ಈ ಬಾರಿಯ ಬಸವ ಜಯಂತಿಯ ಭವ್ಯ ಆಚರಣೆಗೆ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ. ಏಪ್ರಿಲ್ 30 ರಂದು ಬೆಳಗ್ಗೆ 10 ಗಂಟೆಗೆ ಸಿಂದಗಿ ನಗರದ ಬಸವೇಶ್ವರ ವೃತ್ತದಲ್ಲಿ ಸಾರಂಗಮಠದ ಡಾ. ಪ್ರಭು ಸಾರಂಗ ದೇವ ಶಿವಾಚಾರ್ಯರ ಸಾನಿಧ್ಯದಲ್ಲಿ ಧ್ವಜಾರೋಹಣ ನಡೆಯಲಿದೆ ಎಂದು ಸಿಂದಗಿ ಶಾಸಕ ಅಶೋಕ್ ಮನಗೂಳಿ ಮಾಹಿತಿ ನೀಡಿದ್ದಾರೆ.
ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಬಸವ ಮಂಟಪದಲ್ಲಿ ಬಸವ ಜಯಂತಿ ಪ್ರಯುಕ್ತ ಹಮ್ಮಿಕೊಂಡ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, “ಧ್ವಜಾರೋಹಣದ ಬಳಿಕ, ಬಸವೇಶ್ವರ ವೃತ್ತದಿಂದ ಭವ್ಯ ಮೆರವಣಿಗೆ ಆರಂಭವಾಗಲಿದೆ. ಈ ಮೆರವಣಿಗೆ ಸ್ವಾಮಿ ವಿವೇಕಾನಂದ ವೃತ್ತ, ಟಿಪ್ಪು ಸುಲ್ತಾನ್ ವೃತ್ತ, ಡಾ. ಬಿ. ಆರ್. ಅಂಬೇಡ್ಕರ್ ವೃತ್ತ ಮತ್ತು ಅಂಬಿಗರ ಚೌಡಯ್ಯ ವೃತ್ತಗಳ ಮೂಲಕ ಸಾಗುತ್ತಾ, ಬಸವ ಮಂಟಪದಲ್ಲಿ ಸಮಾಪ್ತಿಯಾಗಲಿದೆ. ಮೆರವಣಿಗೆ ನಂತರ, ಸಾಯಂಕಾಲ ಬಸವ ಮಂಟಪದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬಸವ ತತ್ವಗಳ ಕುರಿತು ಉಪನ್ಯಾಸಗಳು ಮತ್ತು ಸ್ಮರಣಾರ್ಥ ಉತ್ಸವಗಳನ್ನೂ ಆಯೋಜಿಸಲಾಗಿದೆ” ಎಂದು ತಿಳಿಸಿದ್ದಾರೆ.
“ಕಾರ್ಯಕ್ರಮಕ್ಕೆ ಆಗಮಿಸುವ ಜನರಿಗೆ ನೀರು ಮತ್ತು ಉಪಹಾರದ ವ್ಯವಸ್ಥೆ ಮಾಡಲಾಗುತ್ತದೆ. ಸಕಲ ರಾಜ್ಯ ವೈಭವಗಳೊಂದಿಗೆ ಹಾಗೂ ವಿವಿಧ ಕಲಾ ತಂಡಗಳೊಂದಿಗೆ ಭವ್ಯ ಮೆರವಣಿಗೆ ಜರುಗಲಿದೆ. ಎಲ್ಲ ಸಮಾಜದ ಬಾಂಧವರು ಬಸವ ಜಯಂತಿಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು” ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ:ವಿಜಯಪುರ | ನರ್ಸಿಂಗ್ ವಿದ್ಯಾರ್ಥಿಗಳಿಂದ ಹಣ ವಸೂಲಿ; ಕ್ರಮಕ್ಕೆ ಒತ್ತಾಯ
ಈ ವೇಳೆ ಬಸವದಳದ ಅಧ್ಯಕ್ಷ ಮಲ್ಲಿಕಾರ್ಜುನ ಅರ್ಜುನಗಿ, ಗುರುಪಾದ ತಾರಾಪುರ, ಶಿವಾನಂದ ಕಲಬುರಗಿ, ವಿಶ್ವನಾಥ ಜೋಗುರ, ಮುತ್ತು ಮುಂಡೆವಾಡಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರಿ, ಆರ್ ಡಿ ದೇಸಾಯಿ, ಎಂಎಂ ಹಂಗರಗಿ, ಬಸವರಾಜ ಗೊಗ್ಗರಿ, ಆರ್ ಆರ್ ಪಾಟೀಲ, ಡಾ. ಮಹಾಂತೇಶ್ ಹಿರೇಮಠ, ರಾಜು ನರಗೋಧಿ, ಶರಣು ಲಂಗೋಟಿ, ಸಂಗನಗೌಡ ಪಾಟೀಲ ಅಗಸಬಾಳ, ಮಲ್ಲನಗೌಡ ಪಾಟೀಲ ಇಬ್ರಾಹಿಂಪುರ, ಶಿವಾನಂದ್ ಬಡಾನೂರ, ಅಂಬರೀಶ ಚೌಗಲೆ, ಸಾಯಬಣ್ಣ ಪುರದಳ, ಶೈಲಜಾ ಸ್ಥಾವರ ಮಠ, ಅನುಸೂಯ ಪರಗೊಂಡ, ಶಾಂತು ರಾಣ ಗೋಳ ಸೇರಿದಂತೆ ಸಾರ್ವಜನಿಕರು ಬಸವ ಅಭಿಮಾನಿಗಳು ಇದ್ದರು.