇಷ ಆಹ್ವಾನ ಲಭಿಸಿದೆ.
ಸಾಗರ ತಾಲ್ಲೂಕಿನ ತ್ಯಾಗರ್ತಿ ಸಮೀಪದ ಉಳ್ಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಮಂಚಾಲೆ ಗ್ರಾಮದ ಪ್ರಗತಿಪರ ರೈತ ಹಾಗೂ ಆಯುರ್ವೇದ ಸಸ್ಯಗಳ ಸಂರಕ್ಷಕ ಪ್ರಕಾಶ್ ರಾವ್ ಮಂಚಾಲೆ ಮತ್ತು ಅವರ ಪತ್ನಿ ಶಾಂತಾ ಅವರಿಗೆ ಗೌರವಪೂರ್ವಕವಾಗಿ ಕೇಂದ್ರ ಸರ್ಕಾರ ಸ್ವತಂತ್ರೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಿದೆ.
ಭಾರತೀಯ ಆಯುಷ್ ಇಲಾಖೆ ಪ್ರಕಾಶ್ ರಾವ್ ಅವರ ಸಾಧನೆಯನ್ನು ಗೌರವಿಸಿ ಈ ಆಹ್ವಾನ ನೀಡಿದೆ.

ಪ್ರಕಾಶ್ರವರು ಎರಡು ಎಕರೆ ಜಮೀನಿನಲ್ಲಿ ಕಾಳುಮೆಣಸು, ಮಧುನಾಶಿನಿ, ಕ್ಯಾನ್ಸರ್ ರೋಗಕ್ಕೆ ಔಷಧಿಯಾದ ನ್ಯಾಪಿಯ, ಮಧುಮೇಹಕ್ಕೆ ಸಹಕಾರಿಯಾಗಿರುವ ವಿನಾಯಕ ಬಳ್ಳಿ, ಅರಿಶಿನ, ದಾಲ್ಚಿನ್ನಿ, ನಿಂಬೆ ಸೇರಿ ಹಲವಾರು ಗಿಡಮೂಲಿಕೆ ಸಸ್ಯಗಳನ್ನು ಬೆಳಯುತ್ತಿದ್ದಾರೆ.
ಆರ್ಯುವೇದಕ್ಕೆ ಸಂಬಂಧಿಸಿದಂತೆ ವಿಶೇಷ ಜ್ಞಾನ ಹೊಂದಿರುವ ಇವರ ಕೃಷಿ ವಿಧಾನವನ್ನು ರಾಜ್ಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲಾಗಿದೆ.
ಉತ್ತಮ ಕೃಷಿಕ ಹೆಸರಿನ ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಪಡೆದಿರುವ ಇವರನ್ನು ಗುರುತಿಸಿ ಭಾರತೀಯ ಆಯುಷ್ ಇಲಾಖೆಯು ಗಿಡಮೂಲಿಕೆ ಸಸ್ಯಗಳನ್ನು ಬೆಳೆಸುವ ಕಾರ್ಯಕ್ರಮಗಳಲ್ಲಿ ಕೈ ಜೋಡಿಸಿದೆ ಮತ್ತು ಈ ಬಾರಿಯ ಸ್ವತಂತ್ರೊತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿದೆ.