ಕರ್ನಾಟಕ ರಾಜ್ಯದ ಹಲವು ಜಿಲ್ಲೆ ಹಾಗೂ ತಾಲೂಕುಗಳಲ್ಲಿ 2023ನೇ ಸಾಲಿನ ಬರಗಾಲದಿಂದ ರಾಜ್ಯದ ಜನತೆ, ರೈತ ಹಾಗೂ ದಿನನಿತ್ಯ ಕೂಲಿ ಮಾಡುವಂತಹ ಕಾರ್ಮಿಕರ ಪರಿಸ್ಥಿತಿಯು ತೀವ್ರ ದುಃಸ್ಥಿತಿಗೆ ತಲುಪಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಬರ ಪರಿಹಾರ ನೀಡಬೇಕು ಎಂದು ಆಮ್ ಆದ್ಮಿ ಪಾರ್ಟಿ ಕಾರ್ಯಕರ್ತರು ಸರ್ಕಾರಕ್ಕೆ ಮನವಿ ಮಾಡಿದರು.
ಶಿವಮೊಗ್ಗದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಎಎಪಿ ಮುಖಂಡರು, “ಜಾನುವಾರುಗಳಿಗೆ ಮೇಯಲು ಹುಲ್ಲು ಸಿಗುತ್ತಿಲ್ಲ. ಕೆರೆಕಟ್ಟೆಗಳಲ್ಲಿ ಸಂಗ್ರಹವಾಗದ ನೀರಿನ ಅಭಾವದ ಪರಿಣಾಮ ಸರಿಯಾದ ರೀತಿಯಲ್ಲಿ ಕೃಷಿ ಕೆಲಸ ಕಾರ್ಯಗಳನ್ನು ಮಾಡಲು ಆಗುತ್ತಿಲ್ಲ. ಹಲವೆಡೆ ಜನರು ಒಂದೆಡೆಯಿಂದ ಮತ್ತೊಂದೆಡೆಗೆ ವಲಸೆ ಬರುತ್ತಿದ್ದಾರೆ” ಎಂದರು.
“ಜಾನುವಾರುಗಳನ್ನು ನಂಬಿಕೊಂಡು ಬದುಕುತ್ತಿರುವ ರೈತ, ಜಾನುವಾರುಗಳನ್ನು ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವುದು ಹಾಗೂ ಮಳೆಯ ಅಭಾವದಿಂದ ತನ್ನ ಹೊಲಗದ್ದೆಗಳಲ್ಲಿ ಬಿತ್ತನೆ ಕೆಲಸ ಮಾಡದೆ ಒಣಗಿರುವ ಬಂಜರು ಭೂಮಿಯನ್ನು ಬಿಟ್ಟು ಉದ್ಯೋಗ ಹರಸಿ ನಗರದತ್ತ ಹೋಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.
“ಪ್ರಸ್ತುತ ಸರ್ಕಾರ ಬರ ಪರಿಹಾರಕ್ಕೆ ₹800 ಕೋಟಿ ಪರಿಹಾರ ಘೋಷಣೆ ಮಾಡಿದ್ದರೂ ರಾಜ್ಯದ ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಸಚಿವ ಸಂಪುಟವು ಇನ್ನೂ ಹೆಚ್ಚಿನ ಹಣ ಬಿಡುಗಡೆ ಮಾಡುವುದರಿಂದ ಬರ ಪರಿಹಾರಕ್ಕೆ ಒಂದಲ್ಲ ಒಂದು ರೀತಿಯಲ್ಲಿ ರಾಜ್ಯದ ಜನತೆಗೆ ನೆರವಾಗಬಹುದಿತ್ತು” ಎಂದು ಹೇಳಿದರು.
“ಕೇವಲ 18 ಜಿಲ್ಲೆಗಳಿಗೆ ಮಾತ್ರ ಬರ ಪರಿಹಾರದ ಹಣವನ್ನು ಬಿಡುಗಡೆ ಮಾಡಿದ್ದು, ಇನ್ನೂ ಹಲವು ಜಿಲ್ಲೆಗಳಲ್ಲಿ ಗ್ರಾಮಗಳಿಗೆ ಬರ ಪರಿಹಾರದ ಹಣ ಬಿಡುಗಡೆಯಾಗದಿರುವುದು ಯೋಚನೆ ಮಾಡುವಂತಹ ಪ್ರಸಂಗವಾಗಿದೆ. ಆಯಾ ಜಿಲ್ಲಾಧಿಕಾರಿಗಳು ಇನ್ನೂ ಹೆಚ್ಚಿನ ಸಮೀಕ್ಷೆ ನಡೆಸಿ ತಾಲೂಕು, ಹೋಬಳಿ ಹಾಗೂ ಹಲವು ಗ್ರಾಮಗಳ ಸಂಪೂರ್ಣ ವೀಕ್ಷಣೆಯ ಮಾಹಿತಿಯನ್ನು ಸರ್ಕಾರಕ್ಕೆ ಒಪ್ಪಿಸಬೇಕಿದೆ” ಎಂದು ಕೋರಿದರು.
“ಈಗಿನ ನಾಗರಿಕನ ದಿನನಿತ್ಯದ ಬಳಕೆ ವಸ್ತುಗಳಾದ ತರಕಾರಿ, ಅಡುಗೆ ಸಾಮಗ್ರಿಗಳ ಬೆಲೆಗಳು ಗಗನಕ್ಕೇರುತ್ತಿದ್ದು, ಮಧ್ಯಮ ವರ್ಗದವರು ಹಾಗೂ ಬಡತನ ರೇಖೆಗಿಂತ ಕೆಳವರ್ಗದವರು ಜೀವನ ನಡೆಸಲು ಹಣವಿಲ್ಲದೆ, ಅಗತ್ಯ ಸಾಮಗ್ರಿಗಳನ್ನು ಖರೀದಿಸಲು ಸಾಧ್ಯವಾಗದೆ ಪರದಾಡುವಂತಾಗಿದೆ” ಎಂದರು.
“ಸರ್ಕಾರ ನಿರ್ಲಕ್ಷ್ಯ ಮಾಡದೆ ಕೂಡಲೇ ಹೆಚ್ಚಿನ ಹಣವನ್ನು ಜಿಲ್ಲೆಗಳಿಗೆ ಬಿಡುಗಡೆ ಮಾಡುವುದರ ಮೂಲಕ ರೈತರಿಗೆ, ನಾಗರಿಕರಿಗೆ ಮತ್ತು ಇಲ್ಲಿ ದಿನನಿತ್ಯ ಅವಲಂಬಿತವಾದ ಜಾನುವಾರುಗಳಿಗೆ ಅವುಗಳ ರಕ್ಷಣೆಗಾಗಿ ಹಾಗೂ ಕೃಷಿಗಳ ರಕ್ಷಣೆಗಾಗಿ ಕೂಡಲೇ ಕ್ರಮ ಕೈಗೊಳ್ಳಬೇಕಾಗಿದೆ.
ಈ ಸುದ್ದಿ ಓದಿದ್ದೀರಾ? ಹಾವೇರಿ | ಜಿಲ್ಲಾ ಆಸ್ಪತ್ರೆ ಡಿ ದರ್ಜೆ ಗುತ್ತಿಗೆ ನೌಕರರ ವಜಾ; ಮರುನೇಮಕಕ್ಕೆ ಆಗ್ರಹ
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬರ ಪರಿಹಾರದ ಹಣವನ್ನು ಹೆಚ್ಚಿಸಿ ಇನ್ನೂ ಹಲವಾರು ಜಿಲ್ಲೆಗಳಿಗೆ ಸರಿಯಾದ ಬರ ಪರಿಹಾರವನ್ನು ಘೋಷಿಸಬೇಕು” ಆಮ್ ಆದಿ ಪಾರ್ಟಿ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಎಎಪಿಯ ನಜೀರ್ ಅಹಮದ್, ಮಾಧ್ಯಮ ವಕ್ತಾರ ಸುರೇಶ್ ಕೌಟೆಕಾರ್,
ಪ್ರಚಾರ ಸಮಿತಿಯ ಮಂಜುನಾಥ್ ಪೂಜಾರಿ, ಯೂಸುಫ್ ಸೇರಿದಂತೆ ಇತರರು ಇದ್ದರು.