ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಸ್ತುತ ಹೊಸದಾಗಿ ಸೃಷ್ಟಿಸಿರುವ ವಾರ್ಡ್‌ಗಳ ವಿಂಗಡಣೆ ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಕೂಡಲೇ ಪರಿಶೀಲಿಸಿ ಸರಿಪಡಿಸುವಂತೆ ಜೆಡಿಎಸ್ ಜಿಲ್ಲಾ ಘಟಕ ಆಗ್ರಹಿಸಿದೆ.
ಪಾಲಿಕೆ ಆಯುಕ್ತರ ಅಧಿಕೃತ ಜ್ಞಾಪನದಂತೆ ವಿಂಗಡಿಸಲಾಗಿರುವ ಹೊಸ ವಲಯ 01ರ ಕಚೇರಿ ನಗರದ ವಿನೋಬನಗರ ಪೊಲೀಸ್ ಚೌಕಿ ಬಳಿ ಇದ್ದು, ಹೊರಡಿಸಲಾಗಿರುವ ಹೊಸ ಆದೇಶದಂತೆ ಇದರ ವ್ಯಾಪ್ತಿಗೆ ವಾರ್ಡ್ ನಂ. 1, 2, 3, 4, 6, 7, 8, 9, 32, 33, 34 ಬರಲಿವೆ. ಸದರಿ ವಾರ್ಡುಗಳ ಪೈಕಿ 32, 33, ಹಾಗೂ 34 ಕ್ರಮವಾಗಿ ಟಿಪ್ಪು ನಗರ, ಸವಾಯಿ ಪಾಳ್ಯ ಹಾಗೂ ವಿದ್ಯಾನಗರ ದಕ್ಷಿಣ ಆಗಿದ್ದು, ಇವು ತುಂಗಾ ನದಿ ದಡದಲ್ಲಿರುವ ಪ್ರದೇಶಗಳಾಗಿವೆ.
ವಲಯ 1ರ ಕಚೇರಿ ವಿನೋಬನಗರದಿಂದ ಸುಮಾರು 5-6 ಕಿಮೀ ದೂರದಲ್ಲಿದೆ. ಹಾಗೆಯೇ ವಲಯ 03ರ ವ್ಯಾಪ್ತಿಗೆ ಬರುವಂತಹ ವಾರ್ಡ್ 12, 13, 14, 15, 16, 17, 18, 19, 23, 24, 25, 27, ಹಾಗೂ 28 ರ ಪೈಕಿ 18 ಮತ್ತು 19 ಕ್ರಮವಾಗಿ ವಿನೋಬನಗರ ದಕ್ಷಿಣ ಹಾಗೂ ಶರಾವತಿ ನಗರ ಆಗಿರುತ್ತದೆ. ವಲಯ 03 ರ ಕಚೇರಿ ಇರುವ ಪ್ರದೇಶಕ್ಕೂ ವಿನೋಬನಗರ ವಾರ್ಡ್ 18 ಹಾಗೂ ಶರಾವತಿ ನಗರ ವಾರ್ಡ್ 19ಕ್ಕೂ ಸುಮಾರು 5-6 ಕಿಮಿ ದೂರವಿರುತ್ತದೆ.
ಮುಂದುವರೆದು ವಿನೋಬನಗರದಲ್ಲೇ ಇರುವ ವಲಯ 01 ರ ಕಚೇರಿ ವ್ಯಾಪ್ತಿಗೆ ಬರುವ ವಾರ್ಡ್ 18 ವಿನೋಬನಗರ ದಕ್ಷಿಣ ಹಾಗೂ ವಾರ್ಡ್ 19 ಶರಾವತಿ ನಗರ ಪ್ರದೇಶಗಳನ್ನು ವಲಯ 03ಕ್ಕೆ ಹಾಗೂ ವಲಯ 03 ರ ಕಚೇರಿ ವ್ಯಾಪ್ತಿಗೆ ಬರುವ ವಾರ್ಡ್ 32 ಟಿಪ್ಪು ನಗರ, ವಾರ್ಡ್ 33 ಸವಾಯಿ ಪಾಳ್ಯ ಹಾಗೂ ವಾರ್ಡ್ 34 ವಿದ್ಯಾನಗರ ದಕ್ಷಿಣ ಪ್ರದೇಶಗಳನ್ನು ವಲಯ 01ಕ್ಕೆ ಅದ್ಯಾವ ತಾಂತ್ರಿಕ ಕಾರಣಗಳಿಂದಾಗಿ ಸೇರಿಸಲಾಗಿದೆಯೋ ಗೊತ್ತಿಲ್ಲ. ಆದರೆ ಇದರಿಂದ ನಗರದ ನಾಗರಿಕರಿಗೆ ತೊಂದರೆ ಆಗುತ್ತಿದೆ ಎಂದು ಜೆಡಿಎಸ್ ಮುಖಂಡರು ಆರೋಪಿಸುತ್ತಿದ್ದಾರೆ.
ಪಾಲಿಕೆ ವ್ಯಾಪ್ತಿಯಲ್ಲಿ ಹೊಸ ವಲಯಗಳನ್ನು ಸೃಜಿಸುವಾಗ ಭೌಗೋಳಿಕವಾಗಿ ಶಿವಮೊಗ್ಗ ನಗರವನ್ನು ಪರಿಗಣಿಸಿ ಸಾರ್ವಜನಿಕ ಹಿತದೃಷ್ಟಿಯಲ್ಲಿ ಕ್ರಮಕೈಗೊಳ್ಳಬೇಕಿತ್ತು. ಆದರೆ ಹೊರಡಿಸಲಾಗಿರುವ ಪಾಲಿಕೆ ಅದೇಶದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತು ಯಾವುದೇ ಹಂತದಲ್ಲಿ ಚಿಂತನೆ ನಡೆಸಿರುವುದು ಕಂಡುಬಂದಿಲ್ಲ ಎಂದು ಅವರು ಆಕ್ಷೇಪಿಸಿದ್ದಾರೆ.


ಇದೊಂದು ಅವೈಜ್ಞಾನಿಕ ಕ್ರಮವಾಗಿದ್ದು ಇದರಿಂದ ನಾಗರಿಕರಿಗೆ ಆಗುತ್ತಿರುವ ತೊಂದರೆಗಳನ್ನು ಸರಿಪಡಿಸಿ ವಿನೋಬನಗರ ವಾರ್ಡ್ 18 ಹಾಗೂ ಶರಾವತಿ ನಗರ ವಾರ್ಡ್ 19 ಗಳನ್ನು ವಲಯ 01 ರ ವ್ಯಾಪ್ತಿಗೆ ಹಾಗೂ ಟಿಪ್ಪು ನಗರ ವಾಡ್ 32, ಸವಾಯಿ ಪಾಳ್ಯ ವಾರ್ಡ್ 33 ಹಾಗೂ ವಿದ್ಯಾನಗರ ವಾರ್ಡ್ 34 ಇವುಗಳನ್ನು ವಲಯ 03 ರ ವ್ಯಾಪ್ತಿಗೆ ಸೇರಿಸಿ ಸಾರ್ವಜನಿಕ ಹಿತದೃಷ್ಟಿಯಲ್ಲಿ ಸರಿಪಡಿಸಿ ಕೊಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ/ಆದೇಶ ನೀಡಬೇಕು ಎಂದು ನಾಗರಿಕರ ಪರವಾಗಿ ಜೆಡಿಎಸ್ ವಿನಂತಿಸಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ದೀಪಕ್ ಸಿಂಗ್ ಇವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ.
ಇದನ್ನೂ ಓದಿ: ಶಿವಮೊಗ್ಗ | ಕೊಲೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ
ಈ ವೇಳೆ ಶಿವಮೊಗ್ಗ ನಗರದ ಮಾಜಿ ಶಾಸಕ ಕೆ ಬಿ ಪ್ರಸನ್ನ ಕುಮಾರ್, ಜೆಡಿಎಸ್ ಮುಖಂಡರಾದ ಉಮಾಶಂಕರ್ ಉಪಾಧ್ಯಯ, ಕೃಷ್ಣ, ವೆಂಕಟೇಶ್, ವಿಜಯ್ ಕುಮಾರ್, ನಗರ ಯುವ ಜೆಡಿಎಸ್ ಅಧ್ಯಕ್ಷ ಸಂಜಯ್ ಕಶ್ಯಪ್, ದಯಾನಂದ್ ಸಾಲಾಗಿ, ಮಾಧವ ಮೂರ್ತಿ, ಸಿದ್ದೇಶ್, ಗೋವಿಂದ ರಾಜ್, ಗೋಪಿ ಮೊದಲಿಯರ್, ನಿಹಾಲ್ ಖಾನ್, ನೀಲು, ರುದ್ರೇಶ್, ಮೂರ್ತಿ, ಪ್ರಪುಲ, ಚಂದ್ರಶೇಖರ್, ಚನ್ನು, ಬಸಪ್ಪ, ಪುಷ್ಪ, ಲಕ್ಷ್ಮಿ, ಸರಿತ ಹಾಗೂ ಮತ್ತಿತರರು ಉಪಸ್ಥಿತರಿದ್ದರು.