ವಿಜಯಪುರ ಮತಕ್ಷೇತ್ರದ ಅಭಿವೃದ್ಧಿ ನನ್ನ ಹೋರಾಟದ ಫಲ. ಜಿಲ್ಲೆಯ ಕೊರ್ತಿ ಕೊಲ್ಹಾರ ಸೇತುವೆ ನಿರ್ಮಾಣಕ್ಕಾಗಿ ನಡೆದ ಹೋರಾಟ, ನೀರಾವರಿ ಯೋಜನೆ ಅನುಷ್ಠಾನಗೊಳಿಸುವಲ್ಲಿ ಹಾಗೂ ಹೊಸ ತಾಲೂಕುಗಳ ರಚನೆಯಲ್ಲಿ ಸಚಿವ ಶಿವಾನಂದ ಪಾಟೀಲರ ಪಾತ್ರ ಎಳ್ಳಷ್ಟೂ ಇಲ್ಲ, ಈ ಕುರಿತು ಮಾತನಾಡುವ ಯಾವ ಹಕ್ಕು ಸಹ ಅವರಿಗೆ ಇಲ್ಲ ಎಂದು ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ ಹೇಳಿದರು.
ವಿಜಯಪುರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಕೊರ್ತಿ ಕೊಲ್ಹಾರ ಸೇತುವೆ, ಮುಳವಾಡ ಏತ ನೀರಾವರಿ ಮೊದಲನೇ ಹಂತ ಹೀಗೆ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ನಾನು ಹೋರಾಟದ ಮೂಲಕ ಹಾಗೂ ನಂತರ ಬಸವನ ಬಾಗೇವಾಡಿ ಶಾಸಕನಾಗಿದ್ದ ಅವಧಿಯಲ್ಲಿ ಸಾಕಾರಗೊಳಿಸಿದ್ದೇನೆ. ಆದರೆ ಈ ಸಾಧನೆಯನ್ನು ತಮ್ಮ ಸಾಧನೆಯ ಲೇಬಲ್ ಹಚ್ಚಿಕೊಳ್ಳುವುದನ್ನು ಸಚಿವ ಶಿವಾನಂದ ಪಾಟೀಲ ಬಿಡಬೇಕು” ಎಂದು ಒತ್ತಾಯಿಸಿದರು.
“ಈ ಹಿಂದೆ ಸಣ್ಣ ಸೇತುವೆ ಮಳೆಗಾಲ ಸಮಯದಲ್ಲಿ ಬಂದ್ ಆಗುತ್ತಿತ್ತು. ಶಾಶ್ವತವಾಗಿ ಸೇತುವೆ ಮುಳುಗುವ ಹಂತಕ್ಕೂ ಬಂದಿತ್ತು, ಆಗ ಶಾಶ್ವತ ಸೇತುವೆ ನಿರ್ಮಾಣಕ್ಕಾಗಿ ಒಂದು ದೊಡ್ಡ ಹೋರಾಟ ಮಾಡಿದೆ. ಕೊಲ್ಹಾರದಿಂದ ವಿಜಯಪುರ ನಗರಕ್ಕೆ ನೀರು ಸಂಪರ್ಕ ಬಂದ್ ಮಾಡಿ ದೊಡ್ಡಮಟ್ಟದ ಹೋರಾಟ ನಡೆದಿತ್ತು. ಈ ವೇಳೆ ನಮ್ಮನ್ನು ಬಂಧಿಸಲು ಆಗಮಿಸಿದ ಪೊಲೀಸ್ ಅಧಿಕಾರಿಗಳು ಈ ಸೇತುವೆ ಅನಿವಾರ್ಯತೆ ಮನಗಂಡು ಬಂಧಿಸಲಿಲ್ಲ. ಈ ಹೋರಾಟಕ್ಕೆ ಅನೇಕ ಬಾರಿ ಶಾಸಕರಾಗಿದ್ದ ದಿವಂಗತ ಬಿ ಎಸ್ ಪಾಟೀಲ ಮನಗೂಳಿಯವರೂ ಕೂಡ ಬೆಂಬಲಿಸಲಿಲ್ಲ. ಹಾಲಿ ಸಚಿವರಾಗಿರುವ ಶಿವಾನಂದ ಪಾಟೀಲರು ಕೂಡ ಅಂದು ಈ ಹೋರಾಟಕ್ಕೆ ಬಂದಿರಲಿಲ್ಲ” ಎಂದರು.
ಇದನ್ನೂ ಓದಿದ್ದೀರಾ? ಬೆಳಗಾವಿ | ಅತ್ಯಾಚಾರ ಆರೋಪ: ಮೇಖಳಿಯ ಲೋಕೇಶ್ವರ ಸ್ವಾಮೀಜಿ ವಿರುದ್ಧ ಪೋಕ್ಸೋ, ಬಂಧನ
ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಗುರಲಿಂಗಪ್ಪ ಅಂಗಡಿ, ಮುಖಂಡ ರಾದ ಕಲ್ಲಪ್ಪ ಸೊನ್ನದ, ಇಸ್ಮಾಯಿಲ್ ತಹಶೀಲ್ದಾರ್, ಪರಶುರಾಮ ಗಣಿ ಸೇರಿದಂತೆ ಇತರರು ಇದ್ದರು.