ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಮಳವಳ್ಳಿ ಗ್ರಾಮದ ಹೊನ್ನುಕಾರು ಹೋಂ ಸ್ಟೇನಲ್ಲಿ ನಡೆಯುತ್ತಿದ್ದ ಅಕ್ರಮ ಜೂಜಾಟದ ಅಡ್ಡೆಯ ಮೇಲೆ ಶಿರಸಿ ಉಪವಿಭಾಗದ ಪೊಲೀಸರು ಭರ್ಜರಿ ದಾಳಿ ನಡೆಸಿದ್ದು, 57 ಮಂದಿಯನ್ನು ವಶಕ್ಕೆ ಪಡೆದು ಲಕ್ಷಾಂತರ ರೂಪಾಯಿ ಮೌಲ್ಯದ ನಗದು ಹಾಗೂ ಇತರೆ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಜೂನ್ 5ರಂದು ಬೆಳಗಿನ ಜಾವ ಸುಮಾರು 4 ಗಂಟೆಗೆ ಶಿರಸಿ ಉಪವಿಭಾಗದ ಡಿ.ಎಸ್.ಪಿಗೀತಾ ಪಾಟೀಲ್ ಅವರು ಸಿದ್ದಾಪುರ ಪೊಲೀಸ್ ಠಾಣೆಗೆ ಆಗಮಿಸಿ ಸರ್ಕಾರದ ಪರವಾಗಿ ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಸುದ್ದಿ ಓದಿದ್ದೀರಾ ? ಉತ್ತರ ಕನ್ನಡ | ಜೂನ್ 20ರಿಂದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ; 12.30 ಲಕ್ಷ ಮತದಾರರ ವಿವರಗಳ ಮರುಪರಿಶೀಲನೆ
ಪೊಲೀಸರ ದಾಳಿ ವೇಳೆ ಜೂಜಾಟಕ್ಕೆ ಬಳಸಲಾಗುತ್ತಿದ್ದ ₹3,30,694 ನಗದು, ವಿವಿಧ ಬಣ್ಣ ಹಾಗೂ ಮೌಲ್ಯದ 831 ಟೋಕನ್‌ಗಳು, ಅಂದಾಜು ₹47,600 ಮೌಲ್ಯದ 46 ಮೊಬೈಲ್ ಫೋನ್‌ಗಳು, ಇಸ್ಪೀಟ್ ಎಲೆಗಳ ಕಟ್ಟುಗಳು, ಜೂಜಾಟದ ಲೆಕ್ಕಪತ್ರ ಹೊಂದಿದ್ದ ಮೂರು ರಿಜಿಸ್ಟರ್‌ಗಳು ಹಾಗೂ ಸಿಸಿಟಿವಿ ಡಿವಿಆರ್ (DVR) ಅನ್ನು ವಶಪಡಿಸಿಕೊಳ್ಳಲಾಗಿದೆ.
ಈ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 135/2026ರ ಅಡಿಯಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆಯ ಕಲಂ 79 ಮತ್ತು 80ರ ಪ್ರಕಾರ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್. ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ ಅವರ ಮಾರ್ಗದರ್ಶನದಲ್ಲಿ, ಡಿ.ಎಸ್.ಪಿ ಗೀತಾ ಪಾಟೀಲ್ ನೇತೃತ್ವದ ಶಿರಸಿ ಉಪವಿಭಾಗದ ಪೊಲೀಸ್ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ.





