ಬೆಂಗಳೂರು ರಿಂಗ್ ರಸ್ತೆಯ (ಬಿಆರ್ ಆರ್) ಭೂ ಸ್ವಾಧೀನವನ್ನು ಕೈ ಬಿಡುವಂತೆ ಸಿದ್ದಗಂಗಾ ಮಠಾಧೀಶರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರು ಕೇಂದ್ರ ಸಚಿವ ಸೋಮಣ್ಣ ಅವರ ಮೂಲಕ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಶನಿವಾರ ಸಿದ್ದಗಂಗಾ ಮಠದಲ್ಲಿ ನೂರಾರು ರೈತರ ಸಮ್ಮುಖದಲ್ಲಿ ಅವರು ರೈತರು ನೀಡಿದ ಈ ಒತ್ತಾಯದ ಮನವಿ ಪತ್ರವನ್ನು ಕೇಂದ್ರ ಸಚಿವರಿಗೆ ಸಲ್ಲಿಸಿದರು. ಭಾರತ ಮಾಲಾ ಯೋಜನೆಯಲ್ಲಿ ಈ ರಸ್ತೆಗಾಗಿ 2019ರಲ್ಲಿ ಭೂ ಸ್ವಾಧೀನದ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಕಕನಪುರ- ಅನೇಕಲ್, ರಾಮನಗರ-ಮಾಗಡಿ-ಶಿವಗಂಗೆ ಮಾರ್ಗವಾಗಿ ದಾಬಸಪೇಟೆ ಗೆ ಸೇರುವ ಬೆಂಗಳೂರು ರಿಂಗ್ ರಸ್ತೆಗೆ (ಬಿಆರ್ ಆರ್) ಈಗಾಗಲೇ ಭೂ ಸ್ವಾಧೀನವನ್ನು ಮಾಡಿಕೊಳ್ಳಲಾಗಿದೆ. ಕೆಲವೇ ಮಂದಿಗೆ ಮಾತ್ರ ಪರಿಹಾರ ನೀಡಿ ಉಳಿದ ರೈತರಿಗೆ ಪರಿಹಾರವನ್ನು ನೀಡಿಲ್ಲ. ಅಧಿಕಾರಿಗಳು ಯೋಜನೆಯನ್ನು ಕೇಂದ್ರ ಸರ್ಕಾರ ತಾತ್ಕಾಲಿಕವಾಗಿ ನಿಲ್ಲಿಸಿದೆ. ಪರಿಹಾರ ಕೊಡಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ. ರೈತರಿಗೆ ಭೂಮಿಯೂ ಇಲ್ಲ, ಪರಿಹಾರವೂ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸರ್ಕಾರ, ಪರಿಹಾರ ಕೊಡಬೇಕು ಇಲ್ಲವೇ ರೈತರಿಗೆ ಭೂಮಿಯನ್ನಾದರೂ ವಾಪಸ್ ನೀಡಲಿ. ಈ ಬಗ್ಗೆ ಕೇಂದ್ರ ಸರ್ಕಾರದಲ್ಲಿ ಮಾತನಾಡಬೇಕು ಎಂದರು.
ಶಿವಗಂಗೆಯ ಹೊನ್ನಮ್ಮಗವಿ ಮಠದ ಶ್ರೀಗಳಾದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಭೂ ಸ್ವಾಧೀನದ ಹಣ ಬರಲಿದೆ ಎಂದು ಅನೇಕ ರೈತರು ಸಾಲ ಮಾಡಿ ಮನೆ ಕಟ್ಟಿದ್ದಾರೆ, ಮದುವೆ ಮಾಡಿದ್ದಾರೆ. ಸಾಲಕ್ಕೆ ಬಡ್ಡಿಕಟ್ಟಲು ಸಾಧ್ಯವಾಗದೇ ಪರದಾಡುತ್ತಿದ್ದಾರೆ. ಕೋಟ್ಯಂತರ ರೂಪಾಯಿ ಬೆಲೆಯ ಭೂಮಿಯನ್ನ ಕೆಲವೇ ಲಕ್ಷ ನೀಡಿ ಸ್ವಾಧೀನದ ನೋಟಿಸ್ ನೀಡಿ ನಾಲ್ಕು ವರ್ಷ ಕಳೆಯುತ್ತಾ ಬಂದಿದೆ. ಪರಿಹಾರ ಬೇಡ, ಸ್ವಾಧೀನವನ್ನೇ ಕೈಬಿಡುವಂತೆ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.
ವಕೀಲ ಸಿ.ಕೆ. ಮಹೇಂದ್ರ ರೈತರ ನಿಯೋಗದ ನೇತೃತ್ವವಹಿಸಿದ್ದರು. ಅಧಿಕಾರಿಗಳು ಯೋಜನೆ ತಾತ್ಕಾಲಿಕವಾಗಿ ನಿಲ್ಲಿಸಿರುವುದಾಗಿ ಪತ್ರ ನೀಡಿದ್ದಾರೆ. ಹೀಗಾಗಿ ಭೂ ಸ್ವಾಧೀನ ರದ್ದುಗೊಳಿಸಬೇಕು. ಭಾರತ ಮಾಲಾ ಯೋಜನೆ ಕೂಡ ಬದಲಾಗಿರುವುದರಿಂದ ಜಾಗ ಬೇಕಿದ್ದರೆ ಹೊಸದಾಗಿ ಅಧಿಸೂಚನೆ ಹೊರಡಿಸುವಂತೆ ಕೇಂದ್ರದ ಮನವರಿಕೆ ಮಾಡಿಕೊಟ್ಟರೆ ರೈತರಿಗೂ ಹೆಚ್ಚು ಪರಿಹಾರ ಸಿಗಲಿದೆ, ಇಲ್ಲದಿದ್ದರೆ ಅನ್ಯಾಯವಾಗಲದೆ ಎಂದು ಸಚಿವರಿಗೆ ತಿಳಿಸಿದರು.
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಮುಂದೆ ಮುಖ ಇಟ್ಟು ಮಾತನಾಡದಂತೆ ಕರ್ನಾಟಕದ ಮಾರ್ಯದೆಯನ್ನು ಕಳೆಯಲಾಗಿದೆ ಎಂದು ಕೇಂದ್ರ ಸಚಿವ ಸೋಮಣ್ಣ ಬೇಸರ ವ್ಯಕ್ತಪಡಿಸಿದರು.
ಸಿದ್ದಗಂಗಾ ಶ್ರೀಗಳೊಂದಿಗೆ ತುಂಬಾ ಬೇಸರಿಕೊಂಡೇ ಮಾತನಾಡಿದ ಸಚಿವರು, ರಾಜ್ಯದ ಹೆದ್ದಾರಿಗಳ ಇಂಚಿಂಚು ಮಾಹಿತಿ ಸಚಿವರಾಧ ಗಡ್ಕರಿಯವರ ಬಳಿ ಇದೆ. ಯಾವ ರೈತರ ಜಾಗ ಎಷ್ಟಿದೆ, ಮಧ್ಯವರ್ತಿಗಳು ಎಷ್ಟು ಜಾಗ ಖರೀದಿಸಿದ್ದಾರೆ ಎಂಬ ಎಲ್ಲಾ ಮಾಹಿತಿ ಅವರಲ್ಲಿದೆ. ಇಲ್ಲಿ ಮಧ್ಯವರ್ತಿಗಳು ರೈತರ ಭೂಮಿಯನ್ನು ಕೆಲವೇ ಲಕ್ಷ ನೀಡಿ ಪತ್ರ ಹಾಕಿಸಿಕೊಂಡಿರುತ್ತಾರೆ. ಖರೀದಿ ಮಾಡಿರುತ್ತಾರೆ. ಹೀಗಾಗಿಯೇ ಹೆದ್ದಾರಿಯ ಬಗ್ಗೆ ಮಾತನಾಡುವುದೆಂದರೆ ದಳ್ಳಾಳಿಗಳ ಪರ ಮಾತನಾಡಿದಂತೆ ಆಗುತ್ತದೆ. ಇದರಿಂದಾಗಿ ಅಲ್ಲಿ ಕರ್ನಾಟಕದವರು ಮುಖಎತ್ತದಂತೆ ಆಗಿದೆ. ಆದರೂ ಶ್ರೀಗಳು ಹೇಳಿರುವುದರಿಂದ ಯೋಜನೆಯ ಬಗ್ಗೆ ಮಾತನಾಡಲು ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವೆ ಎಂದು ಹೇಳಿದರು
ಸಭೆಯಲ್ಲಿ ರೈತ ಮುಖಂಡರಾದ ಉಮೇಶ್ ಕಂಬಾಳು, ಕರಿಮಣ್ಣೆಯ ದೇವಕುಮಾರ್, ಡಾಬಸಪೇಟೆಯ ಗಟ್ಟಿಬೈರಪ್ಪ, ಶಿವಗಂಗೆಯ ಸುರೇಶ್, ಬೆಳಗುಂಬ ನಾಗೇಂದ್ರಕುಮಾರ್, ಪ್ರಕಾಶ್ ರಂಗೇನಹಳ್ಳಿ, ಗುಡೇಮಾರನಹಳ್ಳಿ ಶಿವರುದ್ರಪ್ಪ, ಗುರುಪ್ರಸಾದ್ ಡಾಬಸಪೇಟೆ, ರಮೇಶ್ ಡಾಬಸಪೇಟೆ, ಮಾಗಡಿಯ ಬೋರಯ್ಯ, ಬೀರಗೊಂಡನಹಳ್ಳಿ ನಾರಾಯಣ ಗೌಡ, ಬಿಡದಿಯ ಶ್ರೀಧರ್, ರಾಮನಗರ ಹೇಮಂತಕುಮಾರ್ ಇತರರು ಇದ್ದರು.