ಅಡುಗೆ ಸಹಾಯಕಿಗೆ ಜಾತಿ ನಿಂದನೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಶಾಲಾಭಿವೃದ್ಧಿ ಸಮಿತಿಯವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಚಿಕ್ಕಗೊಪ್ಪೇನಹಳ್ಳಿ ಗ್ರಾಮಸ್ಥರು ಮತ್ತು ಸಂತ್ರಸ್ಥೆಯ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯ ಭದ್ರಾವತಿ ಡಿವೈಎಸ್‌ಪಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ್ದು, “ಗ್ರಾಮದ ಎ ಕೆ ಕಾಲೋನಿ ನಿವಾಸಿ ರೂಪಾ, ಅಕ್ಷರ ದಾಸೋಹ ಮಾರ್ಗಸೂಚಿ ಅನ್ವಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಡುಗೆ ಸಹಾಯಕಿಯಾಗಿ ನೇಮಕವಾಗಿದ್ದಾರೆ. ಶಾಲಾಭಿವೃದ್ಧಿ ಸಮಿತಿಯವರು ರೂಪಾ ಅವರಿಗೆ ಬೆದರಿಕೆ ಒಡ್ಡಿ, ಜಾತಿ ನಿಂದನೆ ಮಾಡಿದ್ದಾರೆ. ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಸುರೇಶ್ ಈ ದಿನ.ಕಾಮ್ ಜೊತೆ ಮಾತನಾಡಿ, “ನಾವು ಎರಡು ವಿಷಯವನ್ನು ಇಟ್ಟುಕೊಂಡು ಪ್ರತಿಭಟನೆ ಮಾಡುತ್ತಿದ್ದೇವೆ. ಇತ್ತೀಚೆಗೆ ಖ್ಯಾತ ಬಹುಬಾಷಾ ನಟ ಪ್ರಕಾಶ್ ರಾಜ್ ಅವರು ಸಂವಾದ ಕಾರ್ಯಕ್ರಮ ನಡೆಸಿದ್ದು, ಅವರು ಕಾರ್ಯಕ್ರಮ ಮುಗಿಸಿ ಹೋದ ಬಳಿಕ ಕೆಲವರು ಕಾರ್ಯಕ್ರಮ ನಡೆದ ಸ್ಥಳದಲ್ಲಿ ಗಂಜಲ ಹಾಕಿ ತೊಳೆದು ಅವಮಾನ ಮಾಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಸು ದಾಖಲು ಮಾಡಿದ್ದರೂ ಈವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ” ಎಂದು ಆರೋಪಿಸಿದರು.
“ನಗರದ ಎ ಕೆ ಕಾಲೋನಿಯ ಶಾಲೆಯಲ್ಲಿ ಬಿಸಿಯೂಟದ ಸಹಾಯಕಿಯಾಗಿ ಎಸ್ ಸಿ(ಮಾದಿಗ) ಸಮುದಾಯಕ್ಕೆ ಸೇರಿದ ಮಹಿಳೆ ಕೆಲಸಕ್ಕೆ ನೇಮಕವಾಗಿದ್ದು, ಆ ಮಹಿಳೆ ಅಡುಗೆ ಮಾಡಿದರೆ ಊಟ ಮಾಡುವುದಿಲ್ಲವೆಂದು ಜಾತಿ ನಿಂದನೆ ಮಾಡಿದ್ದಾರೆ. ಈ ಬಗ್ಗೆ ಈಗಾಗಲೇ ಶಾಲೆಯ ಎಸ್‌ಡಿಎಂಸಿಯ ಒಂಬತ್ತು ಮಂದಿ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯಿದೆ(ಅಟ್ರಾಸಿಟಿ) ಅಡಿ ಪ್ರಕರಣ ದಾಖಲು ಮಾಡಿದರೂ ಕೂಡ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಬೇಸರ ತಂದಿದೆ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಡಿವೈಎಸ್‌ಪಿ ನಾಗರಾಜ್, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಬಿಇಒ ಎ ಕೆ ನಾಗೇಂದ್ರಪ್ಪ ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಿದರು.
ಬಾಲಕೃಷ್ಣ, ಸುರೇಶ್, ಸುಧೀಂದ್ರ, ಮಂಜುನಾಥ್, ಚನ್ನಪ್ಪ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಇದ್ದರು.