ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಅರೆದೊಟ್ಲು ಗ್ರಾಮದಲ್ಲಿ ಜೂನ್ 16, 2025 ರಂದು ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಿ, ಸುಮಾರು 6.43 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ, ಬೆಳ್ಳಿ ಆಭರಣ ಹಾಗೂ ಕೃತ್ಯಕ್ಕೆ ಬಳಸಿದ ಬೈಕ್ ಅನ್ನು ವಶಪಡಿಸಿಕೊಳ್ಳುವಲ್ಲಿ ಹೊಳೆಹೊನ್ನೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಅರದೊಟ್ಲು ಗ್ರಾಮದ ಮಹಿಳೆಯೊಬ್ಬರು ತಮ್ಮ ಮನೆಯಿಂದ ಚಿನ್ನಾಭರಣ, ಬೆಳ್ಳಿ ಆಭರಣ ಮತ್ತು ನಗದು ಕಳ್ಳತನವಾಗಿರುವ ಬಗ್ಗೆ ಜೂನ್ 16ರಂದು ಹೊಳೆಹೊನ್ನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಕಲಂ 331(3), 331(4), 305 ಬಿಎನ್‌ಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಪ್ರಕರಣದ ತನಿಖೆ ಮತ್ತು ಆರೋಪಿಗಳ ಪತ್ತೆಗಾಗಿ ಶಿವಮೊಗ್ಗ ಎಸ್‌ಪಿ ಮಿಥುನ್ ಕುಮಾರ್ ಜಿ.ಕೆ, ಹೊಳೆಹೊನ್ನೂರು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಲಕ್ಷ್ಮಿಪತಿ ಆರ್.ಎಲ್. ಅವರ ನೇತೃತ್ವದಲ್ಲಿ ಎಎಸ್‌ಐ ಉಮೇಶ್ ಹಾಗೂ ಸಿಬ್ಬಂದಿಗಳಾದ ಹೆಚ್‌ಸಿ ಅಣ್ಣಪ್ಪ, ಪ್ರಸನ್ನ, ಮಂಜುನಾಥ, ಪ್ರಕಾಶ್ ನಾಯ್ಕ್, ಕುಮಾರ್ ಮತ್ತು ಪಿಸಿ ವಿಶ್ವನಾಥ್ ಅವರನ್ನು ಒಳಗೊಂಡ ತಂಡವನ್ನು ನೇಮಿಸಿದ್ದರು.
6.43 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ ಪಡಿಸಿಕೊಂಡ ತನಿಖಾ ತಂಡವು ಜೂನ್ 19, 2025 ರಂದು ದಾವಣಗೆರೆ ಜಿಲ್ಲೆಯ ಚನ್ನಗಿರಿ ಟೌನ್ ನಿವಾಸಿ , ಪ್ರಸ್ತುತ ಭದ್ರಾವತಿ ತಿಪ್ಪಲಾಪುರ ಕ್ಯಾಂಪ್ ಅರಳಹಳ್ಳಿ ಗ್ರಾಮದ ಅಪ್ರೋಜ್ ಅಹಮದ್ (42) ಎಂಬಾತನನ್ನು ದಸ್ತಗಿರಿ ಮಾಡಿದೆ. ಆರೋಪಿಯಿಂದ ಹೊಳೆಹೊನ್ನೂರು ಪೊಲೀಸ್ ಠಾಣೆಯ ಎರಡು ಕೇಸ್ಗೆ ಸಂಬಂಧಿಸಿದಂತೆ ಒಟ್ಟು 66 ಗ್ರಾಂ 820 ಮಿಲಿ ಗ್ರಾಂ ತೂಕದ ಬಂಗಾರದ ಆಭರಣ, 113 ಗ್ರಾಂ ಬೆಳ್ಳಿ ಆಭರಣ ಮತ್ತು ಕೃತ್ಯಕ್ಕೆ ಉಪಯೋಗಿಸಿದ ಬೈಕ್ ಸೇರಿ ಒಟ್ಟು ಅಂದಾಜು 6,43,000/- ರೂ. ಮೌಲ್ಯದ ಮಾಲನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.