ಉತ್ತರ ಕನ್ನಡ: ಭಾರತದ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆ ಜೂನ್ 20ರಿಂದ ಆರಂಭವಾಗಲಿದ್ದು, ಅಕ್ಟೋಬರ್ 7ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.
ಈ ಪರಿಷ್ಕರಣೆಗೆ 01-10-2026 ಅನ್ನು ಅರ್ಹತಾ ದಿನಾಂಕವಾಗಿ ನಿಗದಿಪಡಿಸಲಾಗಿದೆ. ಜೂನ್ 20ರಿಂದ 29ರವರೆಗೆ ಪೂರ್ವ ತಯಾರಿ, ಸಿಬ್ಬಂದಿ ತರಬೇತಿ ಹಾಗೂ ಅಗತ್ಯ ದಾಖಲೆಗಳ ಮುದ್ರಣ ಕಾರ್ಯ ನಡೆಯಲಿದೆ. ಜೂನ್ 30ರಿಂದ ಜುಲೈ 29ರವರೆಗೆ ಮತಗಟ್ಟೆ ಮಟ್ಟದ ಅಧಿಕಾರಿಗಳು (BLO) ಮನೆ-ಮನೆಗೆ ಭೇಟಿ ನೀಡಿ ಮತದಾರರ ಮಾಹಿತಿಯನ್ನು ಪರಿಶೀಲಿಸಲಿದ್ದಾರೆ.
ಜುಲೈ 29ರಂದು ಮತಗಟ್ಟೆಗಳ ಪುನರ್‌ವಿಂಗಡಣೆ (Rationalization) ಪ್ರಕ್ರಿಯೆ ನಡೆಸಲಾಗುವುದು. ಆಗಸ್ಟ್ 5ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತಿದ್ದು, ಆಗಸ್ಟ್ 5ರಿಂದ ಸೆಪ್ಟೆಂಬರ್ 4ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಯಲ್ಲಾಪುರ | ಸಾತೋಡಿ ಫಾಲ್ಸ್ ಮಾರ್ಗದಲ್ಲಿ ಹುಬ್ಬಳ್ಳಿ ಯುವಕರ ಪುಂಡಾಟ; ಪೋಲಿಸರಿಂದ ಪ್ರಕರಣ ದಾಖಲು
ಆಗಸ್ಟ್ 5ರಿಂದ ಅಕ್ಟೋಬರ್ 3ರವರೆಗೆ ಸಲ್ಲಿಕೆಯಾದ ಅರ್ಜಿಗಳ ವಿಲೇವಾರಿ ನಡೆಸಿ, ಅಕ್ಟೋಬರ್ 7ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು. ಜಿಲ್ಲೆಯಲ್ಲಿ ಈ ಕಾರ್ಯಕ್ಕಾಗಿ 6 ಮತದಾರರ ನೋಂದಣಾಧಿಕಾರಿಗಳು, 12 ಸಹಾಯಕ ಮತದಾರರ ನೋಂದಣಾಧಿಕಾರಿಗಳು, 1,445 ಮತಗಟ್ಟೆ ಮಟ್ಟದ ಅಧಿಕಾರಿಗಳು (BLO) ಹಾಗೂ 144 BLO ಮೇಲ್ವಿಚಾರಕರನ್ನು ನೇಮಿಸಲಾಗಿದೆ.
ಜೊತೆಗೆ ಜಿಲ್ಲಾ, ವಿಧಾನಸಭಾ ಕ್ಷೇತ್ರ ಹಾಗೂ ಹೋಬಳಿ ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನೂ ನಿಯೋಜಿಸಲಾಗಿದೆ. ಜಿಲ್ಲೆಯಲ್ಲಿ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳು ಈಗಾಗಲೇ ಬೂತ್ ಮಟ್ಟದ ಏಜೆಂಟರನ್ನು ನೇಮಕ ಮಾಡಿದ್ದು, ಪ್ರಸ್ತುತ ಜಿಲ್ಲೆಯಲ್ಲಿ ಒಟ್ಟು 12,30,185 ಮತದಾರರಿದ್ದಾರೆ.
ಮತದಾರರ ವಿವರಗಳ ಪರಿಶೀಲನೆ ಮತ್ತು ಹೋಲಿಕೆ ಕಾರ್ಯದಲ್ಲಿ ಶೇ.92.11ರಷ್ಟು ಮ್ಯಾಪಿಂಗ್ ಪೂರ್ಣಗೊಂಡಿದ್ದು, ವಿಶೇಷ ಸಮಗ್ರ ಪರಿಷ್ಕರಣೆ ಆರಂಭವಾಗುವವರೆಗೆ ಈ ಪ್ರಕ್ರಿಯೆ ಮುಂದುವರಿಯಲಿದೆ. ಮನೆ-ಮನೆ ಭೇಟಿ ವೇಳೆ BLOಗಳು ಮತದಾರರಿಗೆ ಎರಡು ಎನ್ಯುಮರೇಷನ್ ಫಾರಂಗಳನ್ನು ವಿತರಿಸಲಿದ್ದಾರೆ.
ಮತದಾರರು ಎರಡೂ ಪ್ರತಿಗಳನ್ನು ಭರ್ತಿ ಮಾಡಿ, ಒಂದು ಪ್ರತಿಯನ್ನು BLOಗೆ ಸಲ್ಲಿಸಿ ಮತ್ತೊಂದು ಪ್ರತಿಯನ್ನು ತಮ್ಮ ಬಳಿಯೇ ಇಟ್ಟುಕೊಳ್ಳಬೇಕು. ಎರಡೂ ಪ್ರತಿಗಳಿಗೆ BLO ಹಾಗೂ ಮತದಾರರು ಅಥವಾ ಅವರ ಕುಟುಂಬದ ಸದಸ್ಯರ ಸಹಿ ಕಡ್ಡಾಯವಾಗಿರುತ್ತದೆ. ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಯಶಸ್ವಿಯಾಗಿ ನಡೆಯಲು ಜಿಲ್ಲೆಯ ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಮನವಿ ಮಾಡಿದ್ದಾರೆ.





