ಭದ್ರಾವತಿ ಮೂಲದ ಎರಡು ಮಕ್ಕಳ ತಾಯಿ ಶರಣ್ಯ, ಪತಿ ಮಕ್ಕಳಿಂದ ದೂರವಿದ್ದು ಒಂದು ವರ್ಷವಾಗಿದೆ. ಈಗ ಮಗಳನ್ನು ತನ್ನ ವಶಕ್ಕೆ ಪಡೆಯುವ ಹೋರಾಟದಲ್ಲಿ ಪತಿ ಇಳಂಗೋವನ್ ವಿರುದ್ಧವೇ ಅಪಹರಣದ ದೂರು ದಾಖಲಿಸಿದ್ದಾರೆ
ಭದ್ರಾವತಿ ಮೂಲದ ದಂಪತಿ ನಡುವಿನ ಕೌಟುಂಬಿಕ ಕಲಹ ಪ್ರಕರಣ ʼಗಂಡನೇ ಮಗಳನ್ನು ಅಪಹರಿಸಿದ್ದಾನೆʼ ಎಂದು ದೂರು ನೀಡುವಲ್ಲಿಗೆ ಬಂದು ತಲುಪಿದೆ. ಇದೊಂದು ಅಪರೂಪದ ಪ್ರಕರಣ. ತಮಿಳುನಾಡಿನಲ್ಲಿ ಪತಿ ಮತ್ತು ಇಬ್ಬರು ಮಕ್ಕಳ ಜೊತೆ ವಾಸವಿದ್ದ ಭದ್ರಾವತಿ ಮೂಲದ ಶರಣ್ಯ, ಪತಿ ಮಕ್ಕಳಿಂದ ದೂರವಿದ್ದು ಒಂದು ವರ್ಷವಾಗಿದೆ. ಈಗ ಮಗಳನ್ನು ತನ್ನ ವಶಕ್ಕೆ ಪಡೆಯುವ ಹೋರಾಟದಲ್ಲಿ ಪತಿ ಇಳಂಗೋವನ್ ವಿರುದ್ಧವೇ ಅಪಹರಣದ ದೂರು ದಾಖಲಿಸಿದ್ದಾರೆ.
ತಮಿಳುನಾಡಿನ ನಾಮಕ್ಕಲ್ ಎಂಬಲ್ಲಿ ತಂದೆಯ ಜೊತೆಗಿರುವ ಹತ್ತು ವರ್ಷದ ಮಗಳನ್ನು ವಾಪಸ್ ಕರೆತರಲು ಭದ್ರಾವತಿ ನ್ಯೂಟೌನ್ ಸಬ್ ಇನ್ಸ್ಪೆಕ್ಟರ್ ರಮೇಶ್ ಅವರು ತಮಿಳುನಾಡಿಗೆ ತೆರಳಿದ್ದರು. ಕಾನೂನು ಪ್ರಕಾರ ಅಪ್ರಾಪ್ತ ಹೆಣ್ಣುಮಕ್ಕಳನ್ನು ಕಸ್ಟಡಿಗೆ ತೆಗೆದುಕೊಳ್ಳಲು ಮಹಿಳಾ ಪೊಲೀಸರೇ ಹೋಗಬೇಕು. ಆದರೆ ಎಸ್ ಐ ರಮೇಶ್ ಒಬ್ಬರೇ ಹೋಗಿದ್ದಾರೆ. ಆದರೆ, ತಮಿಳುನಾಡು ಪೊಲೀಸರು ಮಗುವನ್ನು ಕಳುಹಿಸಲು ಅನುಮತಿ ನೀಡಲಿಲ್ಲ.
“ತಮಿಳುನಾಡಿನ ಮಕ್ಕಳ ಆಯೋಗದಲ್ಲಿ ಮಗು ಹೇಳಿಕೆ ನೀಡಿದೆ. ಆದರೂ, ಸಬ್ ಇನ್ಸ್ ಪೆಕ್ಟರ್ ರಮೇಶ್ “ಮಗು ನ್ಯೂಟೌನ್ ಪೊಲೀಸ್ ಠಾಣೆಗೆ ಬಂದು ಹೇಳಿಕೆ ನೀಡಬೇಕು ಎಂದು ಹಠ ಹಿಡಿದಿದ್ದಾರೆ. ರಾಜಕೀಯ ಮತ್ತು ಹಣದ ಪ್ರಭಾವದಿಂದಾಗಿ ಎಸ್‌ಐ ರಮೇಶ್ ಅವರು ಮಗುವನ್ನು ವಶಕ್ಕೆ ಪಡೆದು ಪತ್ನಿಯ ಕೈಗೆ ಕೊಡುವ ಅನುಮಾನವಿದೆ. ಆ ಕಾರಣದಿಂದಾಗಿ ಮಗುವಿನ ಹೇಳಿಕೆಯನ್ನು ಎಸ್‌ಪಿ ಕಚೇರಿಯಲ್ಲಿಯೇ ಪಡೆಯಬೇಕು” ಎಂದು ತಂದೆ ಇಳಂಗೋವನ್ ಶಿವಮೊಗ್ಗ ಎಸ್ ಪಿ ಮಿಥುನ್ ಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.
ಪ್ರಕರಣವೇನು?
ಭದ್ರಾವತಿ ತಾಲ್ಲೂಕಿನ ಬುಳ್ಳಾಪುರ ಗ್ರಾಮಕ್ಕೆ ಸೇರಿದ ಇಳಂಗೋವನ್ ಎಂಬವರು ಇತಿಹಾಸ ಪದವೀಧರರಾಗಿದ್ದು ಕಳೆದ 20 ವರ್ಷಗಳಿಂದ ವ್ಯಾಪಾರ ನಿಮಿತ್ತ ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯ ಪಳ್ಳಿಪಾಳಯಂ ನಗರದಲ್ಲಿ ವಾಸವಿದ್ದಾರೆ. 2010ರಲ್ಲಿ ಭದ್ರಾವತಿಯವರೇ ಆದ ತಮ್ಮ ಅಕ್ಕ(ಚಿಕ್ಕಮ್ಮನ ಮಗಳು) ಮಹೇಶ್ವರಿ ಅವರ ಮಗಳಾದ ಶರಣ್ಯ ಅವರನ್ನು ಮದುವೆ ಆಗಿದ್ದಾರೆ. ಮದುವೆಯ ನಂತರ ಇಬ್ಬರೂ ತಮಿಳುನಾಡಿನಲ್ಲಿ ವಾಸವಿದ್ದರು. ಇವರಿಗೆ 12 ವರ್ಷದ ಮಗ ಸಾಮ್ರಾಟ್ ಹಾಗೂ 10 ವರ್ಷದ ಮಗಳು ಸಂಯುಕ್ತ ಎಂಬ ಇಬ್ಬರು ಮಕ್ಕಳಿದ್ದಾರೆ. ಸಣ್ಣಪುಟ್ಟ ವಿಚಾರಕ್ಕೂ ಜಗಳ ಮಾಡಿ ತವರು ಮನೆಗೆ ಹೋಗುತ್ತಿದ್ದ ಪತ್ನಿ 2022ರ ದೀಪಾವಳಿಗೆ ತವರಿಗೆ ಹೋದವರು ವಾಪಸ್ ಗಂಡನ ಮನೆಗೆ ಹೋಗಿಲ್ಲ. ಮಕ್ಕಳು ಮಾತ್ರ ತಂದೆಯ ಜೊತೆಗಿದ್ದು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಈ ಮಧ್ಯೆ ಬೇಸಿಗೆ ರಜೆಯಲ್ಲಿ ಮಕ್ಕಳನ್ನು ಊರಿಗೆ ಕರೆಸಿಕೊಂಡ ಪತ್ನಿ ಮಕ್ಕಳನ್ನು ಭದ್ರಾವತಿಯಲ್ಲೇ ಶಾಲೆಗೆ ಸೇರಿಸಲು ತಯಾರಿ ಮಾಡಿಕೊಂಡಿದ್ದಾರೆ. ರಜೆ ಮುಗಿಯುತ್ತಿದ್ದಂತೆ ಇಳಂಗೋವನ್ ಅವರು ಮಕ್ಕಳನ್ನು ಕರೆದೊಯ್ಯಲು ಬಂದಾಗ ಮಕ್ಕಳನ್ನು ಕಳುಹಿಸಲು ಒಪ್ಪಿಲ್ಲ, ಆದರೆ ಮಗ ಅಪ್ಪನ ಜೊತೆಗೆ ಇರುವುದಾಗಿ ಹಟ ಮಾಡಿ ತಮಿಳುನಾಡಿಗೆ ಹೋಗಿದ್ದಾನೆ. ಮಗಳನ್ನು ಪತ್ನಿ ಕುಟುಂಬದವರು ಭದ್ರಾವತಿಯ ಸೇಂಟ್ ಚಾಲ್ಸ್ ಶಾಲೆಗೆ ಅಡ್ಮಿಶನ್ ಮಾಡಿಸಿದ್ದಾರೆ. ಆಗಸ್ಟ್‌ನಲ್ಲಿ ಮಗಳನ್ನು ಮಾತನಾಡಿಸಲೆಂದು ಇಳಂಗೋವನ್ ಅವರು ಮಗಳ ಶಾಲೆಯ ಬಳಿ ಬಂದಾಗ ಮಗಳು ತಮಿಳುನಾಡಿಗೆ ಬರುವುದಾಗಿ ಹಟ ಮಾಡಿದಳೆಂದು ಜೊತೆಗೆ ಕರೆದೊಯ್ದಿ ಅಲ್ಲೇ ಶಾಲೆಗೆ ಸೇರಿಸಿದ್ದಾರೆ. ಪತ್ನಿ ಕಡೆಯವರು ಪತಿಯ ವಿರುದ್ಧ ಮಗಳ ಅಪಹರಣದ ಕೇಸು ದಾಖಲಿಸಿದ್ದಾರೆ. ಈಗ ಬಂಧನದ ಭೀತಿಯಲ್ಲಿದ್ದಾರೆ ಇಳಂಗೋವನ್. ಮಕ್ಕಳಿಬ್ಬರು ಅವರ ಜೊತೆಗೆ ಇದ್ದಾರೆ.
ಶಿವಮೊಗ್ಗ ಎಸ್‌ಪಿಗೆ ಇಳಂಗೋವನ್ ಮನವಿ
ಇಳಂಗೋವನ್ ಅವರು ಶಿವಮೊಗ್ಗ ಎಸ್‌ಪಿ ಅವರಿಗೆ ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸುವಂತೆ ಮನವಿ ಮಾಡಿದ್ದಾರೆ. ನ್ಯೂಟೌನ್ ಪೊಲೀಸ್ ಠಾಣಾಧಿಕಾರಿಯ ಬಗ್ಗೆ ಅನುಮಾನವನ್ನೂ ಅವರು ವ್ಯಕ್ತಪಡಿಸಿದ್ದಾರೆ. ಅವರ ಮನವಿ ಪತ್ರದ ಸಾರಾಂಶ ಇಲ್ಲಿದೆ…
“2022 ಅಕ್ಟೋಬರ್ ಕೊನೆಯ ವಾರದಲ್ಲಿ ಊರಿಗೆ ಹೋದವಳು, ವಾರಗಳೇ ಕಳೆದರೂ ಬರಲಿಲ್ಲ. ಫೋನ್ ಮಾಡಿ ಮನೆಗೆ ಬರುವಂತೆ ಕರೆದೆ, ಆದರೆ ಆಕೆ ನಾನು ಮತ್ತೆ ತಮಿಳುನಾಡಿಗೆ ಬರುವುದಿಲ್ಲ ನಿನ್ನ ಜೊತೆಗೆ ಬಾಳ್ವೆ ಮಾಡುವುದಿಲ್ಲ ಎಂದು ಹೇಳಿಬಿಟ್ಟಳು. ಆಕೆ ನನ್ನ ಜೊತೆ ಬಾಳ್ವೆ ಮಾಡದಿರಲು ಕಾರಣ ಏನು ಎಂದು ಹೇಳಿಲ್ಲ. ಆಕೆ ಭದ್ರಾವತಿ ಹೋದ ನಂತರ ನನ್ನ ಇಬ್ಬರೂ ಮಕ್ಕಳನ್ನು ಸುಮಾರು 8 ತಿಂಗಳು ನೋಡಿಕೊಂಡಿದ್ದೆ. ಈ ಅವಧಿಯಲ್ಲಿ ಆಕೆ ಒಮ್ಮೆಯೂ ಮಕ್ಕಳಿಗೆ ಕನಿಷ್ಠ ಫೋನ್ ಸಹ ಮಾಡಿ ಮಾತನಾಡಿರಲಿಲ್ಲ.
ಶಾಲೆಯ ಪರೀಕ್ಷೆ ಮುಗಿಯುವ ತನಕ ಮಕ್ಕಳು ನನ್ನ ಜೊತೆಗೆ ಇದ್ದರು. ನನ್ನ ಹೆಂಡತಿ ಮನೆ ಕಡೆಯವರು, ಭದ್ರಾವತಿಯ ವಕೀಲ ಹರ್ಷ ಎಂಬವರ ಮೂಲಕ ರಾಜಿ ಪಂಚಾಯಿತಿ ಮಾಡಿಸಿದ್ದರು. ಈ ವೇಳೆ ನನಗೆ ಭರವಸೆ ನೀಡಿದ್ದ ನನ್ನ ಹೆಂಡತಿಯ ತಾಯಿ ಮಹೇಶ್ವರಿ ಎಂಬವರು “ಇಬ್ಬರೂ ಮಕ್ಕಳನ್ನು ಬೇಸಿಗೆ ರಜೆಗೆ ನಮ್ಮ ಮನೆಗೆ ಕಳುಹಿಸಿ. ಆಕೆ ಕನಿಷ್ಠ ಮಕ್ಕಳ ಮುಖವನ್ನಾದರೂ ನೋಡಿ ಮತ್ತೆ ನಿಮ್ಮ ಜೊತೆಗೆ ತಮಿಳುನಾಡಿಗೆ ಬರಬಹುದು” ಎಂದಿದ್ದರು. ವಕೀಲ ಹರ್ಷ ಎಂಬವರು ಸಹ ರಜೆ ಮಗಿದ ಬಳಿಕ ಮಕ್ಕಳನ್ನು ತಮಿಳುನಾಡಿಗೆ ಕಳುಹಿಸಿಕೊಡುವ ಭರವಸೆ ನೀಡಿದ್ದರು. ಹೀಗಾಗಿ ಇವರ ಮೇಲೆ ನಂಬಿಕೆ ಇಟ್ಟು ನನ್ನ ಮಕ್ಕಳಿಗೆ ಹೋಗಲು ಇಷ್ಟವಿಲ್ಲದಿದ್ದರೂ ನಾನೇ ಒತ್ತಾಯಿಸಿ ಅವರನ್ನು ಕಳುಹಿಸಿಕೊಟ್ಟಿದೆ.
ರಜೆ ಮುಗಿಯುತ್ತಿದ್ದಂತೆ ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯ ಪಳ್ಳಿಪಾಳಯಂ ನಗರದ ರಿಲಯನ್ಸ್ ಶಾಲೆಯಲ್ಲಿ ಮಕ್ಕಳಿಗೆ ಅಡ್ಮಿಷನ್ ಮಾಡಿಸಿ ಅವರನ್ನು ಕರೆದುಕೊಂಡು ಹೋಗಲು ಭದ್ರಾವತಿಗೆ ಬಂದಿದ್ದೆ. ಆದರೆ, ನನ್ನ ಹೆಂಡತಿ ಮನೆ ಕಡೆಯವರು ನನಗೆ ಮಾಹಿತಿ ನೀಡದೇ ಮಕ್ಕಳನ್ನು ಭದ್ರಾವತಿಯ ಸೇಂಟ್ ಚಾಲ್ಸ್ ಶಾಲೆಗೆ ಅಡ್ಮಿಶನ್ ಮಾಡಿಸಿದ್ದಾರೆ.
ನನ್ನ ಮಗಳು ತಾಯಿಯ ಜೊತೆಗೆ ಇರುವ ವಿಚಾರದಲ್ಲಿ ನನ್ನ ಯಾವುದೇ ಅಭ್ಯಂತರವಿಲ್ಲ. ಆದರೆ, ನನ್ನ ಮಗಳು ಕರಾಟೆ ಮತ್ತು ತಮಿಳುನಾಡಿನ ಸಾಂಪ್ರದಾಯಿಕ “ಸಿಲಂಬಮ್-ಕಳರಿ” ವರ್ಮ ಕಲೆಯಲ್ಲಿ ರಾಷ್ಟ್ರೀಯ ಮಟ್ಟದ ಚಾಂಪಿಯನ್. ಕೇವಲ 10 ವರ್ಷದ ಹುಡುಗಿ ಈಗಾಗಲೇ ರಾಜ್ಯ-ರಾಷ್ಟ್ರೀಯ ಮಟ್ಟದಲ್ಲಿ ಹಲವು ಪದಕಗಳನ್ನು ಜಯಿಸಿದ್ದಾಳೆ.
ಅಲ್ಲದೆ, ನನ್ನ ಪತ್ನಿಯ ಸೋದರ ಮಾವ ಜಯಶೀಲನ್ ಎಂಬುವವನಿಗೆ ಪೋಕ್ಸೋ ಪ್ರಕರಣದಲ್ಲಿ ಶಿಕ್ಷೆಯಾಗಿದೆ. ಆತನ ಮಗನ ವಿರುದ್ಧವೂ ಮಂಗಳೂರು ಪೊಲೀಸ್ ಠಾಣೆಯಲ್ಲಿ ಮಹಿಳೆಯ ಮೇಲೆ ದೌರ್ಜನ್ಯ ಎಸಗಿದ್ದ ಪ್ರಕರಣ ದಾಖಲಾಗಿದ್ದು, ಆತನೂ ಜಾಮೀನಿನಲ್ಲಿದ್ದಾನೆ. ಆತನ ತಂದೆಯೂ ಪೋಕ್ಸೋ ಪ್ರಕರಣದಲ್ಲಿ 7 ವರ್ಷ ಜೈಲಿನಲ್ಲಿದ್ದವರು. ಆತನೂ ಸಹ ಅವರ ಅಕ್ಕನ ಮನೆಯಲ್ಲೇ ಅಂದರೆ ನನ್ನ ಮಗು ಇರುವ ಮನೆಯಲ್ಲೇ ವಾಸವಿದ್ದಾನೆ. ಇಂತಹ ದುಷ್ಟಕೂಟದ ನಡುವೆ ತನ್ನ ಮಗಳು ಬೆಳೆಯುವುದನ್ನ ಜವಾಬ್ದಾರಿಯುತ ಯಾವ ತಂದೆಯೂ ಸಹಿಸಲಾರ. ಹೀಗಾಗಿಯೇ ನಾನು ನನ್ನ ಮಗಳು ಭದ್ರಾವತಿಯ ಹುತ್ತಾ ಕಾಲೋನಿಯಲ್ಲಿ ಟ್ಯೂಷನ್ ಮುಗಿಸಿ ಬರುತ್ತಿದ್ದ ವೇಳೆ ಆಕೆಯನ್ನು ವಾಪಸ್ ತಮಿಳುನಾಡಿಗೆ ಕರೆ ತಂದಿದ್ದೆ. ನನ್ನ ಮಗಳನ್ನು ಟ್ಯೂಷನ್ ನಿಂದ ಮನೆಗೆ ಡ್ರಾಪ್ ಮಾಡುವ ಆಟೋ ಡ್ರೈವರ್ ಗೆ ಹೇಳಿಯೇ ಕರೆತಂದಿದ್ದೆ.
“ತಂದೆಯೇ ಮಗುವನ್ನು ಕರೆದುಕೊಂಡು ಹೋಗಿದ್ದಾರೆ ” ಎಂದು ಆಟೋ ಡ್ರೈವರ್ ಹೇಳಿಕೆ ನೀಡಿದ್ದರೂ ಸಹ ಸಬ್ ಇನ್ಸ್ಪೆಕ್ಟರ್ ರಮೇಶ್ ಆತನಿಂದ ಮತ್ತೊಂದು ಸುಳ್ಳು ಹೇಳಿಕೆ ಪಡೆದು ನನ್ನ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಅಲ್ಲದೆ, ಆ ಜಾಗದಲ್ಲೇ ಇಲ್ಲದ ನನ್ನ ಅಕ್ಕನ ಮಗ ಪ್ರಕಾಶ ಹಾಗೂ ಆತನ ಸ್ನೇಹಿತರಾದ ಭರತ-ಕುಮಾರ ಎಂಬವರ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ. “ತಂದೆಯ ವಿರುದ್ಧ ಅಪಹರಣ ಮೊಕದ್ದಮೆ ದಾಖಲಿಸುವಂತಿಲ್ಲ” ಎಂದು ಗುಜರಾತ್ ಹೈಕೋರ್ಟ್ ತೀರ್ಪು ನೀಡಿದೆ.
ಮಗುವೂ ನನ್ನ ಜೊತೆಗೇ ಇರಲು ಇಚ್ಚಿಸುತ್ತಿದೆ. ನೀವು ಅನುಮತಿಸಿದರೆ, ನಾನು ಈಗಲೂ ನನ್ನ ಮಗಳನ್ನು ತಮ್ಮ ಕಚೇರಿಗೆ ತಂದು ಹೇಳಿಕೆ ದಾಖಲಿಸಲು ಸಿದ್ದನಿದ್ದೇನೆ. ಭದ್ರಾವತಿ ನ್ಯೂಟೌನ್ ಪೊಲೀಸರು ಇಲ್ಲಿಗೇ ಬಂದು ಹೇಳಿಕೆ ಪಡೆದು ಹೋಗುವಂತೆ ಆದೇಶಿಸಲು ನಿಮ್ಮಲ್ಲಿ ಕಳಕಳಿಯ ಮನವಿ ಮಾಡಿಕೊಳ್ಳುತ್ತೇನೆ. ದಯವಿಟ್ಟು ಈ ಪ್ರಕರಣವನ್ನು ನ್ಯಾಯಬದ್ಧವಾಗಿ ಮುಗಿಸಿಕೊಡಿ” ಎಂದು ಇಳಂಗೋವನ್ ಶಿವಮೊಗ್ಗ ಎಸ್‌ಪಿ ಅವರಲ್ಲಿ ಮನವಿ ಮಾಡಿದ್ದಾರೆ.
ಆದರೆ, ಎಸ್ ಪಿ ಕೂಡ, ನ್ಯೂಟೌನ್ ಪೊಲೀಸ್ ಠಾಣೆಯಲ್ಲಿಯೇ ಮಗುವನ್ನು ಕರೆತಂದು ಹೇಳಿಕೆ ಕೊಡಿಸಿ ಎಂದು ಹೇಳಿ ಜಾರಿಕೊಂಡಿದ್ದಾರೆ. ಇದು ಅನುಮಾನಕ್ಕೆ ಕಾರಣವಾಗಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬೀಗರಾಗಿರುವ ಕಾಂಗ್ರೆಸ್ ಮುಖಂಡ ಸಂಗಮೇಶ್ ಅವರ ಪ್ರಭಾವ ಬಳಸಿ ಶರಣ್ಯ ಕುಟುಂಬದವರು ದೂರು ನೀಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.