ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕು ವಸವೆ ಗ್ರಾಮದ ರೈತ ಶ್ರೀಧರ್ ಎನ್ನುವವರ ತೋಟವನ್ನು ಕಾನೂನುಬಾಹಿರವಾಗಿ ನಾಶಪಡಿಸಿದ ಹೊಸನಗರ ತಹಶೀಲ್ದಾರ್ ರಶ್ಮಿ ಹಾಲೇಶ್ ಅವರನ್ನು ಅಮಾನತುಗೊಳಿಸಬೇಕು ಎಂದು ಮಲೆನಾಡು ರೈತ ಹೋರಾಟ ಸಮಿತಿಯ ಸಂಚಾಲಕ ತೀ.ನ. ಶ್ರೀನಿವಾಸ್ ಆಗ್ರಹಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಸವೆ ಗ್ರಾಮದ ಸ.ನಂ. ೧೭ರಲ್ಲಿ ಶ್ರೀಧರ್ ಎಂಬುವವರು ೫ ಎಕರೆ ಜಮೀನು ಮಂಜೂರಿಗೆ ಫಾರಂ ನಂ. ೫೩ರಲ್ಲಿ ಅರ್ಜಿ ಸಲ್ಲಿಸಿದ್ದರು. ಇದು ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ವಿಚಾರಣೆ ಬಾಕಿ ಇದೆ.
ಹಾಗೆಯೇ ಫಾರಂ ನಂ. ೫೭ರಲ್ಲಿ ಅರ್ಜಿ ಸಲ್ಲಿಸಿದ್ದು, ಇದು ಹೊಸನಗರ ತಾಲೂಕು ಕಚೇರಿಯಲ್ಲಿ ಬಾಕಿ ಇದೆ. ಆದರೂ ಕೂಡ ಹೊಸನಗರ ತಹಶೀಲ್ದಾರ್ ಅವರು ಮೇ ೨೮ರಂದು ಬೆಳಗ್ಗೆ ೧೧ ಗಂಟೆಗೆ ಏಕಾಏಕಿ ಯಾವುದೇ ತಿಳಿವಳಿಕೆ ನೀಡದೇ ೭ ವರ್ಷದ ೧೬೦೦ ಅಡಕೆ ಗಿಡಗಳನ್ನು ನಾಶಪಡಿಸಿದ್ದಾರೆ. ಗೃಹೋಪಯೋಗಿ ವಸ್ತುಗಳನ್ನು ಅಕ್ರಮವಾಗಿ ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಪೊಲೀಸರಿಗೂ ಕೂಡ ದೂರು ನೀಡಲಾಗಿದೆ ಎಂದರು.ಕೂಡಲೇ ತಹಶೀಲ್ದಾರ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಕೂಡ ರೈತರ ಮೇಲಾಗಿರುವ ದೌರ್ಜನ್ಯವನ್ನು ಖಂಡಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಸಹ ಸೂಕ್ರ ಕ್ರಮ ಜರುಗಿಸಲು ಡಿಸಿಯವರಿಗೆ ಹೇಳಿದ್ದಾರೆ ಎಂದರು.
ರೈತ ಶ್ರೀಧರ್ ಮಾತನಾಡಿ, ನನಗೆ ತುಂಬಾ ಅನ್ಯಾಯವಾಗಿದೆ. ಬೆಳೆದು ನಿಂತ ತೋಟ ನಾಶಪಡಿಸಲಾಗಿದೆ. ಈ ಬಗ್ಗೆ ರೈತರು ಹೊಸನಗರ ತಾಲೂಕು ಕಚೇರಿ ಎದುರು ಅಮರಣಾಂತ ಉಪವಾಸ ಕೈಗೊಂಡಿದ್ದರು. ಅಲ್ಲಿ ಕೆಲವರು ಅಸ್ವಸ್ಥರಾಗಿದ್ದರೂ ಕೂಡ ಇಷ್ಟೆಲ್ಲಾ ಹೋರಾಟ ಮಾಡಿದ್ದರೂ ತೋಟ ನಾಶಪಡಿಸಿದ ಅಧಿಕಾರಿ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಒಂದು ವಾರದೊಳಗೆ ಕ್ರಮ ಕೈಗೊಳ್ಳದಿದ್ದರೆ ಡಿಸಿ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಸವೆ ಗ್ರಾಮದ ಪ್ರಮುಖರಾದ ಭಾಸ್ಕರ್, ವಿಠಲ್, ಜಯರಾಮ ಶೆಟ್ಟಿ, ವೀರಪ್ಪ, ರೇಣುಕೇಶ್, ರವಿ ಮಾಸ್ತಿಕಟ್ಟೆ ಹಾಜರಿದ್ದರು.