ಜಿಲ್ಲೆಯಲ್ಲಿ ರೈತರು, ಮಠಾಧೀಶರ ಜಮೀನು, ಮಠ ಮಂದಿರ ಆಸ್ತಿ ವಕ್ಫ್ ಹೆಸರಿನಲ್ಲಿ ನಮೂದಿಸಲಾಗುತ್ತಿದ್ದು, ಎಲ್ಲರೂ ಹೊಲ, ಆಸ್ತಿಪಾಸ್ತಿ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಅನ್ಯಾಯದ ವಿರುದ್ಧ ಧ್ವನಿಯೆತ್ತಲು ಡಿ.4ರಂದು ಬೀದರ್‌ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭೇಟಿ ನೀಡುತ್ತಿದ್ದಾರೆ ಎಂದು ಮಾಜಿ ಶಾಸಕ ಪ್ರಕಾಶ ಖಂಡ್ರೆ ತಿಳಿಸಿದರು.
ಭಾಲ್ಕಿ ಪಟ್ಟಣದ ತಾಲೂಕು ಬಿಜೆಪಿ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿ, ʼಜಿಲ್ಲೆಯಲ್ಲಿ ಸುಮಾರು 13 ಸಾವಿರ ಎಕರೆ ಜಮೀನು ವಕ್ಫ್ ಹೆಸರಿನಲ್ಲಿ ನಮೂದಿತ ಆಗಿದೆ. ಪುರಾತನ ಪಾಪನಾಶ, ಬಸವಗಿರಿ ಮುಂತಾದ ಮಠ ಮಂದಿರ ಜಮೀನು ವಕ್ಫ್ ಬೋರ್ಡ್‌ನಲ್ಲಿ ಸೇರ್ಪಡೆ ಮಾಡಲಾಗುತ್ತಿದೆ. ಆದರೆ ಜಿಲ್ಲೆಯ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಪೌರಾಡಳಿತ ಸಚಿವ ರಹೀಂಖಾನ್ ಅವರು ವಕ್ಫ್ ವಿರುದ್ಧ ಧ್ವನಿಯೆತ್ತುತ್ತಿಲ್ಲʼ ಎಂದು ಆರೋಪಿಸಿದರು.
ʼಸಿಎಂ ಸಿದ್ದರಾಮಯ್ಯ, ವಕ್ಫ್ ಸಚಿವ ಜಮೀರ ಅಹ್ಮದ್ ಸೇರಿ ಕಾಂಗ್ರೆಸ್ ಸರಕಾರ ಕೇವಲ ಒಂದು ಸಮುದಾಯವನ್ನು ಒಲೈಸುವ ಪ್ರಯತ್ನ ಮಾಡುತ್ತಿದೆ. ಇದನ್ನು ವಿರೋಧಿಸಿ ಬಿಜೆಪಿ ರಾಜ್ಯಾದ್ಯಂತ ಹೋರಾಟ ನಡೆಸುತ್ತಿದೆ. ಇದೇ ವಿಚಾರವಾಗಿ ರೈತರು, ಮಠಾಧೀಶರನ್ನು ಮಾತನಾಡಿಸಿ, ಧೈರ್ಯ ತುಂಬಲು ಬೀದರ್ ಜಿಲ್ಲೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭೇಟಿ ನೀಡುತ್ತಿದ್ದಾರೆʼ ಎಂದರು.
ʼನಾಳೆ ಬೆಳಿಗ್ಗೆ 11ಕ್ಕೆ ಗಾಂಧಿ ಗಂಜ್‌ನ ಬಸವೇಶ್ವರ ದೇವಸ್ಥಾನದಲ್ಲಿ ಬಿ.ವೈ.ವಿಜಯೇಂದ್ರ ಅವರ ನೇತೃತ್ವದಲ್ಲಿ ಪೂಜೆ ಸಲ್ಲಿಸಿ ನಗರದ ವಿವಿಧ ವೃತ್ತಗಳ ಮೂಲಕ ಪಾದಯಾತ್ರೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿನ ವಕ್ಫ್ ಬೋರ್ಡ್‌ಗೆ ಮುತ್ತಿಗೆ ಹಾಕಲಾಗುತ್ತಿದೆ. ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು, ರೈತರು, ಮಠಾಧೀಶರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಹೋರಾಟವನ್ನು ಯಶಸ್ವಿಗೊಳಿಸಬೇಕುʼ ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಬಾಲಕಿ ಮೇಲೆ ಅತ್ಯಾಚಾರ; ಶಾಲಾ ಶಿಕ್ಷಕ ಹಾಜಿಮಲಂಗ ಗಿಣಿಯಾರ ಬಂಧನ
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕಿರಣ ಪಾಟೀಲ್, ಜಿಪಂ ಮಾಜಿ ಸದಸ್ಯ ವೆಂಕಟ ಬಿರಾದಾರ್, ತಾಲೂಕು ಬಿಜೆಪಿ ಅಧ್ಯಕ್ಷ ವೀರಣ್ಣ ಕಾರಬಾರಿ, ಪಂಡರಿ ಮೇತ್ರೆ, ವೆಂಕಟ ಲಾಳೆ, ಜೈಭೀಮ ಇದ್ದರು.