ಶಿವಮೊಗ್ಗ ವಿನೋಬ ನಗರದ ಪೊಲೀಸ್ ಠಾಣೆಯ ಪಿಐ ಚಂದ್ರಕಲಾ ಅವರನ್ನ ಅಮಾನತ್ತುಗೊಳಿಸಿ ದಾವಣಗೆರೆ ಐಜಿಪಿ ರವಿಕಾಂತೇ ಗೌಡ ಆದೇಶಿಸಿದ್ದಾರೆ.
ಕರ್ತವ್ಯದಲ್ಲಿ ದುರ್ವರ್ತನೆ ಹಾಗೂ ಅಶಿಸ್ತು ಹಿನ್ನೆಲೆಯಲ್ಲಿ ಸಸ್ಪೆಂಡ್ ಆಗಿರುವುದಾಗಿ ತಿಳಿದು ಬಂದಿದೆ. ಈದ್ಗಾ ಮೈದಾನದ ಮಾಲೀಕತ್ವ ವಿವಾದ ಸಂಬಂಧ ಎಸ್ಪಿಯವರು ಕರೆದಿದ್ದ ಸಭೆಗೆ ಚಂದ್ರಕಲಾ ಅವರು ಗೈರು ಆಗಿರುವ ಆರೋಪವೂ ಕೇಳಿ ಬಂದಿದೆ. ನಾಲ್ಕು ದಿನದ ಹಿಂದೆ ನಗರದ ಎಲ್ಲಾ ಪಿಐ ಹಾಗೂ ಪಿ ಎಸ್ ಐ ಸಭೆಯನ್ನ ಎಸ್ಪಿ ಅವರು ಕರೆದಿದ್ದರು. ಚಂದ್ರಕಲಾ ಹೊರತು ಪಡಿಸಿ ಸಭೆಗೆ ಉಳಿದೆಲ್ಲಾ ಪಿಐ ಹಾಗೂ ಪಿಎಸ್ಐ ಗಳು ಹಾಜರಾಗಿದ್ದರು. ಚಂದ್ರಕಲಾರ ಗೈರನ್ನು ಗಂಭೀರವಾಗಿ ಪರಿಗಣಿಸಿದ ಎಸ್ಪಿ ಅವರು ಮೇಡಂಗೆ ಡಿಎಸ್ಬಿ ಬ್ರಾಂಚ್ ಗೆ ವರದಿ ಮಾಡಿಕೊಳ್ಳುವಂತೆ ಸೂಚಿಸಿದ್ದರು.
ಇದೇ ವೇಳೆ ಸೂಕ್ತ ಶಿಸ್ತು ಕ್ರಮಕ್ಕೂ ಸಹ ಐಜಿಪಿಗೆ ಶಿಫಾರಸು ಮಾಡಿದ್ದರು ಎಂದು ತಿಳಿದು ಬಂದಿದೆ. ಎಸ್ಪಿ ಶಿಫಾರಸಿನ ಹಿನ್ನೆಲೆಯಲ್ಲಿ ಚಂದ್ರಕಲಾರನ್ನು ಸೇವೆಯಿಂದ ಅಮಾನತುಗೊಳಿಸಿ ಐಜಿಪಿ ಆದೇಶಿಸಿರುವುದಾಗಿ ತಿಳಿದು ಬಂದಿದೆ. ಈ ಮೊದಲು ಹಲವು ವಿಷಯದಲ್ಲಿ ಸಾಕಷ್ಟು ಚರ್ಚೆಗೆ ಚಂದ್ರಕಲಾರ ನಡವಳಿಕೆ ಎಡೆಮಾಡಿಕೊಟ್ಟಿತ್ತು.

ಇದಲ್ಲದೆ ಮೂರು ದಿನಗಳ ಹಿಂದೆ ಪೊಲೀಸ್ ಇನ್ಸ್ ಪೆಕ್ಟರ್ ಚಂದ್ರಕಲಾ ರವರ ಅಧಿಕಾರವಿದ್ದ ವಿನೋಬನಗರ ಪೊಲೀಸ್ ಠಾಣೆಗೆ ಅಡಿಷನಲ್ ಎಸ್ ಪಿ ಅನಿಲ್ ಕುಮಾರ್ ಭೂಮರೆಡ್ಡಿ ಭೇಟಿ ನೀಡಿ ಪರಿಶೀಲಿಸಿದ್ದರು.
ಇಲಾಖಾ ತನಿಖೆಯ ವೇಳೆ ಪಿ ಐ ಚಂದ್ರಕಲಾ ಸೂಕ್ತ ರೀತಿಯಲ್ಲಿ ಸ್ಪಂದಿಸಲಿಲ್ಲ ಎಂಬುದು ಆರೋಪವಾಗಿದೆ. ಕೇಸ್ ಫೈಲ್ ಗಳ ಮೈಂಟೆನೆನ್ಸ್, ದಾಖಲೆಗಳ ಮೈಂಟೆನೆನ್ಸ್ ಗಳಲ್ಲಿ ಆಸಕ್ತಿ ತೋರದೇ ನಿರ್ಲಕ್ಷ್ಯ ವಹಿಸುತ್ತಿದ್ದರು ಎನ್ನಲಾಗಿದೆ. ಅಲ್ಲದೇ, ಹಿರಿಯ ಅಧಿಕಾರಿಗಳು ಬಂದಾಗ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿರಲಿಲ್ಲ ಎಂದು ಆರೋಪದಿಂದ ಸಸ್ಪೆಂಡ್ ಮಾಡಲಾಗಿದೆ ಎಂಬುದು ಇಲಾಖೆಯ ಮೂಲಗಳಾಗಿದೆ. ಒಂದು ತಿಂಗಳ ಮಟ್ಟಿಗೆ ಸಸ್ಪೆಂಡ್ ಆಗಿರುವ ಪಿ ಐ ಚಂದ್ರಕಲಾ ರವರನ್ನು ರೂಲ್ ನಂ. 7 ಪ್ರಕಾರ ತನಿಖೆಗೊಳಪಡಿಸಲಾಗಲಿದೆ ಎಂದು ತಿಳಿದುಬಂದಿದೆ.
ಸದ್ಯಕ್ಕೆ ವಿನೋಬನಗರ ಪ್ರಭಾರ ಪಿಐ ಆಗಿ ಜಯನಗರ ಪಿಐ ಸಿದ್ದೇಗೌಡರು ಕಾರ್ಯನಿರ್ವಹಿಸುತ್ತಿದ್ದಾರೆ.