ಅಮೆರಿಕದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯವು ಎಲ್ಸೆವಿಯರ್ ಸಹಯೋಗದಲ್ಲಿ ಪ್ರಕಟಿಸಿರುವ ಜಾಗತಿಕ ವೈಜ್ಞಾನಿಕ ಶ್ರೇಯಾಂಕದಲ್ಲಿ, ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ಡಾ. ಗಣೇಶ್ ಪಿ.ಎಸ್. ಸ್ಥಾನ ಪಡೆದಿದ್ದಾರೆ. ಅನಾಲಿಟಿಕಲ್ ಕೆಮಿಸ್ಟ್ರಿ ವಿಭಾಗದಲ್ಲಿ 2026ನೇ ಸಾಲಿನ ಜಾಗತಿಕ ಶ್ರೇಯಾಂಕದಲ್ಲಿ ಅವರು 2,186ನೇ ಸ್ಥಾನ ಗಳಿಸಿದ್ದಾರೆ.
ಪ್ರಸ್ತುತ ದಕ್ಷಿಣ ಕೊರಿಯಾದ ಕೊರಿಯಾಟೆಕ್ ಸಂಶೋಧನಾ ಸಂಸ್ಥೆಯಲ್ಲಿ ಸಂಶೋಧನಾ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಅವರು, ನ್ಯಾನೊ ಮತ್ತು ಪಾಲಿಮರ್ ತಂತ್ರಜ್ಞಾನ, ಸೆನ್ಸರ್‌ಗಳು ಹಾಗೂ ಎಲೆಕ್ಟ್ರೋಕೆಮಿಸ್ಟ್ರಿ ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ.

ಕುವೆಂಪು ವಿಶ್ವವಿದ್ಯಾಲಯದ ಔದ್ಯೋಗಿಕ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಕುಮಾರಸ್ವಾಮಿ ಬಿ.ಇ ಅವರ ಮಾರ್ಗದರ್ಶನದಲ್ಲಿ ‘ಫ್ಯಾಬ್ರಿಕೇಶನ್ & ಡೆವಲಪ್‌ಮೆಂಟ್ ಆಫ್ ಎಲೆಕ್ಟ್ರೋಕೆಮಿಕಲ್ ಸೆನ್ಸರ್ಸ್’ ವಿಷಯದಡಿ ಪಿಎಚ್‌ಡಿ ಸಂಶೋಧನೆ ನಡೆಸಿದ್ದರು. ದಕ್ಷಿಣ ಆಫ್ರಿಕಾದ ನಾರ್ತ್‌ವೆಸ್ಟ್ ವಿಶ್ವವಿದ್ಯಾಲಯ ಹಾಗೂ ಮೆಟೀರಿಯಲ್ಸ್ ರಿಸರ್ಚ್ ಆಂಡ್ ಮಾಡೆಲಿಂಗ್ ಸಂಶೋಧನಾ ಸಂಸ್ಥೆಯಲ್ಲಿಯೂ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.
ದಾವಣಗೆರೆಯ ವಿನೋಬನಗರ ನಿವಾಸಿಗಳಾದ ಸಿದ್ದಪ್ಪ ಪಿ. ಮತ್ತು ಗೌರಮ್ಮ ಪಿ.ಎಸ್. ದಂಪತಿಯ ಪುತ್ರರಾಗಿರುವ ಡಾ. ಗಣೇಶ್ ಅವರ ಸಾಧನೆಗೆ ಕುವೆಂಪು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಸಂಶೋಧಕರು, ಕುಟುಂಬಸ್ಥರು, ಸ್ನೇಹಿತರು ಹಾಗೂ ಜಿಲ್ಲೆಯ ವಿಜ್ಞಾನಾಸಕ್ತರು ಅಭಿನಂದನೆ ಸಲ್ಲಿಸಿದ್ದಾರೆ.






