ಶರಾವತಿ ಅಭಯಾರಣ್ಯ ವ್ಯಾಪ್ತಿಯಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ನಿರ್ಮಿಸುವ ಪ್ರಸ್ತಾಪವನ್ನು ರಾಷ್ಟ್ರೀಯ ವನ್ಯಜೀವಿ ಮಂಡಳಿ (NBWL) ತಿರಸ್ಕರಿಸಿದ ಬೆನ್ನಲ್ಲೇ ಸರ್ಕಾರವು ಯೋಜನೆಗೆ ಅನುಮೋದನೆ ನೀಡುವುದರ ಜೊತೆಗೆ ಕಾನೂನು ತಿದ್ದುಪಡಿ ಶಿಫಾರಸು ಮಾಡುವ ಹೊಸ ವರದಿಯನ್ನು ಮಂಡಿಸಿದೆ.
ಹೊಸ ವರದಿಯನ್ನು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ (ನಿಯಾಸ್) ಪ್ರೊಫೆಸರ್ ಶ್ರೀಕಾಂತ್ ಸಿದ್ಧಪಡಿಸಿದ್ದಾರೆ. ಈ ವರದಿಯ ಪ್ರಕಾರ “ಕರ್ನಾಟಕದಲ್ಲಿ ವಿದ್ಯುತ್ ಸ್ಟೋರೇಜ್ಗೆ ಯಾವುದೇ ಗ್ರಿಡ್ ಇರುವುದಿಲ್ಲ. ಪಂಪ್ಡ್ ಸ್ಟೋರೇಜ್ ಯೋಜನೆಯು ಇಂಧನ ಸಂಗ್ರಹ ಅವಶ್ಯಕತೆಗಳನ್ನು ಪೂರೈಸಲು ಸಹಾಯಕಾರಿ. ಈ ಯೋಜನೆ ಕೈಗೆತ್ತಿಕೊಂಡರೆ ಕರ್ನಾಟಕ ಹೊರರಾಜ್ಯದಿಂದ ವಿದ್ಯುತ್ ಖರೀದಿಸುವುದು ತಪ್ಪುತ್ತದೆ ಮತ್ತು ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸುವ ಪ್ರಮೇಯವಿರದು” ಎಂದು ತಿಳಿಸಿದೆ.
ಇದನ್ನೂ ಓದಿ> ಆಗುಂಬೆ ಸುರಂಗ, ಶೃಂಗೇರಿ ರೈಲು ಮಾರ್ಗ: ವಯನಾಡು ಮಾದರಿ ದುರಂತಕ್ಕೆ ಮುನ್ನುಡಿಯೇ?
“ಕೆಪಿಟಿಎಲ್ ಯೋಜನೆಯ ಭಾಗವಾಗಿ 15.4 ಹೆಕ್ಟೇರ್ ಜಾಗದ ಅರಣ್ಯ ಕಡಿಯಬೇಕಾಗುವುದು ಎಂದು ತಿಳಿಸಿತ್ತು. ಯೋಜನೆಯಲ್ಲಿ ಬದಲಾವಣೆ ತಂದ ನಂತರ 4.8 ಹೆಕ್ಟೇರ್ ಜಾಗ ಸಾಕು. ಆದ್ದರಿಂದ ಒಟ್ಟಾರೆ ಅರಣ್ಯ ನಾಶದ ಪ್ರಮಾಣ 54 ಹೆಕ್ಟೇರ್ನಿಂದ 38 ಹೆಕ್ಟೇರ್ಗೆ ಇಳಿಕೆಯಾಗುತ್ತದೆ” ಎಂದು ವರದಿ ಪ್ರಸ್ತಾಪಿಸಿದೆ.
ಸಂರಕ್ಷಿತ ಪ್ರದೇಶಗಳಲ್ಲಿ ಇದೇ ರೀತಿಯ ಪಂಪ್ಡ್ ಸ್ಟೋರೇಜ್ ಯೋಜನೆಗಳನ್ನು (PSP) ಸುಗಮಗೊಳಿಸುವ ಪ್ರಮುಖ ಬದಲಾವಣೆಯನ್ನು ವರದಿಯು ಸೂಚಿಸಿದೆ. ವನ್ಯಜೀವಿ (ರಕ್ಷಣೆ) ಕಾಯಿದೆಯ ಸೆಕ್ಷನ್-29 ಅಂತಹ ಯೋಜನೆಗಳನ್ನು ನಿಷೇಧಿಸುವುದರಿಂದ, ಶರಾವತಿ ಕಣಿವೆಯ ಪರಿಸರ ಸೂಕ್ಷ್ಮ ವಲಯದಲ್ಲಿ ಇಂತಹ ಪೂರಕ ಚಟುವಟಿಕೆಗಳಿಗೆ ವಿನಾಯಿತಿ ನೀಡಲು ಕೇಂದ್ರ ಸರ್ಕಾರವು ಕಾನೂನು ತಿದ್ದುಪಡಿ ಮಾಡಬೇಕು ಎಂದು ವರದಿ ಹೇಳಿದೆ.
ಈದಿನ.ಕಾಮ್ಗೆ ನಿಯಾಸ್ ವರದಿ ಕುರಿತು ಪ್ರತಿಕ್ರಿಯೆ ನೀಡಿದ ಪರಿಸರ ಕಾರ್ಯಕರ್ತ ನಾಗರಾಜ್ ಕೂವೆ, “ಅರಣ್ಯ ನಾಶದ ಪ್ರಮಾಣ ತಗ್ಗಿಸಿ ಯೋಜನೆ ಪ್ರಾರಂಭಿಸುವ ಪ್ರಸ್ತಾವನೆ ಶರಾವತಿ ಕಣಿವೆ ವ್ಯಾಪ್ತಿಯಲ್ಲಿ ಈ ಯೋಜನೆಯಿಂದ ಉಂಟಾಗಬಹುದಾದ ಹಾನಿಯನ್ನು ತಗ್ಗಿಸುವುದಿಲ್ಲ. ಸೋಲಾರ್, ವಿಂಡ್ ಪವರ್ನಂತಹ ಪರ್ಯಾಯ ಮಾರ್ಗಗಳನ್ನು ಸರ್ಕಾರ ಹುಡುಕುವುದು ಒಳ್ಳೆಯದು. ಈ ಯೋಜನೆ ಚಾಲ್ತಿಯಾದರೆ ಇದರ ಹಿಂದೆಯೇ ಇಂತಹ ಅವೈಜ್ಞಾನಿಕ ಯೋಜನೆಗಳ ಸರಣಿ ಮಲೆನಾಡಿಗೆ ಲಗ್ಗೆ ಇಡಬಹುದು. ಆದ್ದರಿಂದ ಸರ್ಕಾರವು ಈ ಯೋಜನೆಯನ್ನು ಕೈಬಿಟ್ಟು ಬದಲಿ ಮಾರ್ಗಗಳನ್ನು ಹುಡುಕಬೇಕು” ಎಂದು ಹೇಳಿದರು.





