ಶಿವಮೊಗ್ಗ ನಗರದಲ್ಲಿ ಬೆಳಿಗ್ಗೆ ಖಾಸಗಿ ಬಸ್ ಮತ್ತು ಕಾರು ಡಿಕ್ಕಿಯಾಗಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ ಸುಮಾರು 10 ಜನರು ಗಾಯಗೊಂಡ ಘಟನೆ, ನಗರದ ಎಲ್‌ಎಲ್‌ಆರ್ ರಸ್ತೆಯಲ್ಲಿ ಇಂದು ಬೆಳಗಿನ ಜಾವ ಸಂಭವಿಸಿದೆ. ಬಸ್ ಮತ್ತು ಕಾರಿನ ನಡುವೆ ಇಂದು ಬೆಳಿಗ್ಗೆ 5-15 ರ ಸಮಯದಲ್ಲಿ ಸುಮಾರಿಗೆ ನಡೆದಿದೆ.ಕಾರಿನಲ್ಲಿದ್ದ ಬೆಂಗಳೂರು ಮೂಲದ ಪ್ರದೀಪ್ ಎಂಬುವವರು ಸಾವನ್ನಪ್ಪಿದ್ದಾರೆ.
ಬೆಂಗಳೂರಿನ ನಿವಾಸಿ ಪ್ರದೀಪ್ (50) ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ಇವರು ಶಿವಮೊಗ್ಗದ ಸೌಭಾಗ್ಯ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಮದುವೆ ಸಮಾರಂಭದಲ್ಲಿ ಭಾಗವಹಿಸಲು ಚಾಲಕನೊಂದಿಗೆ ಕಾರಿನಲ್ಲಿ ಆಗಮಿಸುತ್ತಿದ್ದರು.ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪ್ರದೀಪ್ ಅವರನ್ನು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ.
ಘಟನೆಯಲ್ಲಿ ಎರಡು ವಾಹನಗಳ ಚಾಲಕರು ಹಾಗೂ ಬಸ್ ನಲ್ಲಿದ್ದ 8 ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸರ್ಕಾರಿ ಮೆಗ್ಗಾನ್ ಹಾಗೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಸದ್ಯಕ್ಕೆ ಮೆಗ್ಗಾನ್ ನಲ್ಲಿ ಇಬ್ಬರು ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಉಳಿದ ಆರು ಜನ ಸರ್ಜಿ ಆಸ್ಪತ್ರೆಗೆ ಶಿಫ್ಟ್ ಆಗಿದ್ದಾರೆ.
ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಆಗಮಿಸಿದ್ದ ವಿವೇಕ ಟ್ರಾವೆಲ್ಸ್ ಖಾಸಗಿ ಬಸ್, ತದನಂತರ ಸಾಗರಕ್ಕೆ ತೆರಳಬೇಕಾಗಿತ್ತು. ಎಲ್ಎಲ್ಆರ್ ರಸ್ತೆಯಲ್ಲಿ ಬಸ್ ತೆರಳುತ್ತಿದ್ದ ವೇಳೆ, ಖಾಸಗಿ ಬಸ್ ರಾಯಲ್ ಆರ್ಕಿಡ್ ಹೊಟೇಲ್ ಎದುರು ಬಿ.ಹೆಚ್.ರಸ್ತೆಯಿಂದ ಎಲ್‌ಎಲ್‌ಆರ್ ರಸ್ತೆಯಲ್ಲಿ ತೆರಳುತ್ತಿತ್ತು.
ಈ ಸಂದರ್ಭ ಗೋಪಿ ಸರ್ಕಲ್ ಕಡೆಯಿಂದ ಸವರ್‌ಲೈನ್ ರಸ್ತೆಯಲ್ಲಿ ತೆರಳುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ.ಅಪಘಾತದ ಬಳಿಕ ಬಸ್ಸು ಪಕ್ಕದ ಕಟ್ಟಡಕ್ಕೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಬಸ್ಸಿನ ಮುಂಭಾಗ ನಜ್ಜುಗುಜ್ಜಾಗಿದೆ. ಕಾರು ಕೂಡ ಜಖಂ ಆಗಿದೆ.
ಕಿರಿದಾದ ರಸ್ತೆಯಲ್ಲಿ ಮಿತಿಮೀರಿದ ವೇಗ, ಅಜಾಗರೂಕ ಚಾಲನೆಯಿಂದ ಅವಘಡ ಸಂಭವಿಸಿದೆ.ಪಶ್ಚಿಮ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.ಘಟನಾ ಸ್ಥಳಕ್ಕೆ ಎಸ್ಪಿ ಜಿ ಕೆ ಮಿಥುನ್ ಕುಮಾರ್, ಎಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಡಿವೈಎಸ್ಪಿ ಸಂಜೀವ್ ಪಾಟೀಲ್, ಟ್ರಾಫಿಕ್ ಸರ್ಕಲ್ ಇನ್ಸ್’ಪೆಕ್ಟರ್ ದೇವರಾಜ್, ಪಶ್ಚಿಮ ಟ್ರಾಫಿಕ್ ಠಾಣೆ ಸಬ್ ಇನ್ಸ್’ಪೆಕ್ಟರ್ ಗಳಾದ ತಿರುಮಲೇಶ್, ಭಾರತಿ ಬಿ ಹೆಚ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.