ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಇಜೆ ಹೊಸಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹನುಮನಗರ ಕ್ಯಾಂಪ್‌ನಲ್ಲಿ ಕುಡಿಯುವ ನೀರಿನ ಹಕ್ಕು ಇನ್ನೂ ಹತ್ತಿರ ಸುಳಿಯದ ಕನಸಾಗಿಯೇ ಇದೆ. ಇಲ್ಲಿನ ನಿವಾಸಿಗಳಿಗೆ ಗ್ರಾಮಕ್ಕೆ ನೇರವಾಗಿ ನೀರು ಸರಬರಾಜು ಆಗದಿರುವ ಕಾರಣ, ಸುಮಾರು 2 ಕಿಲೋ ಮೀಟರ್ ದೂರದ ಪಕ್ಕದ ಗ್ರಾಮಕ್ಕೆ ನಡೆದೇ ಹೋಗಿ ನೀರು ತರುತ್ತಿರುವುದು ದಿನನಿತ್ಯದ ಸಂಕಷ್ಟವಾಗಿದೆ.
ಈ ಊರಿನ ಜನರ ಸಮಸ್ಯೆ ಕೇಳುವವರು ಒಬ್ಬರೂ ಇಲ್ಲ. ಪ್ರತಿ ದಿನ ನಾವು ಪೈಪೋಟಿಗೆ ಬಿದ್ದು ನೀರು ತರುವ ಪರಿಸ್ಥಿತಿಯಲ್ಲಿದ್ದೇವೆ. ಇಲ್ಲದಿದ್ದರೆ ಕೇವಲ ಕೆರೆಯ ನೀರನ್ನು ಕುಡಿದು ಬದುಕಬೇಕಾಗಿದೆ ಎನ್ನುತ್ತಾರೆ ಸ್ಥಳೀಯರು. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಲ್ಲಿ ಹತ್ತಾರು ಸರ್ಕಾರಗಳ ಬದಲಾವಣೆಯಾದರೂ ಈ ಊರಿನಲ್ಲಿ ನೀರಿಗಾಗಿ ನಡೆಸುವ ಹೋರಾಟಕ್ಕೆ ಇನ್ನೂ ಮುಕ್ತಿ ಸಿಗದಾಗಿದೆ. ಹನುಮನಗರದಲ್ಲಿ ನೀರಿನ ಮೂಲಸೌಕರ್ಯದ ಕೊರತೆ ಮಾತ್ರವಲ್ಲ, ಆಡಳಿತದ ನಿರ್ಲಕ್ಷ್ಯವೂ ಕಡಿಮೆ ಇಲ್ಲ.
ಗ್ರಾಮದಲ್ಲಿ 50ಕ್ಕೂ ಹೆಚ್ಚು ಬಡ ಕುಟುಂಬಗಳಿವೆ. ಮನೆ ಮನೆಗೂ ಜಲ ಜೀವನ್ ಮಿಷನ್ ಯೋಜನೆಯಡಿ ನಲ್ಲಿ ಅಳವಡಿಸಿದ್ದರೂ ಒಂದು ಹನಿಯೂ ಕೂಡ ಬಾರದೆ ಗ್ರಾಮದ ಹೊರವಲಯದಲ್ಲಿ ಕೆರೆಗೆ ಹೋಗಿ ನೀರು ತರುವ ಪರಿಸ್ಥಿತಿ ಉದ್ಭವವಾಗಿದೆ.

ದಶಕಗಳ ಹಿಂದೆ ನಿರ್ಮಿಸಿರುವ ಎರಡು ಕುಡಿಯುವ ನೀರಿನ ಟ್ಯಾಂಕ್‌ಗಳು ಸರಿಯಾದ ಪೈಪ್‌ಲೈನ್ ವ್ಯವಸ್ಥೆ ಇಲ್ಲದೆ ನಿರುಪಯುಕ್ತವಾಗಿವೆ. ಗ್ರಾಮಸ್ಥರು ನೀರಿಗಾಗಿ ಮೈಲುಗಟ್ಟಲೇ ದೂರ ಸಾಗುವ ಅನಿವಾರ್ಯತೆ ಎದುರಾಗಿದೆ. ಹೀಗೆ ದೂರ ಸಾಗಿದರೂ ಸಹ ಸರಿಯಾಗಿ ನೀರು ಸಿಗದೆ ಗ್ರಾಮದಲ್ಲಿ ಜನರು ಮತ್ತು ಜಾನುವಾರುಗಳು ಕಂಗಾಲಾಗಿವೆ.
ಜನಪ್ರತಿನಿಧಿಗಳು, ಅಧಿಕಾರಿಗಳು ಮಾತ್ರ ಇದಕ್ಕೆ ತಲೆಕೆಡಿಸಿಕೊಂಡಿಲ್ಲ. ಇದು ಗ್ರಾಮಸ್ಥರ ಅಸಹನೆ ಜತೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಗ್ರಾಮದಲ್ಲಿ ಒಂದು ಕೆರೆ ಇದೆ. ಕೆರೆಯಲ್ಲಿ ನಾಯಿ, ಜಾನುವಾರುಗಳು ಸತ್ತು ಬಿದ್ದರೂ ಹಾಗೆಯೇ ನೀರು ಸೇವಿಸುತ್ತಾರೆ. ಕೆರೆಯ ನೀರು ಕಲುಷಿತವಾಗಿದ್ದು, ಕುಡಿಯಲು ಯೋಗ್ಯವಾಗಿಲ್ಲ ಅಂತಾರೆ ಸ್ಥಳೀಯರು. ಇನ್ನಾದರೂ ಜಿಲ್ಲಾಡಳಿತ ಹಾಗೂ ಸ್ಥಳೀಯ ಆಡಳಿತ ಮಂಡಳಿ ಎಚ್ಚೆತ್ತು ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಈ ಬಗ್ಗೆ ಸ್ಥಳೀಯ ನಿವಾಸಿ ದುರುಗೇಶ್ ಮಾತನಾಡಿ, “ನನಗೀಗ 36 ವರ್ಷ. ನನಗೆ ಬುದ್ಧಿ ಬಂದಾಗಿಂದಲೂ ಗ್ರಾಮಕ್ಕೆ ಸರಿಯಾದ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಗ್ರಾಮದ ಹೊರಗಡೆ ಇರುವ ಕೆರೆಗೆ ಇಡೀ ಗ್ರಾಮವೇ ಹೋಗಿ ನೀರು ತುಂಬಿಕೊಂಡು ಕುಡಿಯುವುದಕ್ಕೆ ಬಳಸುತ್ತಾರೆ. ಈ ನೀರು ಕುಡಿಯುವುದರಿಂದ ಹುಟ್ಟಿದ ಮಕ್ಕಳು ವಾಂತಿ ಭೇದಿಯಾಗಿ ಸಾವನ್ನಪ್ಪುತ್ತಿದ್ದಾರೆ. ವೈದ್ಯರು ಕೂಡ ಈ ನೀರು ನೋಡಿ ಕುಡಿಯುವುದಕ್ಕೆ ಯೋಗ್ಯ ಇಲ್ಲ ಎಂದು ಹೇಳಿದ್ದಾರೆ. ಅನಿವಾರ್ಯವಾಗಿ ಕೆರೆಯ ನೀರನ್ನೇ ಕುಡಿಯಬೇಕಿದೆ. ಇಲ್ಲದಿದ್ದರೆ ನೀರಿಲ್ಲದೆ ಸಾಯಬೇಕಾಗುತ್ತದೆ. ಚುನಾವಣೆ ಬಂದಾಗ ಮತ ಕೇಳಲು ಮನೆಗೆ ಬರುತ್ತಾರೆ. ಚುನಾವಣೆ ಮುಗಿದ ಮೇಲೆ ಈ ಕಡೆ ಬರುವುದೇ ಇಲ್ಲ. ಕುಡಿಯುವ ನೀರಿಗಾಗಿ ವಾಟರ್ ಬಾಟಲ್ ಬಳಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ಕಷ್ಟ ಕೇಳುವವರು ಯಾರೂ ಇಲ್ಲ” ಎಂದು ಅಳಲು ತೋಡಿಕೊಂಡರು.
ಗ್ರಾಮದ ನಿಂಗಮ್ಮ ಮಾತನಾಡಿ, “ಸುಮಾರು 50 ವರ್ಷಗಳಿಂದ ನೀರಿಗೆ ಹಾಹಾಕಾರ ಉಂಟಾಗಿದ್ದು, ಇಲ್ಲಿನ ಜನರು ಕೆರೆ-ಕಟ್ಟೆಗಳಿಂದ ಕಲುಷಿತ ನೀರು ತಂದು ಕುಡಿಯುವ ಪರಿಸ್ಥಿತಿ ತಲೆದೋರಿದೆ. ಕಲುಷಿತ ನೀರು ಸೇವನೆಯಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಕಾಡುತ್ತಿದೆ. ಆದರೆ, ಇದೇ ನೀರನ್ನೇ ಜನರು ವಿಧಿಯಲ್ಲದೇ ಬಳಸುವಂತಾಗಿದೆ. ಇಲ್ಲಿನ ಜನರು ಕುಡಿಯುವ ನೀರಿಗಾಗಿ ಒಂದೂವರೆ ಕಿಲೋ ಮೀಟರ್ ಹೊಸಳ್ಳಿಗೆ ತಲುಪಿ ದೂರದಿಂದ ಹೊತ್ತು ತರಬೇಕಿದೆ. ಗ್ರಾಮಕ್ಕೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುವುದು ಅನಿವಾರ್ಯವಾಗಿದ್ದರೂ ಸಹ ಪಂಚಾಯಿತಿಯಲ್ಲಿ ಹಣದ ಸಮಸ್ಯೆಯಿಂದ ಟ್ಯಾಂಕರ್ ನೀರು ಸರಬರಾಜು ಆಗದೆ ಜನರು ಪರದಾಡುವಂತಾಗಿದೆ” ಎಂದರು.

ಗ್ರಾಮಕ್ಕೆ ಅಕ್ಕಪಕ್ಕದ ಜಮೀನು ಮಾಲಿಕರಿಂದ ನೀರು ತರಿಸಬೇಕಿದೆ. ಹಗಲಿನ ವೇಳೆ ನೀರು ತರಲು ಹೋದರೆ ಕೂಲಿಯಿಲ್ಲ, ಕೂಲಿಗೆ ಹೋದರೆ ನೀರಿಲ್ಲ ಎನ್ನುವಂತಾಗಿದೆ. ಬೇಸಿಗೆ, ಚಳಿ, ಮಳೆ ಸಮಯದಲ್ಲೂ ಸಮಸ್ಯೆ ಮಿತಿಮೀರಿದ್ದು, ಮುಂದೆ ಬರುವ ಮಕ್ಕಳು ಈ ಪರಿಸ್ಥಿತಿಯನ್ನು ಹೇಗೆ ಎದುರಿಸುವುದು ಎನ್ನುವ ಆತಂಕ ಇಲ್ಲಿನ ನಿವಾಸಿಗಳಲ್ಲಿ ಮನೆ ಮಾಡಿದೆ.
ಮತ್ತೊಬ್ಬ ಗ್ರಾಮದ ನಿವಾಸಿ ಹಂಪಮ್ಮ ಮಾತನಾಡಿ, “ನೀರಿನ ಸಮಸ್ಯೆ ಕುರಿತು ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಚುನಾವಣೆ ಸಂದರ್ಭದಲ್ಲಿ ಮಾತ್ರ ಜನಪ್ರತಿನಿಧಿಗಳು ಆಗಮಿಸಿ ಮತ ಕೇಳುತ್ತಾರೆ. ನಂತರ ಇತ್ತ ಸುಳಿಯುವುದು ಇಲ್ಲ. ನಮ್ಮ ಸಮಸ್ಯೆ ಆಲಿಸುವುದಿಲ್ಲ. ಇಷ್ಟೆಲ್ಲ ಮಾಡುವ ಬದಲು ವಿಷ ಕೊಟ್ಟು ಬಿಡಿ ಎಲ್ಲರೂ ಸತ್ತು ಹೋಗುತ್ತೇವೆ” ಎಂದರು ವಿಷಾದದಿಂದ.

ಇದನ್ನೂ ಓದಿ: ರಾಯಚೂರು | ಬೆಳೆ ಪರಿಹಾರ ಸೇರಿ ವಿವಿಧ ಬೇಡಿಕೆಗೆ ಹೆದ್ದಾರಿ ತಡೆದು ರೈತರ ಪ್ರತಿಭಟನೆ
ಹಳ್ಳಿಯಲ್ಲಿ ನೀರಿನ ಹೋರಾಟ ಕೇವಲ ದೈನಂದಿನ ಅವಶ್ಯಕತೆಗಾಗಿ ನಡೆಯುತ್ತಿರುವ ಸಂಘರ್ಷವಲ್ಲ; ಇದು ಒಟ್ಟು ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯ ಮತ್ತು ಗ್ರಾಮೀಣ ಬದುಕಿನ ಅಗತ್ಯಗಳಿಗೆ ತೋರಿಸುತ್ತಿರುವ ಅಸಡ್ಡೆಯಾಗಿದೆ. ಐದು ದಶಕಗಳಿಂದ ಈ ಸಮಸ್ಯೆ ಎದುರಿಸುತ್ತಿರುವ ಹನುಮನಗರದ ಜನರಿಗೆ ಪೂರಕ ನೀರು ಸಿಗದಿರುವುದು ಭಾರತೀಯ ಪ್ರಜಾಪ್ರಭುತ್ವದ ಘೋಷಿತ ಗುರಿಗಳ ವಿರುದ್ಧದ ಜೀವಂತ ಪ್ರಶ್ನೆಯಾಗಿದೆ.
ಸದ್ಯ ಈ ಪರಿಸ್ಥಿತಿಯನ್ನು ಜನಪ್ರತಿನಿಧಿಗಳು ಕೈಗೆತ್ತಿಕೊಳ್ಳಲೇಬೇಕು. ಇಲ್ಲದಿದ್ದರೆ “ಸರ್ವರಿಗೂ ಮೂಲಭೂತ ಸೌಕರ್ಯ” ಎಂಬ ಘೋಷಣೆಗಳು ಕಾಗದದ ಮಾತುಗಳಾಗಿಯೇ ಉಳಿಯುತ್ತವೆ. ಅಧಿಕಾರಿಗಳು, ಪ್ರತಿನಿಧಿಗಳು ಮತ್ತು ಸಾರ್ವಜನಿಕ ನೀತಿ ರೂಪಿಸುವವರು ಹನುಮನಗರದ ನೀರಿನ ಸಮಸ್ಯೆ ಕಡೆ ನೋಡಬೇಕು.

ರಫಿ ಗುರುಗುಂಟ
ಗುಲಬರ್ಗಾ ವಿವಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ, ಕಲ್ಯಾಣ ಕರ್ನಾಟಕ ವಲಯ ಕೋರ್ಡಿನೇಟರ್