ನಿಯಮಾನುಸಾರ ಕಂತು ಪಾವತಿಸಿದರೂ ಜೀವ ವಿಮಾ ಪಾಲಿಸಿಯನ್ನು ಪುನರಾರಂಭಿಸದೆ ಸೇವಾ ನ್ಯೂನತೆ ಎಸಗಿದ ಮುಂಬೈನ ಐಸಿಐಸಿಐ ಪ್ರುಡೆನ್ಷಿಯಲ್ ಇನ್ಶೂರೆನ್ಸ್ ಕಂಪನಿಗೆ ಶಿವಮೊಗ್ಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ದಂಡ ಹಾಗೂ ಪರಿಹಾರ ಪಾವತಿಸುವಂತೆ ಆದೇಶಿಸಿದೆ.
ಶಿವಮೊಗ್ಗದ ಹಳೇಬಾರ್ ರಸ್ತೆಯ ನಿವಾಸಿ ನಾಗರಾಜ ಎಂಬುವರು ಐಸಿಐಸಿಐ ಬ್ಯಾಂಕ್ ಮೂಲಕ ಐಸಿಐಸಿಐ ಪ್ರುಡೆನ್ಷಿಯಲ್ ಇನ್ಶೂರೆನ್ಸ್ ಕಂಪನಿಯ ಜೀವ ವಿಮಾ ಪಾಲಿಸಿಯನ್ನು (ಅವಧಿ: 30/06/2019 ರಿಂದ 30/06/2046, ವಾರ್ಷಿಕ ಕಂತು: ರೂ.65,460) ಪಡೆದುಕೊಂಡಿದ್ದರು. 2024 ರ ಕಂತು ಪಾವತಿಯಾಗದಿರುವುದನ್ನು ಗಮನಿಸಿ, ದಂಡ ಸಹಿತ ರೂ.82,467 ಗಳನ್ನ 2025 ರ ಮೇ 7 ರಂದು ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದರು. ತದನಂತರ 2025 ರ ಜುಲೈ 9 ರಂದು ಕಂತು ರೂ. 78,688 ಗಳನ್ನು ಪಾವತಿಸಿ, ಪಾಲಿಸಿಯನ್ನು ಪುನರಾರಂಭಿಸಲು (ರಿವೈವಲ್) ಕೋರಿದ್ದರು. ಕಂಪನಿಯ ಸೂಚನೆಯಂತೆ ಅಧಿಕೃತ ವೈದ್ಯರಿಂದ ಆರೋಗ್ಯ ತಪಾಸಣೆ ಮಾಡಿಸಿ ವರದಿ ನೀಡಿದರೂ, ವಿಮಾ ಕಂಪನಿಯು ಯಾವುದೇ ಪ್ರತಿಕ್ರಿಯೆ ನೀಡದೆ ಪಾಲಿಸಿಯನ್ನು ಪುನರಾರಂಭಿಸಿರಲಿಲ್ಲ.
ನೋಟೀಸ್ ನೀಡಿದರೂ ಸ್ಪಂದಿಸದ ಕಾರಣ ದೂರುದಾರರು ವಕೀಲರ ಮೂಲಕ ಜಿಲ್ಲಾ ಗ್ರಾಹಕ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಆಯೋಗದ ಆದೇಶ:
ಉಭಯ ಪಕ್ಷಕಾರರ ವಾದ-ವಿವಾದಗಳನ್ನು ಆಲಿಸಿದ ಆಯೋಗವು, ವಿಮಾ ಕಂಪನಿಯು ಸೇವಾ ನ್ಯೂನತೆ ಎಸಗಿರುವುದು ಸಾಬೀತಾಗಿದೆ ಎಂದು ತೀರ್ಮಾನಿಸಿ ಈ ಕೆಳಗಿನಂತೆ ಆದೇಶಿಸಿದೆ,
2ನೇ ಎದುರುದಾರರಾದ ಐಸಿಐಸಿಐ ಪ್ರುಡೆನ್ಷಿಯಲ್ ಇನ್ಶೂರೆನ್ಸ್ ಕಂಪನಿಯು ದೂರುದಾರರಿಂದ ಬರಬೇಕಾದ ವಿಮಾ ಕಂತಿನ ಮೊತ್ತವನ್ನು ಪಡೆದು 45 ದಿನಗಳ ಒಳಗಾಗಿ ಪಾಲಿಸಿಯನ್ನು ಪುನರಾರಂಭಿಸಬೇಕು.ತಪ್ಪಿದಲ್ಲಿ, ಪಾಲಿಸಿ ಪುನರಾರಂಭಿಸುವವರೆಗೆ ಪ್ರತಿದಿನ ರೂ.100 ರಂತೆ ದೂರುದಾರರಿಗೆ ಪಾವತಿಸಬೇಕು. ಹಾಗೂ ಮಾನಸಿಕ ಹಿಂಸೆಗೆ ರೂ.30,000 ಹಾಗೂ ದೂರಿನ ಖರ್ಚುವೆಚ್ಚಕ್ಕಾಗಿ ರೂ.10,000 ಗಳನ್ನು 45 ದಿನಗಳ ಒಳಗಾಗಿ ದೂರುದಾರರಿಗೆ ಪಾವತಿಸಬೇಕು.
ನಿಗದಿತ 45 ದಿನಗಳೊಳಗೆ ಮೊತ್ತ ಪಾವತಿಸದಿದ್ದರೆ ಶೇ.10 ಬಡ್ಡಿ ಸೇರಿಸಿ ಪೂರ್ತಿ ಹಣ ಪಾವತಿಸಬೇಕಾಗುತ್ತದೆ. 1ನೇ ಎದುರುದಾರರಾದ ಐಸಿಐಸಿಐ ಬ್ಯಾಂಕ್ ವಿರುದ್ಧದ ದೂರನ್ನು ವಜಾಗೊಳಿಸಲಾಗಿದೆ.
ಈ ಆದೇಶವನ್ನು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ ಹಾಗೂ ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯ ಅವರನ್ನೊಳಗೊಂಡ ಪೀಠವು ದಿನಾಂಕ 12/10/2026 ರಂದು ಹೊರಡಿಸಿದೆ.





