ಶಿವಮೊಗ್ಗ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಸಚಿವರು ರಾಜ್ಯದಲ್ಲಿ ಮಾರಣಾಂತಿಕ ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಹಾಗೂ ಒಂದರಿಂದ ಹತ್ತನೆ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳು ನಿರಂತರವಾಗಿರಲು ಹಾಗೂ ಅವರಿಗೆ ಸಕಾಲದಲ್ಲಿ ಚಿಕಿತ್ಸೆ ಕೊಡಿಸಲು ಸರ್ಕಾರವು ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಗೆ ಹೊಂದಿಕೊಂಡಂತೆ ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ವಸತಿ ಶಾಲೆಯೊಂದನ್ನು ತೆರೆಯಲು ಉದ್ದೇಶಿಸಿದೆಶನಿವಾರ ಪತ್ರಿಕಾಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ, ಈ ವಿಷಯಕ್ಕೆ ಸಂಬಂಧಿಸಿದಂತೆ ಸ್ವಯಂಸೇವಾ ಸಂಸ್ಥೆಯೊಂದಕ್ಕೆ ಪೂರಕ ಮಾಹಿತಿಯನ್ನು ಸಂಗ್ರಹಿಸಿ, ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಸೂಕ್ತ ಕ್ರಿಯಾ ಯೋಜನೆ ರೂಪಿಸಿ, ಸಲ್ಲಿಸುವಂತೆ ಸೂಚಿಸಲಾಗಿತ್ತು.
ಅದು ನೀಡಿದ ಪ್ರಾಥಮಿಕ ಮಾಹಿತಿಯ ಆಧಾರದ ಮೇಲೆ ರಾಜ್ಯದಲ್ಲಿ ಕ್ಯಾನ್ಸರ್ ಖಾಯಿಲೆಯಿಂದ ಬಾಧಿತರಾಗಿರುವ ಸುಮಾರು ೩೫೦೦ ಮಕ್ಕಳು ಇರಬಹುದೆಂದು ಅಂದಾಜಿಸಲಾಗಿದೆ ಎಂದರು. ಕ್ಯಾನ್ಸರ್ ಗುಣಪಡಿಸಬಹುದಾದ ಕಾಯಿಲೆ ಆಗಿರುವುದರಿಂದ ಅವರ ಶೈಕ್ಷಣಿಕ ಚಟುವಟಿಕೆಗಳು ನಿರಂತರವಾಗಿರಲು ಹಾಗೂ ಅವರಿಗೆ ಸಕಾಲದಲ್ಲಿ ಸರ್ಕಾರದ ವತಿಯಿಂದಲೇ ಚಿಕಿತ್ಸೆ ಕೊಡಿಸಲು ಉದ್ದೇಶಿಸಲಾಗಿದೆ.
ಇದೇ ಸಂದರ್ಭದಲ್ಲಿ ಕ್ಯಾನ್ಸರ್ ಬಾಧಿತ ಮಕ್ಕಳ ಲಾಲನೆ, ಪಾಲನೆ ದೃಷ್ಠಿಯಿಂದ ಪೋಷಕರಿಗೂ ವಸತಿ ಸೌಲಭ್ಯ ಕೊಡಿಸಲು ಗಮನಹರಿಸಲಾಗಿದೆ. ಆರಂಭಿಸಲು ಉದ್ದೇಶಿಸಲಾಗಿರುವ ಕ್ಯಾನ್ಸರ್ ಬಾದಿತ ಮಕ್ಕಳ ಶಾಲೆಗೆ ಆರಂಭದ ಹಂತದಲ್ಲಿ ಸುಮಾರು ೧೫೦೦ಮಕ್ಕಳು ದಾಖಲಾಗಬಹುದಾದ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ ಎಂದರು.
