ಕೇಂದ್ರ ಗೃಹ ಸಚಿವಾಲಯ ಹಾಗೂ ಲಡಾಖ್ನ ಪ್ರಾತಿನಿಧಿಕ ಸಂಸ್ಥೆಗಳ ನಡುವೆ ಲೇಹ್ನಲ್ಲಿ ಗುರುವಾರ ನಡೆದ ಮಹತ್ವದ ಸಭೆಯಲ್ಲಿ ಯಾವುದೇ ಅಂತಿಮ ನಿರ್ಧಾರ ಅಥವಾ ಪ್ರಗತಿ ಸಾಧ್ಯವಾಗಿಲ್ಲ. ಹೀಗಾಗಿ, ಎರಡೂ ಕಡೆಗಳ ನಡುವಿನ ಮುಂದಿನ ಸುತ್ತಿನ ಮಾತುಕತೆಯನ್ನು ಅಕ್ಟೋಬರ್ 22ರಂದು ನವದೆಹಲಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ.
ಲೇಹ್ ಎಪೆಕ್ಸ್ ಬಾಡಿ (LAB) ಮತ್ತು ಕಾರ್ಗಿಲ್ ಡೆಮಾಕ್ರಟಿಕ್ ಅಲಯನ್ಸ್ (KDA) ಪ್ರತಿನಿಧಿಗಳೊಂದಿಗೆ ಕೇಂದ್ರ ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳ ತಂಡ ಸುದೀರ್ಘ ಚರ್ಚೆ ನಡೆಸಿತು. ಈ ಸಭೆಯಲ್ಲಿ ಗೃಹ ಸಚಿವಾಲಯವು ಸುಮಾರು 15 ರಿಂದ 20 ಪುಟಗಳ ಕರಡು ಪ್ರಸ್ತಾವನೆಯನ್ನು ಪವರ್ ಪಾಯಿಂಟ್ ಪ್ರಸ್ತುತಿಯೊಂದಿಗೆ ನೀಡಿದೆ. ಇದೇ ವೇಳೆ, ಲಡಾಖ್ ನಾಯಕರು ಸಹ ತಮ್ಮ ಬೇಡಿಕೆಗಳನ್ನೊಳಗೊಂಡ ಸ್ವಂತ ಕರಡನ್ನು ಸರ್ಕಾರಕ್ಕೆ ಸಲ್ಲಿಸಿದರು.
ಇದನ್ನೂ ಓದಿ: BREAKING NEWS | ಲಡಾಖ್ ಹಿಂಸಾಚಾರ: ಹೋರಾಟಗಾರ ಸೋನಮ್ ವಾಂಗ್ಚುಕ್ ಬಂಧನ
ಆದರೆ, ಗೃಹ ಸಚಿವಾಲಯ ನೀಡಿದ ಪ್ರಸ್ತಾವನೆಯು ಲಡಾಖ್ ಜನರ ಆಕಾಂಕ್ಷೆಗಳಿಗೆ ಸೂಕ್ತವಾಗಿಲ್ಲ, ಎರಡೂ ಪ್ರಸ್ತಾವನೆಗಳ ನಡುವೆ ಭಾರಿ ಅಂತರವಿದೆ ಎಂದು ಎಲ್ಎಬಿ ಮತ್ತು ಕೆಡಿಎ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಖ್ಯವಾಗಿ, ಲಡಾಖ್ಗೆ ಪೂರ್ಣ ಪ್ರಮಾಣದ ಶಾಸನಸಭೆ ನೀಡುವುದು, ಆರ್ಟಿಕಲ್ 371-ಕೆ ಮಾದರಿಯಲ್ಲಿ ಸಂವಿಧಾನಾತ್ಮಕ ರಕ್ಷಣೆ ಮತ್ತು ಸ್ಥಳೀಯರಿಗೆ ಹೆಚ್ಚಿನ ಅಧಿಕಾರ ನೀಡುವ ವಿಚಾರಗಳಲ್ಲಿ ಸಮ್ಮತಿ ಮೂಡಿಲ್ಲ.
ಮಾತುಕತೆ ಬಳಿಕ ಮಾತನಾಡಿದ ಎಲ್ಎಬಿ ಚೇರ್ಮ್ಯಾನ್ ಚೆರಿಂಗ್ ದೋರ್ಜೆ ಲಕ್ರುಕ್ ಮತ್ತು ಸಾಮಾಜಿಕ ಹೋರಾಟಗಾರ ಸೋನಮ್ ವಾಂಗ್ಚುಕ್, “ಸದ್ಯದ ಪ್ರಸ್ತಾವನೆ ಅಸಮಾಧಾನಕರವಾಗಿದೆ. ಆದರೆ ಚರ್ಚೆಯನ್ನು ನಾವು ವಿಫಲವೆಂದು ಪರಿಗಣಿಸದೆ, ಸಂಭಾಷಣೆಯ ಮುಂದುವರಿದ ಭಾಗವಾಗಿ ನೋಡುತ್ತಿದ್ದೇವೆ. ಅಕ್ಟೋಬರ್ 22 ರಂದು ದೆಹಲಿಯಲ್ಲಿ ನಡೆಯಲಿರುವ ಸಭೆಯಲ್ಲಿ ಗೃಹ ಸಚಿವಾಲಯವು ಮತ್ತೊಂದು ಪರಿಷ್ಕೃತ ಕರಡನ್ನು ಸಲ್ಲಿಸುವ ನಿರೀಕ್ಷೆಯಿದೆ” ಎಂದು ತಿಳಿಸಿದ್ದಾರೆ.






