ತುರ್ತುಪರಿಸ್ಥಿತಿಯ ಸಮಯದಲ್ಲಿ ಸರ್ಕಾರದ ದಮನದ ವಿರುದ್ಧ ಸಿದ್ದಲಿಂಗಯ್ಯ ನಾನಾ ಕವಿತೆಗಳನ್ನು ರಚಿಸಿದ್ದರು. ಅವರ ಕವಿತೆಗಳು ಇಂದಿಗೂ ಪ್ರಸ್ತುವಾಗಿವೆ. ಬಡವರ ಬಗ್ಗೆ ಕಾವ್ಯ ಬರೆಯುವಾಗ ಯಾವುದೇ ಕವಿಯೂ ಜನಪದರ ಅಂತರ್ಯವನ್ನು ಒಳಗೊಂಡಿರಲಿಲ್ಲ. ಆದ್ರೆ ಸಿದ್ದಲಿಂಗಯ್ಯ ಅವರ ಜನಪದವನ್ನು ಒಳಗೊಂಡು, ವಿಶಿಷ್ಟ ಕಾವ್ಯ ಪ್ರಕಾರವನ್ನು ರಚಿಸಿದರು ಎಂದು ಉಪನ್ಯಾಸಕ ಅರದೇಶಹಳ್ಳಿ ವೆಂಕಟೇಶ್ ಹೇಳಿದರು.
ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರ ಆಯೋಜಿಸಿದ್ದ ಕವಿ ಸಿದ್ದಲಿಂಗಯ್ಯ ಅವರ 7ನೇ ಜನ್ಮದಿನಾಚರಣೆ ಮತ್ತು ಡಾ. ಎಚ್.ಡಿ ಉಮಾಶಂಕರ್ ಸಂಪಾದಿಸಿರುವ ‘ಸುಡುವ ನೆತ್ತಿಯ ಸಿಂಬೆ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಸಿದ್ದಲಿಂಗಯ್ಯ ಅವರು ನೈತಿಕ ಶಕ್ತಿಯ ನೆಲೆಯಲ್ಲಿ ನಿಂತು ಕಾವ್ಯಗಳನ್ನು ಕಟ್ಟಿದರು. ಅವರ ವಿಚಾರಗಳು ನಿತ್ಯವೂ ನೂತನವಾಗಿರುತ್ತವೆ. ‘ನೆಲಕೆ ಕಾಲುಗಳ ಬರವಣಿಗೆ’ ಅನ್ನುವ ಮೂಲಕ ಸರ್ಕಾರ ಹಾಗೂ ಶೋಷಕರ ವಿರುದ್ಧದ ಚಳುವಳಿಯನ್ನು ಬಣ್ಣಿಸಿದ್ದರು. ‘ಇಕ್ಕುರ್ಲಾ, ಒದಿರ್ಲಾ’ ಎನ್ನುವ ಮೂಲಕ ನೇರ ಪ್ರತಿಭಟನೆಯ ಕಾವ್ಯವನ್ನು ರಚಿಸಿದವರಲ್ಲಿ ಸಿದ್ದಲಿಂಗಯ್ಯ ಮೊದಲಿಗರು” ಎಂದರು.
“ಎಲ್ಲ ಭಾಷೆಗಳಿಗೂ ಸಿದ್ದಲಿಂಗಯ್ಯ ಅವರ ಕಾವ್ಯಗಳು ಭಾಷಾಂತರವಾಗಬೇಕು. ಆ ಮೂಲಕ ಕೆಲವೇ ಜನರ ಹಿಡಿತದಲ್ಲಿರುವ ಪ್ರಜಾಪ್ರಭುತ್ವದ ಬಗ್ಗೆ ಜನರಲ್ಲಿಗೆ ಕೊಂಡೊಯ್ಯಬೇಕು. ನೆಲ ಪರಂಪರೆಯನ್ನ ಕಟ್ಟುವ ಹಾದಿಯಲ್ಲಿ ಜನರನ್ನು ಕರೆದೊಯ್ಯಬೇಕು. ಸಮಾಜಕ್ಕೆ ಹೊಸ ಎಚ್ಚರ ಕೊಡಬೇಕು” ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮುನಿರಾಜು, “ಸಿದ್ದಲಿಂಗಯ್ಯ ಮತ್ತು ದಲಿತ ಚಳುವಳಿಯನ್ನು ಬೇರೆ ಬೇರೆಯಾಗಿ ನೋಡಲು ಸಾಧ್ಯವೇ ಇಲ್ಲ. ದಲಿತ ಚಳುವಳಿಗೆ ಅವರ ಕೊಡುಗೆ ಅಪಾರವಾದುದು. ಅವರ ಕವಿತೆ ಹಾಡದೇ, ಚಳುವಳಿ ಪೂರ್ಣಗೊಳ್ಳುತ್ತಿರಲಿಲ್ಲ” ಎಂದರು.
“ಕೋಲಾರ ಜಿಲ್ಲೆಯ ದಲಿತ ಚಳುವಳಿಗೆ ಹೆಚ್ಚು ಕೊಡುಗೆ ನೀಡಿದೆ. ಕಡಗುಂಟೆ ವೆಂಕಟಪ್ಪ ಎಸ್‌ಎಸ್‌ಎಸ್‌ಸಿಯಲ್ಲಿ ಪಾಸಾದನೆಂಬ ಕಾರಣಕ್ಕೆ, ಈಜು ಬಾರದ ಆತನನ್ನು ಕೆರೆಯಲ್ಲಿಈಜುವಂತೆ ಒತ್ತಾಯಿಸಲಾಗಿತ್ತು. ಆತನ ಸಾವನ್ನು ಪ್ರತಿಭಟಿಸಿ,ಕೋಲಾರ ಜಿಲ್ಲೆಯಲ್ಲಿ ದಲಿತ ಚಳುವಳಿ ಹುಟ್ಟಿಕೊಂಡಿತು” ಎಂದು ತಿಳಿಸಿದರು.
“ಕಂಬಾಲಪಲ್ಲಿ ಘಟನೆಯಲ್ಲಿ ಕೋರ್ಟ್‌ಗಳು ನಡೆದುಕೊಂಡ ರೀತಿ, ಸಾಕ್ಷಿಗಳು ಬದಲಾದ ರೀತಿ, ಹೆಸರಿದ ಸಾಕ್ಷಿಗಳು ತಮ್ಮ ಸಾಕ್ಷಿಯನ್ನು ಬದಲಿಸಿದ ರೀತಿ ನಮ್ಮನ್ನು ಕಾಡುತ್ತವೆ. ತಮ್ಮ ಮಕ್ಕಳನ್ನೇ ಕಳೆದುಕೊಂಡವರಿಂದಲೇ ತಿರುಚಿದ ಸಾಕ್ಷಿ ಹೇಳಲಾಯಿತು. ಪ್ರಕರಣದಲ್ಲಿ ನ್ಯಾಯ ದೊರೆಯಲೇ ಇಲ್ಲ. ಆ ಸಂದರ್ಭದಲ್ಲಿ ನಾವೇನು ಮಾಡಲಾಗಲಿಲ್ಲ ಎಂಬ ಕೊರಗು ನಿತ್ಯವೂ ಕಾಡುತ್ತದೆ” ಎಂದು ಬೇಸರ ವ್ಯಕ್ತಪಡಿಸಿದರು.
“ದಲಿತ ಚಳುವಳಿ ಒಡೆಯದಂತೆ, ಅದನ್ನು ಒಗ್ಗೂಡಿಸಲು ಸಿದ್ದಲಿಂಗಯ್ಯ ಅವರು ಬಹಳ ಶ್ರಮಿಸಿದರು. ಆದರೆ, ದಲಿತ ಚಳುವಳಿ ಕವಲು ಹೊಡೆದಿದೆ. ಹೊಲೆಯ-ಮಾದಿಗರು ಒಂದೇ ಎಂದು ಅವರು ಆಗಲೇ ಪ್ರತಿಪಾದಿಸಿ, ತಮ್ಮ ಕವನ ಸಂಕಲನಕ್ಕೆ ‘ಹೊಲೆ ಮಾದಿಗರ ಹಾಡು’ ಎಂಬ ಹೆಸರಿಟ್ಟಿದ್ದರು. ಆದರೆ, ಈಗಲೂ ಈ ಎರಡು ಸಮುದಾಯಗಳು ಏನಾಲ್ಲ ಆಗಿವೆ ಎಂಬುದನ್ನು ನಾವು ನೋಡುತ್ತಿದ್ದೇವೆ” ಎಂದು ತಿಳಿಸಿದರು.
“ದಲಿತ ಚಳುವಳಿ ಇಂದು ಹಾಸ್ಟೆಲ್‌ಗಳಿಂದ ದೂರು ಉಳಿದುಬಿಟ್ಟಿದೆ. ಹಿಂದೆ, ಚಳುವಳಿಗಾರರು ಹಾಸ್ಟೆಲ್‌ಗಳಿಗೆ ಬರುತ್ತಿದ್ದರು. ಅಲ್ಲಿನ ವಿದ್ಯಾರ್ಥಿಗಳಿಗೆ ಹತ್ತಾರು ವಿಚಾರಗಳನ್ನು ತಿಳಿಸುತ್ತಿದ್ದರು. ಆದರೆ, ಇಂದು ಯಾರೊಬ್ಬರ ಹಾಸ್ಟೆಲ್ ವಿದ್ಯಾರ್ಥಿಗಳನ್ನ ಮಾತನಾಡಿಸುತ್ತಿಲ್ಲ. ಅಲ್ಲಿನ ವಿದ್ಯಾರ್ಥಿಗಳಿಗೆ ಚಳುವಳಿಗಳ ಆಶಯಗಳು, ಉದ್ದೇಶಗಳು ಗೊತ್ತಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಸುಡುವ ನೆತ್ತಿಯ ಸಿಂಬೆ’ ಪುಸ್ತಕವನ್ನು ಸಂಪಾದಿಸಿರುವ ಡಾ. ಎಚ್.ಡಿ ಉಮಾಶಂಕರ್ ಮಾತನಾಡಿ, “ಸಿದ್ದಲಿಂಗಯ್ಯ ಅವರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದಾಗ, ಅವರಿಗೆ 10 ಪ್ರಶ್ನೆಗಳನ್ನ ಬರೆದಿದ್ದೆ. ದೇವನೂರು ಬಿಟ್ಟಂತಹ ಅಧ್ಯಕ್ಷತೆಯನ್ನ ಸಿದ್ದಲಿಂಗಯ್ಯ ಅವರು ಒಪ್ಪಿಕೊಂಡಿದ್ದು, ಅಸಮಾಧಾನ ತರಿಸಿತ್ತು. ಆ ಪ್ರಶ್ನೆಗಳನ್ನ ಸಿದ್ದಲಿಂಗಯ್ಯ ಕೇಳಿದ್ದರು” ಎಂದು 81ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭವನ್ನು ನೆನಪಿಸಿಕೊಂಡರು.
“ಅವರು ಇದ್ದಾಗಲೇ ಪುಸ್ತಕ ತರಬೇಕಿತ್ತು. ಆದರೆ, ಈ ಸಂದರ್ಭದಲ್ಲಿ ಅವರಿಲ್ಲದ್ದು ನೋವಿನ ಸಂಗತಿ. ಎಲ್ಲ ರೀತಿಯ ಶಿಕ್ಷಕರು, ಸಮುದಾಯದವರು ಸಿದ್ದಲಿಂಗಯ್ಯಾ ಅವರ ಕುರಿತು ಬರೆದಿದ್ದಾರೆ” ಎಂದು ತಿಳಿಸಿದರು.