ಸ್ಮಾರ್ಟ್ ಸಿಟಿಯ ಮುಖ್ಯ ಗುರಿಯೆಂದರೆ ನಗರ ಕಾರ್ಯಗಳನ್ನು ಅತ್ಯುತ್ತಮವಾಗಿಸುವುದು ಮತ್ತು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವುದು. ಸ್ಮಾರ್ಟ್ ತಂತ್ರಜ್ಞಾನಗಳು ಮತ್ತು ದತ್ತಾಂಶ ವಿಶ್ಲೇಷಣೆಯನ್ನು ಬಳಸಿಕೊಂಡು ನಾಗರಿಕರ ಜೀವನದ ಗುಣಮಟ್ಟವನ್ನು ಸುಧಾರಿಸುವುದು. ಸ್ಮಾರ್ಟ್ ಸಿಟಿ ಎಂದರೆ ಎಲ್ಲರ ಕಲ್ಪನೆಯಲ್ಲೊಂದು ಫ್ಯಾಂಟಸಿ ಲೋಕ ಸೃಷ್ಟಿಯಾಗುತ್ತದೆ. ಬಹುಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಭಾರೀ ನಿರೀಕ್ಷೆ ಹುಟ್ಟಿಸಿಕೊಂಡು ಅನುಷ್ಠಾನಗೊಂಡ ಶಿವಮೊಗ್ಗ ಸ್ಮಾರ್ಟ್ ಸಿಟಿ ಲಿಮಿಟೆಡ್, ನಗರವನ್ನು ಕೊಳಚೆಗಿಂತಲೂ ಕಡೆಯಾಗಿ ಮಾಡಿದೆ.
ನಗರದ ಮಧ್ಯ ಭಾಗದಲ್ಲೇ ಒಳಚರಂಡಿಗಳು ತುಂಬಿ ರಸ್ತೆ ಮೇಲೆ ಹರಿಯುತ್ತಿವೆ. ನಗರದ ಎಲ್ಲಾ ತ್ಯಾಜ್ಯ ಒಟ್ಟಾಗಿ ಸೇರಿ ರಾಜ ರಸ್ತೆಗೆ ಬಂದು ನಗರವಾಸಿಗಳಿಗೆ ಸಾಕಪ್ಪಾ ಸಾಕು ಅನ್ನುವಷ್ಟು ದರ್ಶನ ಭಾಗ್ಯ ಕೊಡುತ್ತಿವೆ.
ಶಿವಮೊಗ್ಗ ನಗರ ಮಧ್ಯೆ ಇರುವ ಪ್ರತಿಷ್ಠಿತ ಬಡಾವಣೆಗಳಾದ ರವೀಂದ್ರ ನಗರ-ರಾಜೇಂದ್ರ ನಗರದ ಮಧ್ಯೆ ಹರಿದು ಹೋಗುತ್ತಿರುವ ಚಾನೆಲ್ ನ ಅಮೋಘ ದೃಶ್ಯಗಳಿವು.

ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಇಲ್ಲಿ ಸುಂದರ ಪಾರ್ಕ್ ನಿರ್ಮಾಣವಾಗಿದ್ದರೂ ಜನಸಾಮಾನ್ಯರು ಇಲ್ಲಿನ ಪಾರ್ಕ್ ನಲ್ಲಿ ಓಡಾಡಲು ಸಾಧ್ಯವೇ ಇಲ್ಲ. ಅಷ್ಟು ದುರ್ನಾಥ ಬೀರುತ್ತಿದೆ ಚಾನೆಲ್ ನೀರು. ಸೊಳ್ಳೆ ಕಾಟದ ಜೊತೆಗೆ ನಾಗರಿಕರು ಇಲ್ಲಿಯ ಸುತ್ತ ಮುತ್ತ ವಾಸ ಮಾಡಲು ಸಾಧ್ಯವಿಲ್ಲದ ವಾತಾವರಣ ನಿರ್ಮಾಣವಾಗಿದೆ.

ಅತ್ತ ಪಾಲಿಕೆಯಲ್ಲಿ ಜನಪ್ರತಿನಿಧಿಗಳ ಆಡಳಿತ ಇಲ್ಲದೆ, ಇತ್ತ ಸಂಬಂಧ ಪಟ್ಟ ಅಧಿಕಾರಿಗಳು ಗಮನಹರಿಸದಿರುವುದು ಈ ಬಡಾವಣೆಗಳ ಮಧ್ಯೆ ಹರಿದು ಹೋಗಿರುವ ಈ ಚಾನಲ್ ಸ್ಮಾರ್ಟ್ ಸಿಟಿ ಲಿ.ನ ಪರಮ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ.
ಇದರಿಂದ ಅನಾರೋಗ್ಯ ಹಾಗೂ ಸಾಂಕ್ರಾಮಿಕ ರೋಗಕ್ಕೆ ಆಹ್ವಾನ ನಿಶ್ಚಿತ ಎಂದು ಹೇಳಬಹುದು. ಬೇಸಿಗೆ ಆಗಿರುವ ಕಾರಣ ಪ್ರಾಣಿ ಪಕ್ಷಿಗಳು ನೀರು ಇಲ್ಲಿ ಬರುತ್ತವೆ. ಮನುಷ್ಯರು, ಪ್ರಾಣಿ, ಪಕ್ಷಿಳಾದಿಯಾಗಿ ಪರಿಸರದ ಮೇಲೂ ಇದರಿಂದ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ.
ಈ ಸಂಬಂಧ ಶಿವಮೊಗ್ಗ ಮಹಾನಗರ ಪಾಲಿಕೆಯ ಎಇ ಸಿದ್ದಪ್ಪ ಈದಿನ ಡಾಟ್ ಕಾಮ್ ನೊಂದಿಗೆ ಮಾತನಾಡಿ, “ಮುಂದಿನ ವಾರ ಅಥವಾ ಶೀಘ್ರದಲ್ಲಿ ಟೆಂಡರ್ ಪ್ರಕ್ರಿಯೆ ಮಾಡಲಾಗುತ್ತದೆ. ಟೆಂಡರ್ ಆದ ನಂತರ ಚಾನಲ್ ಸ್ವಚ್ಛಗೊಳಿಸುತ್ತೇವೆ” ಎಂದು ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ | ಹೊಸನಗರ ಮನೆಗಳ್ಳನ ಬಂಧನ
ಇನ್ನಾದರೂ ಈ ಕುರಿತು ಮಹಾನಗರ ಪಾಲಿಕೆ ಅಧಿಕಾರಿಗಳು ಎಚ್ಚೆತ್ತು ನಿವಾಸಿಗಳು ಅನುಭವಿಸುತ್ತಿರುವ ತೊಂದರೆಗೆ ಸ್ಪಂದಿಸುತ್ತಾರೆಯೇ? ಎಂದು ಪ್ರಶ್ನಿಸುತ್ತಿದ್ದಾರೆ ಶಿವಮೊಗ್ಗ ಪ್ರಜ್ಞಾವಂತ ಜನ.

ರಾಘವೇಂದ್ರ ರವರು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಉಂಡಿಗನಾಳು ಗ್ರಾಮದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಪದವಿ ಪಡೆದಿರುವ ಇವರು ಈದಿನ ಡಾಟ್ ಕಾಮ್ ಮಾಧ್ಯಮ ಸಂಸ್ಥೆಯಲ್ಲಿ ಕಳೆದ 2023 ರಿಂದ ಶಿವಮೊಗ್ಗ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ವರದಿಗಾರಿಕೆ, ರಾಜಕೀಯ ವಿಶ್ಲೇಷಣೆ,Anchoring, (ನಿರೂಪಣೆ) ವಿಶೇಷ ಸ್ಟೋರಿ ಹಾಗೂ ತನಿಖಾ ವರದಿಗಾರಿಕೆ ಮಾಡುವುದು ಇವರ ಅಚ್ಚು ಮೆಚ್ಚಿನ ಕ್ಷೇತ್ರ.