ಶಿವಮೊಗ್ಗ,ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಬೆಂಬಲ ನೀಡಲು ವಿದ್ಯಾನಿಧಿ ಯೋಜನೆಗೆ ಚಾಲನೆ ಕೊಡಲಾಗಿದೆ ಎಂದು ಶಾಸಕ ಎಸ್ ಎನ್ ಚನ್ನಬಸಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಈ ಮಹತ್ತರ ಆಶಯವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ, ತನ್ನ ನೇತೃತ್ವದ ಅನವರತ ತಂಡವು “ವಿವೇಕ ವಿದ್ಯಾ ನಿಧಿ’ ಎಂಬ ಕಾರ್ಯಕ್ರಮವನ್ನು ರೂಪಿಸಿದೆ. ಇಂದಿನ ಯುವ ಪೀಳಿಗೆಯು ಯಾವುದೇ ಕಾರಣಕ್ಕೂ ವಿದ್ಯಾಭ್ಯಾಸದ ಕೊರತೆಯಿಂದ ಶೈಕ್ಷಣಿಕವಾಗಿ ಹಿಂದುಳಿಯಬಾರದು ಎಂಬುದು ನಮ್ಮ ಸದುದ್ದೇಶ ಎಂದರು.
ನಗರದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಅನುಕೂಲವಾಗುವಂತೆ ಕೈಲಾದ ಕಿರು ಸಹಾಯವನ್ನು ನೀಡುವುದು ಇದರ ಉದ್ದೇಶವಾಗಿದೆ.ಈ ಕಾರ್ಯಕ್ರಮದಡಿಯಲ್ಲಿ, ಪ್ರಸಕ್ತ ಸಾಲಿನಲ್ಲಿ ಓದುತ್ತಿರುವಂತಹ SSLC ಮತ್ತು ದ್ವಿತೀಯ PUC ವಿದ್ಯಾರ್ಥಿಗಳು ಕಳೆದ ಸಾಲಿನಲ್ಲಿ ಶೇಕಡ 50% ರಿಂದ 75% ವರೆಗೆ ಅಂಕಗಳನ್ನು ಗಳಿಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಸಕ್ತ ಸಾಲಿನಲ್ಲಿ ಇನ್ನು ಹೆಚ್ಚು ಅಂಕ ಪಡೆಯಲು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಅವರ ವಿದ್ಯಾಭ್ಯಾಸಕ್ಕೆ ಸಹಕಾರಿಯಾಗುವಂತೆ ಆರ್ಥಿಕ ನೆರವು ನೀಡಲು ಚಿಂತಿಸಿದ್ದು, ಸಮಾಜದಲ್ಲಿನ ಅನೇಕ ಕೊಡುಗೈ ದಾನಿಗಳನ್ನು ಈ ಶ್ರೇಷ್ಠ ಕಾರ್ಯದಲ್ಲಿ ಜೋಡಿಸಿಕೊಂಡು ವಿದ್ಯಾರ್ಥಿಯ ಭವಿಷ್ಯ ರೂಪಿಸುವಲ್ಲಿ ಸಮಾಜದ ಪಾತ್ರವನ್ನು ನೆನಪಿಸುವುದರ ಜೊತೆಗೆ ಈ ವಿದ್ಯಾನಿಧಿಯು ಅವರ ಉನ್ನತ ಶಿಕ್ಷಣದ ಕನಸಿಗೆ ಒಂದು ಸಣ್ಣ ಬೆಂಬಲವಾಗಲಿದೆ ಎಂದರು.
ಗುರು ಪೂರ್ಣಿಮೆಯ ಇಂದು ಇದಕ್ಕೆ ಚಾಲನೆ ನೀಡಲಾಗುತ್ತಿದೆ. ಈ ಬಗ್ಗೆ ಅರ್ಜಿಯನ್ನು ನಾಳೆಯಿಂದ ಕೊಡಲಾಗುತ್ತಿದೆ. ಆ.15 ರ ಒಳಗೆ ಶಾಸಕರ ಕರ್ತವ್ಯ ಭವನದಲ್ಲಿ ಅರ್ಜಿಯನ್ನು ಪಡೆದು ತುಂಬಿವಾಪಾಸ್ ನೀಡಬಹುದಾಗಿದೆ ಎಂದರು.
ಅರ್ಹರಿಗೆ ಎ 5 ಸಾವಿರ ರೂ. ನೆರವು ಹಣ ನೀಡಲಾಗುವುದು . ಬಡವರಲ್ಲಿ 80-90 ಅಂಕ ಪಡೆದವರ ಬಗ್ಗೆಯೂ ಕೊಡಲು ಚಿಂತಿಸಲಾಗುವುದು. 9 ನೇ ತರಗತಿ ಮುಗಿಸಿ ಎಸ್ ಎಸ್ ಎಲ್ ಸಿ ಗೆ ಬಂದವರು ಮತ್ತು ಮೊದಲನೇ ಪಿಯುಸಿಯಿಂದ ಎರಡನೇ ಪಿಯುಸಿಗೆ ಹೋದವರಿಗೂ ಅನುಕೂಲವಾಗಲಿದೆ.ಒಂದು ಸಾವಿರ ಕೊಡುಗೈ ದಾನಿಗಳನ್ನು ಇದಕ್ಕಾಗಿ ಹುಡುಕಲಾಗುತ್ತಿದೆ ಎಂದರು.
ಅರ್ಜಿಗೆ 10 ರೂ. ನಿಗದಿ ಮಾಡಲಾಗಿದೆ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಹಿಂದಿನ ವರ್ಷದ ಮಾರ್ಕ್ಸ್ ಕಾರ್ಡ್ ನೀಡಬೇಕಿದೆ. ಪೋಷಕರ ಓಟರ್ ಐಡಿ ಬೇಕಿದೆ. ನಗರ ವಿಧಾನ ಸಭಾ ಕ್ಷೇತ್ರಕ್ಕೆ ಈ ಯೋಜನೆ ಸೀಮಿತವಾಗಿದ್ದು SSLC ಯಲ್ಲಿ 7355 ಜನ ವಿದ್ಯಾರ್ಥಿಗಳು, ಪಿಯು ನಲ್ಲಿ 6574 ವಿದ್ಯಾರ್ಥಿಗಳಿದ್ದಾರೆ. ಎರಡೂ ಸೇರಿ ಒಟ್ಟು 13875 ಜನ ವಿದ್ಯಾರ್ಥಿಗಳಿದ್ದಾರೆ ಎಂದರು.
