ಜನರ ಆರೋಗ್ಯ ಕಾಪಾಡಬೇಕಾದ ಲಿಂಗಸಗೂರು ತಾಲ್ಲೂಕಿನ ಮುದಗಲ್ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯೆದ್ಯರಿಲ್ಲ ರೋಗಗಸ್ಥವಾಗಿದ್ದು, ಇದರಿಂದ ರೋಗಿಗಳು ಚಿಕಿತ್ಸೆಗಾಗಿ ನಿತ್ಯ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಉಳ್ಳವರು ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತಾರೆ. ಆದರೆ, ಬಡವರಿಗೆ ಸರ್ಕಾರಿ ಆಸ್ಪತ್ರೆಗಳೇ ಗತಿ ಎಂಬಂತಾಗಿದೆ. ತುರ್ತು ಸಂದರ್ಭಗಳಲ್ಲಿ ಚಿಕಿತ್ಸೆಗೆ ಬಂದ ರೋಗಿಗಳಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಯಲ್ಲಿ ವೈದ್ಯರಿರುವುದಿಲ್ಲ. ಇದರಿಂದ ಕೆಲವರು ಜೀವ ಕಳೆದುಕೊಂಡ ಘಟನೆಗಳು ನಡೆದಿವೆ ಎಂಬ ಆರೋಪ ಜನರದ್ದು.
ಮುದಗಲ್ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಬೆಳಿಗ್ಗೆ 9 ರಿಂದ ಸಂಜೆ 4.30ರವರೆಗೆ ಮಾತ್ರ ವೈದ್ಯರಿರುತ್ತಾರೆ. ಸಂಜೆ ನಂತರ ರೋಗಿಗಳಿಗೆ ಚಿಕಿತ್ಸೆ ನೀಡುವರು ಗ್ರೂಪ್ ಡಿ ನೌಕರರು. ಆಸ್ಪತ್ರೆಯಲ್ಲಿ ರಾತ್ರಿ ವೇಳೆ ವ್ಯೆದ್ಯರ ಕೊರತೆ ಕಾಡುತ್ತಿದ್ದು, ರೋಗಿಗಳಿಗೆ ಸೂಕ್ತ ವ್ಯೆದ್ಯಕೀಯ ಸೇವೆ ಲಭಿಸುವುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ಸರ್ಕಾರಿ ವೈದ್ಯರು ಖಾಸಗಿ ಕ್ಲಿನಿಕ್ ತೆರೆದಿದ್ದಾರೆ. ಆಸ್ಪತ್ರೆಗಿಂತ ಹೆಚ್ಚಿನ ಸಮಯ ತಮ್ಮ ಖಾಸಗಿ ಆಸ್ಪತ್ರೆಯಲ್ಲಿ ಕಳೆಯುತ್ತಾರೆ. ರೋಗಿಗಳನ್ನು ಸರ್ಕಾರಿ ಆಸ್ಪತ್ರೆಗಿಂತ ತಮ್ಮ ಖಾಸಗಿ ಕ್ಲಿನಿಕ್‌ಗೆ ಬರಬೇಕೆಂಬ ಉದ್ದೇಶವಿದೆ ಎನ್ನುವುದು ಸ್ಥಳೀಯರು ಹೇಳುತ್ತಾರೆ.
ಈ ಬಗ್ಗೆ ಚಂದಾವಲಿ ಎಂಬುವರು ಮಾತನಾಡಿ, ʼಹೊಲದಲ್ಲಿ ಮನೆ ಕಟ್ಟಿಸಿಕೊಂಡು ಜೀವನ ಸಾಗಿಸುತ್ತಿದ್ದೇನೆ. ಇತ್ತೀಚೆಗೆ ಆಕಸ್ಮಿಕವಾಗಿ ಜ್ವರ ಕಾಣಿಸಿಕೊಂಡಿತು, ತಕ್ಷಣ ಮುದಗಲ್ ಆಸ್ಪತ್ರೆಗೆ ತೆರಳಿದರೆ ʼಡಾಕ್ಟರ್ ಇಲ್ಲʼ ಎಂದು ಡಿ ಗ್ರೂಪ್ ನೌಕರರೊಬ್ಬರು ಹೇಳಿದರು. ಹೀಗೆ ತುರ್ತು ಚಿಕಿತ್ಸೆಗೆಂದು ಹೋದರೆ ಯಾರೊಬ್ಬರೂ ವ್ಯೆದ್ಯರಿಲ್ಲದೇ ಇರುವುದು ವಿಪರ್ಯಾಸದ ಸಂಗತಿ. ಇದರಿಂದ ಸಾರ್ವಜನಿಕರು ಆಸ್ಪತ್ರೆಗೆ ರೋಗಿಗಳು ನಿತ್ಯ ಅಲೆದಾಡಬೇಕಾಗಿದೆʼ ಎಂದರು.
ಎಸ್‌ಡಿಪಿಐ ಮುಖಂಡ ರಫಿ ಕರಾಟೆ ಮಾತನಾಡಿ, ʼಆಸ್ಪತ್ರೆಯಲ್ಲಿ ಹಗಲಿನಲ್ಲೇ ಮಾತ್ರ ವೈದ್ಯರು ಸೇವೆಗೆ ಸಿಗುತ್ತಾರೆ. ರಾತ್ರಿಯಾದರೆ ಯಾರೊಬ್ಬರೂ ವ್ಯೆದ್ಯರು ಇರಲ್ಲ. ಸರ್ಕಾರಿ ವ್ಯೆದ್ಯರೇ ಖಾಸಗಿ ಆಸ್ಪತ್ರೆ ತೆರೆದು ಸ್ಕ್ಯಾನಿಂಗ್ ಸೇರಿದಂತೆ ವಿವಿಧ ಪರೀಕ್ಷೆಗಳ ಹೆಸರಿನಲ್ಲಿ ರೋಗಿಗಳಿಂದ ದುಬಾರಿ ಹಣ ಪಡೆದು ಮೋಸ ಮಾಡುತ್ತಿದ್ದಾರೆʼ ಎಂದು ದೂರಿದರು.
ಈ ಸುದ್ದಿ ಓದಿದ್ದೀರಾ? 5 ಎಕರೆ ಹಿಂತಿರುಗಿಸಲು ನಿರ್ಧರಿಸಿದ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಸಿದ್ಧಾರ್ಥ ವಿಹಾರ ಟ್ರಸ್ಟ್
ಮುದಗಲ್ ಪಟ್ಟಣದ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಜನರ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಆಸ್ಪತ್ರೆ ನಿರ್ಮಿಸಲಾಗಿದೆ. ಆದರೆ ತುರ್ತು ಸಂದರ್ಭದಲ್ಲಿ ಹೋದರೆ ವ್ಯೆದ್ಯರ ಕೊರತೆ ಕಾಡುತ್ತಿದೆ. ಈ ಬಗ್ಗೆ ಚುನಾಯಿತ ಜನಪ್ರತಿನಿಧಿಗಳು, ಅಧಿಕಾರಿಗಳು ಕೂಡಲೇ ಗಮನಹರಿಸಿ ಅಗತ್ಯ ವ್ಯೆದ್ಯರ ನೇಮಕ ಮಾಡಬೇಕುʼ ಎಂದು ಆಗ್ರಹಿಸಿದರು.