ಮೀಲಾದುನ್ನಬಿಯ ಅಂಗವಾಗಿ ಶಿವಮೊಗ್ಗದ ಗಾಂಧಿ ಬಜಾರ್‌ನಲ್ಲಿರುವ ಮಸೀದಿ ಮುಂಭಾಗದಿಂದ ಹೊರಟಿದ್ದ ಮೆರವಣಿಗೆಯ ಮೇಲೆ ಕಿಡಿಗೇಡಿಗಳು ರಾಗಿಗುಡ್ಡ ಎಂಬಲ್ಲಿ ಕಲ್ಲು ತೂರಾಟ ನಡೆಸಿದ ಪರಿಣಾಮ ಉದ್ನಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಮೆರವಣಿಗೆ ಸಂದರ್ಭ ರಾಗಿಗುಡ್ಡದಲ್ಲಿ ಸಂಜೆ ವೇಳೆ ಘಟನೆ ನಡೆದಿದ್ದು, ವಾಹನಗಳು, ಮನೆಗಳು, ಮೇಲೆ ದುಷ್ಕರ್ಮಿಗಳು ಕಲ್ಲು ತೂರಿದ್ದಾರೆ. ಅಲ್ಲದೇ ಸ್ಥಳದಲ್ಲಿ ಬಂದೋಬಸ್ತಿನಲ್ಲಿ ನಿಯೋಜಿತರಾಗಿದ್ದ ಪೊಲೀಸರು, ಮಾಧ್ಯಮದವರ ಮೇಲೂ ಕಲ್ಲು ತೂರಾಟ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಹಿನ್ನೆಲೆಯಲ್ಲಿ ರಾಗಿಗುಡ್ಡ ಪ್ರದೇಶದಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದ್ದು, ಕಲ್ಲು ತೂರಾಟ ಸಂಬಂಧ ಸುಮಾರು ಏಳು ಮಂದಿಯನ್ನು ಪೊಲೀಸರು ಹಲವರನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ, ಘಟನೆಯ ವೇಳೆ ಲಘು ಲಾಠಿ ಪ್ರಹಾರ ಕೂಡ ನಡೆದಿದೆ ಎಂದು ವರದಿಯಾಗಿದೆ.
ಪರಿಸ್ಥಿತಿ ಕೈಮೀರುವ ಮುನ್ನ ಶಿವಮೊಗ್ಗ ಜಿಲ್ಲಾಧಿಕಾರಿ ಸೆಲ್ವಮಣಿಯವರು 144 ಸೆಕ್ಷನ್ ಜಾರಿಗೊಳಿಸಿ, ನಿಷೇಧಾಜ್ಞೆ ಹೇರಿದ್ದಾರೆ. ಕಲ್ಲು ತೂರಾಟದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಅವರು ಮೊಕ್ಕಾಂ ಹೂಡಿದ್ದಾರೆ.

ಗಾಂಧಿಬಜಾರ್ ಜಾಮೀಯಾ ಮಸೀದಿಯಿಂದ ಆರಂಭವಾದ ಮೆರವಣಿಗೆಯು ನಾಗಪ್ಪನ ಕೇರಿ, ಲಷ್ಕರ್ ಮೊಹಲ್ಲಾ, ಸಿ.ಆರ್.ಎನ್.ರಸ್ತೆ, ಓಲ್ಡ್ ಬಾರ್ ಲೈನ್, ಪೆನ್ಯನ್ ಮೊಹಲ್ಲಾ, ಬಿ.ಎಚ್.ರಸ್ತೆ, ಮೀನಾಕ್ಷಿ ಭವನ, ಟ್ಯಾಂಕ್ ಮೊಹಲ್ಲಾ, ಟ್ಯಾಂಕ್ ಬಂಡ್ ರಸ್ತೆ, ಬಾಪೂಜಿನಗರ ಮುಖ್ಯರಸ್ತೆ, ಬಾಲರಾಜ್ ಅರಸ್ ರಸ್ತೆ, ಮಹಾವೀರ ವೃತ್ತ, ಸೀನಪ್ಪ ಶೆಟ್ಟಿ ವೃತ್ತ, ನೆಹರು ರಸ್ತೆ, ಅಮೀರ್ ಅಹಮ್ಮದ್ ರಸ್ತೆ, ಬಿ.ಎಚ್.ರಸ್ತೆ, ಅಶೋಕ ವೃತ್ತ, ಎನ್.ಟಿ.ರಸ್ತೆ, ಗುರುದೇವ ರಸ್ತೆ, ಕ್ಲಾರ್ಕ್‌ಪೇಟೆ, ನೂರಾನಿ ಮಸೀದಿ, ಕೆ.ಆರ್.ಪುರಂ ರಸ್ತೆ ಮಾರ್ಗವಾಗಿ ಅಮೀರ್ ಅಹಮ್ಮದ್ ವೃತ್ತ ತಲುಪಬೇಕಿತ್ತು. ಈ ನಡುವೆಯೇ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿರುವುದಾಗಿ ವರದಿಯಾಗಿದೆ.